ಸಂಪಾದಕೀಯ

ಅಪ್ಪ ನಾನು ಬಂಗಲೆಯನ್ನು ಖರೀದಿಸುತ್ತೇನೆ!

Published On :

ಇಂಗ್ಲೆಂಡಿನ ಒಬ್ಬ ಪುಟ್ಟ ಬಾಲಕ ತನ್ನ ಶಾಲೆಗೆ ಹೋಗುವ ದಾರಿಯಲ್ಲಿ ಸಿಗುತ್ತಿದ್ದ ಅರಮನೆಯಂತಹ ಬಂಗಲೆಯ ಮುಂದೆ ನಿಂತು ತನ್ನ ಅಪ್ಪನಿಗೆ ಹೀಗೆ ಹೇಳುತ್ತಿದ್ದ, 'ಅಪ್ಪಾ, ನಾನೊಂದು ದಿನ ಇದೇ ಮನೆಯಲ್ಲಿ ವಾಸಮಾಡುತ್ತೇನೆ'. ಬಡ ಕೂಲಿಕಾರನಾಗಿದ್ದ ಅಪ್ಪ ಮಗನ ಮಾತಿಗೆ ನಕ್ಕು ಮುಂದೆ ಸಾಗುತ್ತಿದ್ದ. ಇದು ಪ್ರತಿದಿನ ಹೀಗೇ ಸಾಗುತ್ತಿತ್ತು. ಬಾಲಕ ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಸಾಲ ತೀರಿಸಲಾಗದೆ ಆತನ ತಂದೆ ಜೈಲು ಸೇರಿದ. ತಾಯಿ ಬೇರೆ ಯಾರನ್ನೋ ವಿವಾಹವಾಗಿ ಮಗನನ್ನು ಪರಿತ್ಯಜಿಸಿ ಹೋಗಿಬಿಟ್ಟಳು. ಅನಾಥನಾದ ಆ ಬಾಲಕ ವಿದ್ಯಾಭ್ಯಾಸಕ್ಕೆ ಗುಡ್ಬೈ ಹೇಳಿ ಶೂ ಪಾಲಿಷ್ ಕಾರ್ಖಾನೆಯೊಂದರಲ್ಲಿ ಲೇಬಲ್ ಹಚ್ಚುವ ಕೆಲಸಕ್ಕೆ ಸೇರಿಕೊಂಡ. ತನ್ನ ಬಿಡುವಿನ ವೇಳೆಯಲ್ಲಿ ಅಲ್ಲಿಯೇ ಸಮೀಪದಲ್ಲಿದ್ದ ಹಳೆ ಪುಸ್ತಕದ ಅಂಗಡಿಗೆ ಹೋಗಿ ಪುಸ್ತಕಗಳನ್ನು ಎರವಲಾಗಿ ಪಡೆದು ಓದಲು ಪ್ರಾರಂಭಿಸಿದ. ಕ್ರಮೇಣ ಓದಿನಲ್ಲಿ ಅವನಿಗೆ ಅಭಿರುಚಿ ಹೆಚ್ಚಿತು. ತಾನೂ ಏಕೆ ಬರೆಯಬಾರದು ಎಂದಾಲೋಚಿಸಿ ಪತ್ರಿಕೆಗಳಿಗೆ ಕಥೆ ಬರೆದು ಕಳುಹಿಸಲಾರಂಭಿಸಿದ. ಆದರೆ ಅವೆಲ್ಲವೂ ಕಸದ ಬುಟ್ಟಿಯ ಪಾಲಾದವು. ಆದರೂ ಅವನು ತನ್ನ ಪ್ರಯತ್ನ ಬಿಡಲಿಲ್ಲ. ಮತ್ತೆ ಮತ್ತೆ ಬರೆದು ಕಳುಹಿಸಲು ಉಪಕ್ರಮಿಸಿದ. ಕೊನೆಗೊಂದು ಪತ್ರಿಕೆ ಅವನ ಒಂದು ಕಥೆಯನ್ನು ಪ್ರಕಟಿಸಿತು. ಆ ಕಥೆ ತುಂಬಾ ಸ್ವಾರಸ್ಯಕರವಾಗಿದ್ದರಿಂದ ಜನರ ಗಮನ ಸೆಳೆಯಿತು. ಹೆಚ್ಚು ಹೆಚ್ಚು ಜನ ಅದನ್ನು ಓದಿ ತಮ್ಮ ಮೆಚ್ಚುಗೆಯ ಮಾತುಗಳನ್ನು ತಿಳಿಸಿದರು. ಅಂದಿನಿಂದ ಅವನ ಅನೇಕ ಕಥೆಗಳು ಪ್ರಕಟವಾಗಿ ಅವನ ಹೆಸರು ಜನಪ್ರಿಯವಾಯಿತು. ಇದರಿಂದ ಉತ್ತೇಜಿತನಾದ ಆ ಬಾಲಕ ಮುಂದೊಂದು ದಿನ ಒಂದು ಬೃಹತ್ ಕೃತಿಯನ್ನು 1836 ರಲ್ಲಿ ಪ್ರಕಟಿಸಿದ. 'ಪಿಕ್ ವಿಕ್ ಪೇಪರ್ಸ್‌' ಎಂಬ ಆ ಕೃತಿ ಮಾರಾಟದಲ್ಲಿ ದಾಖಲೆ ನಿರ್ಮಿಸಿತು. ಅದರ ಮಾರಾಟದಿಂದ ಬಂದ ಹಣದಿಂದ ಅವನು ತಾನು ವಾಸಿಸಬೇಕೆಂದು ಪ್ರತಿದಿನ ಕನಸು ಕಾಣುತ್ತಿದ್ದ ಬಂಗಲೆಯನ್ನು ಖರೀದಿಸಿದ. ಇದು ಅಜ್ಜಿ ಕಥೆಯಂತೆ ಕಂಡರೂ, ಸುಳ್ಳಲ್ಲ. ಆ ವ್ಯಕ್ತಿ ಬೇರೆ ಯಾರೂ ಅಲ್ಲ. ಇಂಗ್ಲಿಷಿನ ಖ್ಯಾತ ಕಥೆಗಾರ ಚಾರ್ಲ್ಸ್ ಡಿಕನ್ಸ್. ಇದಲ್ಲದೆ ಅವನು ಆಲಿವರ್ ಟ್ವಿಸ್ಟ್, ಡೇವಿಡ್ ಕಾಪರ್ ಫೀಲ್ಡ್ ಮುಂತಾದ ಹದಿನೈದಕ್ಕೂ ಹೆಚ್ಚು ಕೃತಿ ರಚಿಸಿ ಪ್ರಖ್ಯಾತನಾದ. ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಚಾರ್ಲ್ಸ್ ಡಿಕನ್ಸ್ ಉತ್ತಮ ಉದಾಹರಣೆಯಲ್ಲವೇ?

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.