ಮೇಜರ್ ದಯಾಳ್‌ರ ಶೌರ್ಯಕ್ಕೆ ನಡುಗಿದ ಪಾಕ್ ಸೇನೆ
1965ರ ಆಗಸ್ಟ್ ತಿಂಗಳ ಕೊನೆಯ ಭಾಗ. ಭಾರತ ಮತ್ತು ಪಾಕಿಸ್ತಾನಗಳು ಯುದ್ಧದಲ್ಲಿ ನಿರತವಾಗಿದ್ದವು. ಹನ್ನೆರಡೂವರೆ ಸಾವಿರ ಅಡಿ ಎತ್ತರದ, ಹಿಮಾವೃತವಾದ ಸಾಂಖ್ ಶಿಖರ ದಾಟಿ ಹಾಜೀಪೀರ್ ಕಣಿವೆಗೆ ದಾಳಿ ಮಾಡುವ ಸವಾಲು ಭಾರತೀಯ ಸೈನಿಕರಿಗೆ ಎದುರಾಯಿತು. ಅದು ಪಾಕೀಸ್ತಾನಿಯರ ಮುಖ್ಯ ಆಯಕಟ್ಟಿನ ಸ್ಥ್ಥಳವಾಗಿ, ಒಂದು ಬೆಟಾಲಿಯನ್ ಪಾಕ್ ಪಡೆಯ ಬೆಂಗಾವಲಿನಲ್ಲಿದ್ದಂತಹ ಪ್ರದೇಶ. ಅಲ್ಲಿ ಪಾಕ್ ಸೈನ್ಯ ಅಪಾರ ಪ್ರಮಾಣದಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಿ ಬೇರೆಡೆಗೆ ಕಳಿಸುವ ವ್ಯವಸ್ಥೆ ಮಾಡುತ್ತಿತ್ತು. ಈ ಪ್ರದೇಶದ ಮೇಲೆ ದಾಳಿಮಾಡಿ ವಶಪಡಿಸಿಕೊಳ್ಳಲು ಸೈನ್ಯಬಲಕ್ಕಿಂತ ಮನಸ್ಥೈರ್ಯ ಅತೀ ಮುಖ್ಯವಾಗಿತ್ತು. ಇದು ಕಾಶ್ಮೀರ ರಕ್ಷಣೆಗೆ ಅತ್ಯಂತ ಪ್ರಮುಖವಾದ ಸ್ಥಳವಾದುದರಿಂದ ಸ್ವಲ್ಪ ಯಾಮಾರಿದರೂ ದೊಡ್ಡ ಅನಾಹುತವೇ ನಡೆಯುತ್ತಿತ್ತು. ಇಂತಹ ಸಾಹಸ ಕಾರ್ಯ ಮಾಡಲು ಯಾರು ಸಿದ್ಧರಿದ್ದೀರಿ ಎಂದು ಕೇಳಿದಾಗ ಮುಂದೆ ಬಂದವನು ಮೇಜರ್ ರಣಜಿತ್‌ಸಿಂಗ್ ದಯಾಳ್. ಅವನೆಷ್ಟು ಅರಿಭಯಂಕರನಾಗಿದ್ದನೆಂದರೆ ಅವನ ತಲೆಗೆ ಪಾಕ್ ಸೈನ್ಯ ಐವತ್ತು ಸಾವಿರ ರುಪಾಯಿಗಳ ಬಹುಮಾನ ಘೋಷಿಸಿತ್ತು. ಹಿರಿಯ ಸೇನಾಧಿಕಾರಿ, ಮೇಜರ್ ದಯಾಳ್‌ನನ್ನು ಕರೆದು ಬೆನ್ನುತಟ್ಟಿ ಅವನ ಜೊತೆ ಎಷ್ಟು ಸೈನಿಕರನ್ನು ಕಳುಹಿಸಬೇಕು ಎಂದು ಕೇಳಿದ. ಅದಕ್ಕೆ ದಯಾಳ್ ತನ್ನೊಡನೆ ಒಂದು ಕಂಪನಿ ಸಾಕು ಎಂದುಬಿಟ್ಟ. 'ಶತ್ರುಗಳ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚಿದ್ದ ಕಡೆ ದಾಳಿ ಮಾಡಲು ಕೇವಲ ನೂರು ಸೈನಿಕರೇ?' ಎಂದು ಸೈನ್ಯಾಧಿಕಾರಿ ಅಚ್ಚರಿ ವ್ಯಕ್ತಪಡಿಸಿದ. ದಯಾಳ್ ಇಷ್ಟಪಟ್ಟಿದ್ದರೆ ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಳುಹಿಸಲು ಸಿದ್ಧವಿದ್ದರು ಸೈನ್ಯಾಧಿಕಾರಿ. ಆದರೆ ದಯಾಳ್ ಅವರ ಮಾತಿಗೆ ಸೊಪ್ಪುಹಾಕದೆ, ತಾನು