ಮಹಿಳೆಯರು ಜಾಣರಾಗಬೇಕು
ರಾಜ್ಯಾದ್ಯಂತ ಸರಗಳ್ಳತನ ಅವ್ಯಾಹತವಾಗಿ ಮುಂದುವರೆದಿದೆ. ಪ್ರತಿದಿನ ಪತ್ರಿಕೆಗಳಲ್ಲಿ ನಾವು ಈ ಬಗ್ಗೆ ಓದುತ್ತಿದ್ದೇವೆ. ಇದನ್ನು ತಡೆಗಟ್ಟಲು ಮಹಿಳೆಯರು ಸ್ವಲ್ಪ ಮಟ್ಟಿಗೆ ಜಾಣರಾಗಬೇಕಿದೆ. ಮಂಗಳಸೂತ್ರವೆಂಬುದು ಸರಗಳ್ಳರಿಗೆ ಬಹುಸುಲಭದಲ್ಲಿ ಎಗರಿಸಲು ಸಿಗುವುದಾದ್ದರಿಂದ ಸ್ತ್ರೀಯರು ಸಭೆ, ಸಮಾರಂಭ, ಹಬ್ಬ-ಹರಿದಿನಗಳಲ್ಲಿ ಮಾತ್ರ ಚಿನ್ನದ ಮಂಗಳಸೂತ್ರವನ್ನು ಧರಿಸಿ, ಇನ್ನುಳಿದ ಸಾಮಾನ್ಯ ದಿನಗಳಲ್ಲಿ ಕೃತಕ ಚಿನ್ನದ ಮಂಗಳಸೂತ್ರವನ್ನು ಧರಿಸುವ ರೂಢಿ ಮಾಡಿಕೊಂಡರೆ ಸರಗಳ್ಳರ ಉಪಟಳ ಕಡಿಮೆ ಆದೀತು. ಇಲ್ಲಿ ಸಂಪ್ರದಾಯದೊಂದಿಗೆ ಸಣ್ಣ ಮಟ್ಟಿನ ರಾಜಿ ಮಾಡಿಕೊಳ್ಳುವುದಕ್ಕೆ ಹಿಂಜರಿಯಕೂಡದು. ಇದು ಬಿಟ್ಟು ಎಲ್ಲಾ ಸರಗಳ್ಳತನಕ್ಕೆ ಪೊಲೀಸರ ಕಾರ್ಯವೈಫಲ್ಯವೇ ಕಾರಣ ಎಂದು ದೂರುವುದು ವಿಹಿತವಲ್ಲ. ಪ್ರತಿ ಸಂದರ್ಭದಲ್ಲೂ, ಪ್ರತಿ ಮಹಿಳೆಗೂ ಆಭರಣ ಸುರಕ್ಷತೆಯನ್ನು ನೀಡಲು ಪೊಲೀಸರಿಗೆ ಕಷ್ಟಸಾಧ್ಯವೇ ಸರಿ. ಈ ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರೂ ತಮ್ಮ ಪಾಲಿನ ಸಹಕಾರವನ್ನು ನೀಡಬೇಕು.
-ಎನ್.ಡಿ. ಕಾರಂತ, ಮೈಸೂರು
ರಸ್ತೆ ದುರಸ್ತಿಗೊಳಿಸಿ
ಹೊಳೆನರಸೀಪುರದಿಂದ ಚನ್ನರಾಯಪಟ್ಟಣಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸೂರನಹಳ್ಳಿ ಗ್ರಾಮದಿಂದ ತಟ್ಟೆಕೆರೆ ಗ್ರಾಮದವರೆಗೆ ಸುಮಾರು 3 ಕಿ.ಮಿ. ರಸ್ತೆಯು ಕಾರಣಾಂತರಗಳಿಂದ ದುರಸ್ತಿಗೊಂಡಿರುವುದಿಲ್ಲ. ರಸ್ತೆ ಪೂರ್ತಿ ಹಾಳಾಗಿದ್ದು, ಗುಂಡಿಗಳು ಮತ್ತು ಧೂಳಿನಿಂದಾಗಿ ವಾಹನಗಳು ಚಲಿಸಲು ದುಸ್ತರವಾಗಿರುತ್ತದೆ. ಈ ರಸ್ತೆಯಲ್ಲಿ ಹಲವಾರು ಬೈಕ್ ಸವಾರರು ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಅನಾಹುತ ಆಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕ್ಷೇತ್ರದ ಜನಪ್ರತಿನಿಧಿಗಳು ತಕ್ಷಣ ರಸ್ತೆ ದುರಸ್ತಿ ಪಡಿಸಿ ಈ ರಸ್ತೆಯಲ್ಲಿ ಪ್ರಯಾಣ ಮಾಡುವ ಸಾವಿರಾರು ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರುತ್ತೇವೆ.
