ಹಸಿವಿಗಿಂತ ಹೆಚ್ಚಿನ ನೋವಿಲ್ಲ
ಜಿ.ಪಿ.ರಾಜರತ್ನಂ ಅವರು ಬಾಲ್ಯದಿಂದಲೂ ಕಷ್ಟ ಜೀವಿಗಳು. ಅವರು ಓದು ಮುಗಿಸಿದಾಗ ಕೆಲಸಕ್ಕಾಗಿ ಪಟ್ಟ ಪಾಡು, ಹಿಡಿ ಕೂಳಿಗೂ ಪಟ್ಟ ಶ್ರಮ, ಇದರಿಂದಾಗಿ ಅವರಿಗೆ ಹಸಿದ ಹೊಟ್ಟೆಗೆ ಆಹಾರದ ಪ್ರಾಮುಖ್ಯತೆ ತಿಳಿದಿತ್ತು. 'ಶಾಂತಲಾ' ಮತ್ತು 'ರೂಪದರ್ಶಿ' ಕಾದಂಬರಿಗಳನ್ನು ಬರೆದು ಪ್ರಸಿದ್ಧರಾಗಿದ್ದ ಕೆ.ವಿ.ಅಯ್ಯರ್ ಮತ್ತು ರಾಜರತ್ನಂ ಅವರಿಗೆ ತುಂಬಾ ಸ್ನೇಹವಿತ್ತು. ಅಯ್ಯರ್ ಅವರು ರತ್ನ ಅವರ ಮಾನವೀಯ ಗುಣಗಳನ್ನು ಲೇಖನವೊಂದರಲ್ಲಿ ಶ್ಲಾಘಿಸಿದ್ದಾರೆ. ಅಯ್ಯರ್ ಅವರು ಮಾಡಿಸಿದ್ದ ಸುಂದರವಾದ ಸರಸ್ವತಿ ವಿಗ್ರಹವನ್ನು ನೋಡಿ ಬೆರಗಾಗಿ ಅದನ್ನು ಎತ್ತಲು ರಾಜರತ್ನಂ ಪ್ರಯತ್ನಿಸಿದರು. ಆದರೆ ಆಗಲಿಲ್ಲ. ಆಗ ಅಯ್ಯರ್ ಅವರು ಅದನ್ನು ಪೃಷ್ಠದ ಕಡೆಯಿಂದ ಎತ್ತಲು ಸಲಹೆ ನೀಡಿದರು. 'ಅದನ್ನು ಕೇಳಿ, ಹಾಗೆಲ್ಲಾ ಮುಟ್ಟುವುದೇ? ಪೂಜನೀಯ ದೇವತೆ ಸರಸ್ವತಿ ಎನ್ನುವ ವಿಷಯ ಹಾಗಿರಲಿ, ಒಂದು ಹೆಣ್ಣು ಬೊಂಬೆಯನ್ನೂ ನಾನು ಹಾಗೆ ಮುಟ್ಟಲಾರೆ ಎಂದುಬಿಟ್ಟರು!' ಇಂಥಾ ಮನಶ್ಶುಚಿ ಯಾರಿಗಿದೆ ಎಂದು ಅಯ್ಯರ್ ಅಚ್ಚರಿಪಟ್ಟಿದ್ದುಂಟು.