ಒಂದು ಕಂಪನಿಯನ್ನು ತೆಗೆದುಕೊಂಡು ಹೋಗಿ ಜಯಗಳಿಸಿಯೇ ವಾಪಸ್ಸು ಬರುವುದಾಗಿ ಹೇಳಿ ಸೈನಿಕರನ್ನು ಕರೆದುಕೊಂಡು ಹೊರಟೇ ಬಿಟ್ಟ. ಆಗಸ್ಟ್ ಇಪ್ಪತ್ತಾರರ ಮಧ್ಯರಾತ್ರಿ ಕಗ್ಗತ್ತಲಿನಲ್ಲಿ, ಸುರಿಯುತ್ತಿರುವ ಮಳೆಯಲ್ಲಿ ಹಾಜೀಪೀರ್ ಕಣಿವೆಯೆಡೆಗೆ ಮುನ್ನುಗ್ಗಿದ. ಅದರ ಜೊತೆಗೆ ತನ್ನ ಸಹ ಸೈನಿಕರಿಗೆ ಕೆಲವು ಸೂಚನೆಗಳನ್ನು ನೀಡಿ, ಇಲ್ಲಿ ಪ್ರಾಣಬಿಡಬಾರದು. ಸಾಯುವುದಕ್ಕೆ ಅನುಮತಿಯಿಲ್ಲ ಎಂದು ಕಟ್ಟಾಜ್ಞೆ ಮಾಡಿದ. ಸಾಂಖ್ ಶಿಖರದ ಮೇಲೆ ಸಮಯ ನೋಡಿ ದಾಳಿ ಮಾಡಿಯೇ ಬಿಟ್ಟ. ದಾಳಿಯನ್ನು ಆ ಸಮಯದಲ್ಲಿ ನಿರೀಕ್ಷೆ ಮಾಡದ ಪಾಕ್ ಸೈನಿಕರು ಯುದ್ಧಕ್ಕೆ ತಯಾರಾಗುವುದರಲ್ಲಿಯೇ ಆ ಪರ್ವತ ದಯಾಳ್‌ನ ವಶವಾಗಿತ್ತು. ಹಾಗೇ ತನ್ನ ವಿಜಯ ಯಾತ್ರೆಯನ್ನು ಮುಂದುವರೆಸಿ, ಹಾಜೀಪೀರ್ ಕಣಿವೆಯ ಮೇಲೆ ಕಗ್ಗತ್ತಿಲಿನ ರಾತ್ರಿ ಸುರಿಯುವ ಮಳೆ, ಮಂಜಿನ ನಡುವೆಯೇ ದಾಳಿ ಮಾಡಿದಾಗ ಪಾಕ್ ಸೈನ್ಯವಂತೂ ತತ್ತರಿಸಿ ಹೋಯಿತು. ಆದರೂ ಅವರು ತಮ್ಮ ಅಪಾರ ಸೈನ್ಯದ ನೆರವಿನಿಂದ ಹೋರಾಡಿದರು. ಕಣಿವೆಯ ಮೇಲಿಂದ ದಾಳಿ ಮಾಡುತ್ತಿದ್ದ ದಯಾಳ್‌ನ ಸೈನಿಕರು ವೀರಾವೇಶದಿಂದ ಹೋರಾಡಿ ಪಾಕ್ ಸೈನಿಕರನ್ನು ಅಲ್ಲಿಂದ ಓಡಿಸಿಬಿಟ್ಟರು. ಅಲ್ಲಿ ಭಾರತೀಯ ಸೈನಿಕರಿಗೆ ಅಪಾರವಾದ ಮದ್ದುಗುಂಡುಗಳ ಭಂಡಾರವೇ ಸಿಕ್ಕಿತ್ತು. ಈ ಯುದ್ಧದಲ್ಲಿ ದಯಾಳ್ ತನ್ನ ಕೆಲವು ಸೈನಿಕರನ್ನು ಕಳೆದುಕೊಂಡಿದ್ದ. ವೀರಮರಣವನ್ನಪ್ಪಿದ ತನ್ನ ಸಹಚರರಿಗೆ ಕ್ಷಣಕಾಲ ಶಾಂತಿ ಕೋರಿ, ತಮ್ಮ ಯಶಸ್ಸಿನ ಶುಭ ಸಮಾಚಾರವನ್ನು ತನ್ನ ಮೇಲಧಿಕಾರಿಗೆ ತಿಳಿಸಿದ. 'ನನ್ನ ತಲೆ ತೆಗೆದುಕೊಂಡು ಹೋಗುವ ಮಕ್ಕಳು ಯಾರಿದ್ದೀರಿ ಬನ್ನಿ!' ಎಂದು ಪಾಕ್ ಸೈನಿಕರಿಗೆ ಸವಾಲು ಹಾಕಿದ. ಅವನ ಶೌರ್ಯವನ್ನು ಗುರುತಿಸಿದ ಭಾರತೀಯ ಸೈನ್ಯ, ಪ್ರಶಸ್ತಿ ನೀಡಿ ಅವನನ್ನು ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿಸಿತು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