-ನಾಗರೀಕರು, ಹೊಳೆನರಸೀಪುರ
ನಮಗೆ ಇನ್ನೆಷ್ಟು ಅಗ್ನಿಪರೀಕ್ಷೆ?
ಅರ್ಹ ಪದವಿ ಮತ್ತು ಪ್ರತಿಭೆಗಳಿದ್ದರೂ ಅವಕಾಶ ವಂಚಿತರಾಗಿ ಸರ್ಕಾರಿ ಕೆಲಸದ ಕನಸನ್ನೇ ಕೈ ಬಿಟ್ಟಿದ್ದಾಗ 2008ರಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನ್ಯಾಸಕ ವೃತ್ತಿಗಾಗಿ ಹೊರಡಿಸಿದ ಅಧಿಸೂಚನೆ ವರದಾನವಾಗಿ ಪರಿಣಮಿಸಿತು. ಕೆಪಿಎಸ್ಸಿ ಮೂಲಕ ಮೊತ್ತ ಮೊದಲ ಬಾರಿಗೆ 'ಸಾಮಾನ್ಯ ಪ್ರವೇಶ ಪರೀಕ್ಷೆ'ಯ ಮೂಲಕ 2500 ಉಪನ್ಯಾಸಕರ ನೇರ ನೇಮಕಾತಿ ಪಡೆದ ಹೆಗ್ಗಳಿಕೆ ಉಲ್ಲಾಸ ಈಗ ಕರಗುತ್ತಿದೆ. ಭೋದನಾನುಭವ SLET, NET, M.Phil. ph.D.ಪದವಿಗಳೊಂದಿಗೆ ನಾನ್ಸೆಮಿಸ್ಟರ್ನ ಅಭ್ಯರ್ಥಿಗಳೇ ಬಹುಪಾಲು ಆಯ್ಕೆಗೊಂಡು ಪಿ.ಯು. ಕಾಲೇಜುಗಳಲ್ಲಿ, ಉಪನ್ಯಾಸಕ ವೃತ್ತಿ ಆರಂಭಿಸಿದ್ದರೂ ನಮ್ಮನ್ನು ಇಲಾಖೆ ಇನ್ನೂ 'ಪಾಸ್' ಮಾಡಿಲ್ಲ. ಮೂರು ವರ್ಷವಾದರೂ ಖಾಯಂಪೂರ್ವ ಸೇವಾವಧಿ ಘೋಷಣೆಯಾಗಿಲ್ಲ. ದ್ವಿತೀಯ ಪಿಯುಸಿ ಫಲಿತಾಂಶ ಉತ್ತಮಗೊಳ್ಳಲು ಉಪನ್ಯಾಸಕರ ನೇಮಕಾತಿ ಕಾರಣ ಎಂದು ಶಿಕ್ಷಣ ಸಚಿವರು ಬೆನ್ನು ತಟ್ಟಿದರೂ ಈಗ ನಮ್ಮ ಕಡೆ ನೋಡುತ್ತಿಲ್ಲ. ಬಿ.ಇಡಿ. ನೆಪದಿಂದ ನೇಮಕಾತಿ ನಿಯಮಗಳನ್ನೇ ಗಾಳಿಗೆ ತೂರಿ ಒತ್ತಡ ಸೃಷ್ಟಿಸಲಾಗುತ್ತಿದೆ. ಬಿ.ಇಡಿ ಆದವರಿಗೆ ಮಾತ್ರ ಅಂತಹ ಘೋಷಣೆ ನೀಡಿ ನಮಗೆ 'ಕೋರ್ಸ್ನ ಅವಕಾಶ' ನೀಡುತ್ತೇವೆಂದು ಹೇಳಿದ ಮಾತು ನೆನಪಿಗೆ ಬರುತ್ತಿಲ್ಲ. ಬಡ್ತಿ, ವರ್ಗಾವಣೆಗಳು ಅಲಭ್ಯವಾಗಿವೆ. ದಯವಿಟ್ಟು ನಮಗೆ ಮಾಹಿತಿ ನೀಡಿ ಅಥವಾ ವೇತನಸಹಿತ ರಜೆಯನ್ನಾದರೂ ನೀಡಿ ಬಿ.ಇಡಿ ಮಾಡುತ್ತೇವೆ. ನಮ್ಮ ಅರ್ಹತೆಯನ್ನು ಮತ್ತೆ ಮತ್ತೆ ಒರೆಗಲ್ಲಿಗೆ ಹಚ್ಚಿ!
-ನೊಂದ ಉಪನ್ಯಾಸಕರು, ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