ಒಮ್ಮೆ ರಾಜರತ್ನಂ ಅವರನ್ನು ಭೇಟಿಮಾಡಲು ಕೆ.ವಿ.ಅಯ್ಯರ್ ಅವರ ಮನೆಗೆ ಹೋಗಿದ್ದರು. ಅವರನ್ನು ರಾಜರತ್ನಂ ಆದರದಿಂದ ಬರಮಾಡಿಕೊಂಡು, ಮನೆಯಲ್ಲಿ ಅನುಕೂಲವಿಲ್ಲದ್ದರಿಂದ ಅಯ್ಯರ್ ರನ್ನು ಕರೆದುಕೊಂಡು ಮನೆಯ ಸಮೀಪದಲ್ಲಿಯೇ ಇದ್ದ ಹೊಟೆಲ್ ಒಂದಕ್ಕೆ ಹೋದರು. ಅಲ್ಲಿ ಇಡ್ಲಿ ಸಾಂಬಾರ್ ಆರ್ಡರ್ ಮಾಡಿ ತಿನ್ನುತ್ತಾ ಕುಳಿತರು. ಹಾಗೆಯೇ ಹರಟೆ ಹೊಡೆದುಕೊಂಡು ಉಪಹಾರ ಸೇವಿಸುತ್ತಿದ್ದಾಗ, ಅಲ್ಲಿಯೇ ಸಮೀಪದಲ್ಲಿ ಎರಡು ನಾಯಿಗಳ ನಡುವೆ ಕಚ್ಚಾಟ ಪ್ರಾರಂಭವಾಯಿತು. ಹೆಣ್ಣುನಾಯಿಯೊಂದು ತನ್ನ ಮರಿಗಳ ಜೊತೆ ಅಲ್ಲಿಯೇ ಮುನ್ಸಿಪಾಲ್ಟಿ ತೊಟ್ಟಿಯಲ್ಲಿ ಬಿಸಾಕಿದ್ದ ಹಳಸಲು ಖಾದ್ಯ ಪದಾರ್ಥಕ್ಕಾಗಿ ಬಾಯಿ ಹಾಕಿದಾಗ ಅಲ್ಲಿಯೇ ಇದ್ದ ಗಂಡುನಾಯಿ ಬೊಗಳುತ್ತಾ ದೊಡ್ಡ ನಾಯಿಮರಿಯೊಂದರ ಕಾಲು ಕಚ್ಚಿ ಗಾಯ ಮಾಡಿತು. ಅದನ್ನು ನೋಡುತ್ತಿದ್ದ ರಾಜರತ್ನಂರ ಮನಸ್ಸು ಚುರ್ರೆಂದಿತು. ಆಗ ತಮ್ಮ ಪ್ಲೇಟಿನಲ್ಲಿದ್ದ ಎರಡು ಇಡ್ಲಿಗಳನ್ನು ತೆಗೆದುಕೊಂಡು ಹೋಗಿ ಗಾಯ ಮಾಡಿಕೊಂಡಿದ್ದ ನಾಯಿಮರಿಗೆ ನೀಡಿದಾಗ ಅದು ನೋವನ್ನೂ ಮರೆತು ಗಬಗಬನೆ ತಿಂದು ಹಾಕಿತು. ಆಗ ಅಯ್ಯರ್‌ರವರೂ ಸಹ ಎರಡು ಇಡ್ಲಿಗಳನ್ನು ತೆಗೆದುಕೊಂಡು ಹೋಗಿ, ತಾಯಿ ನಾಯಿಗೆ ನೀಡಿದರು. ಆಗ ರಾಜರತ್ನಂ ಹೇಳಿದರು, 'ನೋಡಿ, ಹಸಿವಿಗಿಂತ ಹೆಚ್ಚಿನ ನೋವಿಲ್ಲ' ಎಂದು. ಅಲ್ಲದೆ ಕೊಟ್ಟು ತಿನ್ನುವುದರಲ್ಲಿ ಇರುವ ಸುಖ ಬೇರೆ ಯಾವುದರಲ್ಲಿಯೂ ಇಲ್ಲ ಎಂಬ ಬಗ್ಗೆ ಮಾತು ಸರಿಯಿತು. ಇದು ರಾಜರತ್ನಂ ಅವರ ಮಾನವೀಯ ಗುಣವನ್ನೂ, ಪ್ರಾಣಿ ಪ್ರೀತಿಯನ್ನೂ ತೋರಿಸುತ್ತದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

