ಸಂಪಾದಕೀಯ

ಹದಿಮೂರು ದಿನಗಳಲ್ಲಿ ಬರೆದ ಕಾದಂಬರಿ ಪ್ರಶಸ್ತಿ ಗಳಿಸಿತು!

Published On :

ಎಂ.ಕೆ.ಇಂದಿರಾ, ಕಾದಂಬರಿ ಲೋಕದ ಸಾಮ್ರಾಜ್ಞೆಯಾಗಿ ಮೆರೆದವರು. ಮಲೆನಾಡಿನ ತೀರ್ಥಹಳ್ಳಿಯಲ್ಲಿ ಕೇವಲ ಮಾಧ್ಯಮಿಕ ಶಿಕ್ಷಣದವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿ, ತಮ್ಮ ನಲವತ್ತೈದನೇ ವರ್ಷದಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದ ಇಂದಿರಾ, ತಮ್ಮ ಕಾದಂಬರಿಗಳ ಮೂಲಕ ಪ್ರಸಿದ್ಧರಾದರು. ತಮ್ಮ ಜೀವಿತಾವಧಿಯಲ್ಲಿ ನಲವತ್ತೆಂಟು ಕಾದಂಬರಿಗಳನ್ನು, ಹದಿನೈದು ಕಥಾ ಸಂಕಲನವನ್ನು ಹೊರತಂದರು. ಅವರು ಬರೆದ 'ಗೆಜ್ಜೆ ಪೂಜೆ', 'ಫಣಿಯಮ್ಮ', 'ಸದಾನಂದ' ಚಲನಚಿತ್ರವಾಗಿ ಅಪಾರ ಯಶಸ್ಸು ಗಳಿಸಿದವು. 'ಫಣಿಯಮ್ಮ' ಚಲನಚಿತ್ರವಂತೂ ಅನೇಕ ಪ್ರಶಸ್ತಿ ಗಳಿಸಿತು.
ಮೊದಲ ಕಾದಂಬರಿ ತುಂಗ-ಭದ್ರ ಬರೆದಾಗ, ಅವರಿಗೆ ಅದನ್ನು ಹೇಗೆ ಪ್ರಕಟಿಸಬೇಕು, ಯಾರಿಗೆ ತೋರಿಸಬೇಕು ಎಂದು ತಿಳಿಯದೆ ಅದನ್ನು ಕಾದಂಬರಿ ಸಾರ್ವಭೌಮ ಅನಕೃ ಅವರ ಬಳಿ ತೆಗೆದುಕೊಂಡು ಹೋಗಿ ಕೊಟ್ಟರು. ಅದನ್ನು ಓದಿ ತಮ್ಮ ಅಭಿಪ್ರಾಯ ತಿಳಿಸಲು ಮತ್ತು ಪ್ರಕಾಶಕರನ್ನು ಪರಿಚಯ ಮಾಡಿಕೊಡಲು ವಿನಂತಿಸಿದರು. ಅನಕೃ ಅವರು ಮೂರು ತಿಂಗಳಿನ ನಂತರ ಬಂದರೆ ಓದಿ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು. ಒಂದು ತಿಂಗಳಲ್ಲಿ ಬರೆದ ಕಾದಂಬರಿ, ಓದಿ ಹೇಳಲು ಮೂರುತಿಂಗಳು ಬೇಕೆ ಎಂದೆನಿಸಿದರೂ ಅವರ ಮನೆಗೆ ಹಲವಾರು ಬಾರಿ ಎಡತಾಕಿದರು.  ಅನಕೃ ಅನೇಕ ವಾಯಿದೆಗಳನ್ನು ಪಡೆದು, ಅಂತೂ ಒಂದು ವರ್ಷದ ನಂತರ ಓದಿ, ಚೆನ್ನಾಗಿದೆ ಪ್ರಕಟಿಸಬಹುದು ಎಂದು ಹೇಳಿದರು. ನಂತರ ಅದು ಒಂದೆರಡು ಪ್ರಕಾಶಕರ ಬಳಿ ಹೋಗಿ ಬಂದರೂ ಯಾರೂ ಹೊಸ ಲೇಖಕಿಯ ಆ ಕಾದಂಬರಿಯನ್ನು ಪ್ರಕಟಿಸಲು ಮುಂದೆ ಬರಲಿಲ್ಲ. ಕೊನೆಗೆ ಮನೋಹರ ಗ್ರಂಥಮಾಲೆಯವರು ಅದನ್ನು ಪ್ರಕಟಿಸಲು ಒಪ್ಪಿ ಹಸ್ತಪ್ರತಿಯನ್ನು ತರಿಸಿಕೊಂಡರು. ಒಂದು ವರ್ಷ ಇಟ್ಟುಕೊಂಡು ಕೊನೆಗೆ ಹಸ್ತಪ್ರತಿ ಕಳೆದು ಹೋಯಿತು. ಇನ್ನೊಮ್ಮೆ ಬರೆದು ಕೊಡಿ ಎಂಬ ಉತ್ತರ ಪ್ರಕಾಶಕರಿಂದ ಬಂತು. ಇಂದಿರಾ ಅವರಿಗೆ ನಿರಾಶೆಯಾದರೂ ನೆನಪಿನ ಆಧಾರದ ಮೇಲೆ ಕೇವಲ ಹದಿಮೂರು ದಿನಗಳಲ್ಲಿ ಮತ್ತೆ ಆ ಕಾದಂಬರಿಯನ್ನು ಬರೆದುಕೊಟ್ಟರು. ಅದಾಗಿ ಕೆಲವು ದಿನಗಳಲ್ಲಿ ಕಾದಂಬರಿಯನ್ನು ಪ್ರಕಟಿಸಲಾಯ್ತು. ಅದಕ್ಕೆ ಕೀರ್ತಿನಾಥ್ ಕುರ್ತುಕೋಟಿಯವರು ಮುನ್ನುಡಿ ಸಹ ಬರೆದಿದ್ದಾರೆ. 1963ರಲ್ಲಿ ಪ್ರಕಟವಾದ ಈ ಕಾದಂಬರಿ ಜನರ ಮನಸ್ಸನ್ನು ಗೆದ್ದಿತು. ಅದಕ್ಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಹ ಬಂತು. ಇಂದಿರಾ ಅವರಿಗೆ ಅವರದೇ ಆದ ಓದುಗರ ಬಳಗ ಹುಟ್ಟಿಕೊಂಡಿತು. ಇಂತಹ ಸಾಹಿತಿ ಕೊನೆಗಾಲದಲ್ಲಿ ಆರ್ಥಿಕ ತೊಂದರೆಗೆ ಸಿಲುಕಿ ನಲುಗಿದ್ದು ಮಾತ್ರ ಇತಿಹಾಸ. ಸರ್ಕಾರ ಮನೆಯೊಂದನ್ನು ನೀಡುವುದಾಗಿ ವಾಗ್ದಾನ ಮಾಡಿದರೂ ಅದರಂತೆ ನಡೆದುಕೊಳ್ಳಲಿಲ್ಲ. ಮಾಸಿಕ 500 ರು. ಮಾಸಾಶನದಲ್ಲಿ ಜೀವನ ಸಾಗಿಸುವ ಪರಿಸ್ಥಿತಿಗೆ ಬಂದಿದ್ದು ಒಂದು ವಿಪರ್ಯಾಸ ಎನ್ನಬಹುದು.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.