ಬೇರೆಯವರಿಗಾಗಿ ಹಾಡುವುದು ನಿಲ್ಲಿಸಿದ ಮಹಾನ್ ಗಾಯಕ
ಅನಿಲ್ ಬಿಸ್ವಾಸ್ ಭಾರತೀಯ ಚಲನಚಿತ್ರ ಜಗತ್ತಿನಲ್ಲಿ ಮರೆಯಲಾಗದ ಪ್ರತಿಭೆ. ಗುಂಗು ಹಿಡಿಸುವ ಹಾಡುಗಳಿಗೆ ಪ್ರಸಿದ್ಧರಾಗಿದ್ದ ಬಿಸ್ವಾಸ್ ನೂರಾರು ಮಧುರ ಹಾಡುಗಳಿಗೆ ಸಂಗೀತ ನೀಡಿ ಅವಿಸ್ಮರಣೀಯರಾಗಿದ್ದಾರೆ. ಬಂಗಾಳದ ಕಡುಬಡ ಕುಟುಂಬದಲ್ಲಿ ಜನಿಸಿದ ಅವರು ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವಿರಿಸಿಕೊಂಡಿದ್ದರು. ಉತ್ತಮ ಗಾಯಕಿಯಾಗಿದ್ದ ಅವರ ತಾಯಿಯೇ ಅವರಿಗೆ ಸ್ಫೂರ್ತಿಯಾಗಿದ್ದರು. ತಮ್ಮ ನಾಲ್ಕನೇ ವರ್ಷಕ್ಕೆ ವೇದಿಕೆಯೇರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು ಅನಿಲ್. ಇಂತಹ ಪ್ರತಿಭಾಶಾಲಿ ತನ್ನ ಯೌವನಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸೆರೆಮನೆವಾಸವನ್ನೂ ಅನುಭವಿಸಿದರು. ನಾಟಕಗಳಲ್ಲಿ ಅಭಿನಯಿಸಿ, ಕವನಗಳನ್ನು ರಚಿಸಿ ಪ್ರಸಿದ್ಧರಾಗಿದ್ದರು. ಕೆಲ ಸಮಯ ಕೂಲಿ ಕೆಲಸ ಮಾಡಿ ಸಹ ಜೀವನ ಮಾಡಿದರು. ಮೆಗಾಫೋನ್, ಗ್ರಾಮಫೋನ್ ಕಂಪನಿಯ ಪ್ರೋತ್ಸಾಹದಿಂದ ಅವರ ಸಂಗೀತ ಮನೆಮಾತಾಯಿತು. ನಂತರ ರಂಗಮಂಚ್ನಲ್ಲಿ ನಾಟಕಗಳಿಗೆ ಸಂಗೀತ ನೀಡುವ ಕೆಲಸ ದೊರೆಯಿತು. ನಂತರ ಮುಂಬೈನ ಮಾಯಾನಗರಿಗೆ ಆಗಮಿಸಿ, ಅಲ್ಲಿ ಅನೇಕ ಚಲನಚಿತ್ರಗಳಿಗೆ ಸಂಗೀತ ನೀಡಿ, ಸ್ವತಃ ಹಾಡಿ ಪ್ರಖ್ಯಾತರಾದರು. ತಲತ್ ಮಹಮೂದ್, ಲತಾ ಮಂಗೇಶ್ಕರ್ ಮುಂತಾದವರಿಗೆ ಹಾಡಲು ಪ್ರೋತ್ಸಾಹಿಸಿದರು. ತಮ್ಮ ಚಿತ್ರ 'ಪೆಹಲಿ ನಜರನಲ್ಲಿ' ಮುಖೇಶ್ಗೆ ಅವಕಾಶ ಕಲ್ಪಿಸಿಕೊಟ್ಟು ಅವರು ಆ ಚಿತ್ರದಿಂದಲೇ ಪ್ರಸಿದ್ಧಿ ಪಡೆಯುವುದಕ್ಕೆ ಅವಕಾಶ ಮಾಡಿಕೊಟ್ಟರು. ಹಿಂದೆ ಒಂದೇ ಹಾಡು ಹಲವೆಡೆಗಳಲ್ಲಿ ಹಲವು ಬಾರಿ ಚಿತ್ರೀಕರಣಗೊಳ್ಳುತ್ತಿತ್ತು. ಗಾಯಕರಾದವರು ಒಂದೇ ಹಾಡನ್ನು ಹಲವುಬಾರಿ ಹಾಡಬೇಕಾದಾಗ ಹಾಡಿನ ಅಂತರಗಳು ಬದಲಾಗುತ್ತಿದ್ದವು. ಆ ತೊಂದರೆಯನ್ನು ತಪ್ಪಿಸಲು ಸ್ವತಃ ಬಿಸ್ವಾಸ್ ಅವರೇ ಹಾಡಲಾರಂಭಿಸಿದರು. ಅವು ಯಶಸ್ವಿಯಾದವು ಸಹ. ಇದರಿಂದ ಅವಕಾಶವಂಚಿತ ಗಾಯಕರೆಲ್ಲಾ ಬಿಸ್ವಾಸ್ ಅವರ ಬಳಿ ಬಂದು, ಎಲ್ಲ ಹಾಡುಗಳನ್ನೂ ಬಿಸ್ವಾಸ್ ಅವರೇ ಹಾಡಿದರೆ, ತಾವೆಲ್ಲಾ ನಿರುದ್ಯೋಗಿಗಳಾಗುವ ಆತಂಕವನ್ನು ವ್ಯಕ್ತಪಡಿಸಿದರು. ಅವರ ಮನಸ್ಸಿನ ತೊಳಲಾಟವನ್ನು ಅರ್ಥಮಾಡಿಕೊಂಡ ಅನಿಲ್ ಬಿಸ್ವಾಸ್ ಅಂದಿನಿಂದ ಚಲನ ಚಿತ್ರಗಳಲ್ಲಿ ಹಾಡುವುದನ್ನು ನಿಲ್ಲಿಸಿ, ಅಭಿನಯಕ್ಕೆ ಮತ್ತು ಸಂಗೀತ ನಿರ್ದೇಶನಕ್ಕೆ ಮಾತ್ರ ತೊಡಗಿಸಿಕೊಂಡರು. ಹೀಗೆ ತಮ್ಮಿಂದ ಗಾಯಕರು ತೊಂದರೆ ಅನುಭವಿಸುವುದು ಅವರಿಗೆ ಇಷ್ಟವಿರಲಿಲ್ಲ. ಇದು ಅವರ ಸೂಕ್ಷ್ಮ ಮನೋಭಾವಕ್ಕೆ ಹಿಡಿದ ಕೈಗನ್ನಡಿ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

