ಸಂಪಾದಕೀಯ

ಫ್ಯಾಸಿಸ್ಟ್‌ಕವಿತೆ ಮತ್ತು ಕಾರಂತರು

Published On :

ಜರ್ಮನಿಯಲ್ಲಿ ಹಿಟ್ಲರನ ಆಡಳಿತವಿದ್ದ ಕಾಲ. ಅವನ ನಾಜೀವಾದ, ಸರ್ವಾಧಿಕಾರಿ ಪ್ರವೃತ್ತಿ ಉತ್ತುಂಗದಲ್ಲಿದ್ದ ಸಮಯ. ಇಂತಹ ಸಮಯದಲ್ಲಿ ಒಮ್ಮೆ ಶಿವರಾಮ ಕಾರಂತರು ಮತ್ತು ಬೇಂದ್ರೆ ಧಾರವಾಡದಲ್ಲಿ ಸೇರಿ ಮಾತುಕತೆ ನಡೆಸುತ್ತಿದ್ದರು. ತಾವಿಬ್ಬರೂ ಫ್ಯಾಸಿಸ್ಟ್ ರೀತಿಯ ಕವಿತೆಯನ್ನೇಕೆ ಬರೆಯಬಾರದು ಎಂದು ಚರ್ಚಿಸಿದರು. ಇದರಿಂದ ಕನ್ನಡಿಗರನ್ನು ಎಚ್ಚರಗೊಳಿಸಬಹುದೆಂಬುದು ಅವರಿಬ್ಬರ ಎಣಿಕೆಯಾಗಿತ್ತು. ಹಿಟ್ಲರನ ನಾಜೀವಾದ ವಿಡಂಬನೆಯಂತೆ ಇರುವ ಕವನ ರಚಿಸುವ ಪಂಥಕ್ಕೆ ಬೇಂದ್ರೆಯವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಆಗ ಅವರ ಲೇಖನಿಯಿಂದ ಮೂಡಿಬಂದ ಕವನವೇ 'ಒಂದೇ ಕರ್ನಾಟಕ'. ಪಲ್ಲವಿಯಲ್ಲಿ ಕರ್ನಾಟಕ ಏಕೀಕರಣ, ಕನ್ನಡನಾಡಿನ ಭವ್ಯತೆಯನ್ನು ಸಾರುವ ಸಾಲುಗಳಿದ್ದರೆ ನಂತರದ ಸಾಲುಗಳು ಹೀಗೆ ಮೂಡಿಬಂದವು.
    ಹೀಗೆನ್ನದ ಹೆರವರು ಅವರಿದ್ದರು ಒಂದೇ
    ಇರದಿದ್ದರೂ ಒಂದೇ
    'ಕನ್ನಡವೆಂದೂ ಒಪ್ಪದು ಕರ್ನಾಟಕ ನಿಂದೆ
    ಒಂದೇ ಒಂದೇ ಒಂದೇ ಕರ್ನಾಟಕ ಒಂದೇ'
ಈ ಸಾಲುಗಳಲ್ಲಿ ಫ್ಯಾಸಿಸ್ಟ್ ಮನೋಭಾವ ಎದ್ದು ಕಾಣುವಂತೆ ವ್ಯಕ್ತವಾಗಿದೆ. ಕವಿತೆಯನ್ನು ಬರೆದವರ ಹೆಸರು 'ಬೇಂದ್ರೆ' ಬದಲಾಗಿ 'ಹರ್ ಬಂಡರ್‌' ಎಂದಿತ್ತು. ಇದು 'ಹರ್ ಹಿಟ್ಲರ್‌ನ' ಪ್ರತಿರೂಪದಂತಿದ್ದು ಬೇಂದ್ರೆಯ ಹೆಸರು ಬಂಡರ್ ಆಗಿತ್ತು. ಕವಿತೆಯ ಎರಡೂ ಬದಿಯಲ್ಲಿ ನಾಜಿಗಳ ಸಂಕೇತವಾಗಿದ್ದ ಸ್ವಸ್ತಿಕ್ ಚಿನ್ಹೆ ರಾರಾಜಿಸುತ್ತಿತ್ತು. ಅದರ ಪಕ್ಕದಲ್ಲೇ ಜರ್ಮನ್ ಸೇನಾಧಿಕಾರಿಯ ಸಮವಸ್ತ್ರದಲ್ಲಿ ಬೇಂದ್ರೆಯವರ ರೇಖಾಚಿತ್ರವಿತ್ತು. ಕವಿತೆಯ ಕೆಳಭಾಗದಲ್ಲಿ ನಾಸ್ತಿ ರಿಕಾರ್ಡ್ ಕಂಪನಿಯವರು ಬ್ರಾಡ್‌ಕಾಸ್ಟ್ ಮಾಡಿದ ಹರ್‌ಬಂಡರ್ ಇವರ ಗೀತೆ. ಹದಿನೆಂಟು ಲಕ್ಷ ನಾಸ್ತಿ ಪಂಗಡದವರು ಒಕ್ಕೊರಲಿನಿಂದ ಹೇಳುವ ಹಾಡು ಎಂಬ ಪುಟ್ಟ ಬರಹ ಬೇರೆ. ಕವಿತೆಯ ಕೊನೆಯಲ್ಲೊಂದು ಎಚ್ಚರಿಕೆಯನ್ನೂ ಮುದ್ರಿಸಲಾಗಿತ್ತು. ಅದು ಹೀಗಿದೆ- 'ಎಚ್ಚರ ಕನ್ನಡವನ್ನೊಪ್ಪದ ಬೇರೆ ಯಾರಾದರೂ ಈ ಗೀತೆಯನ್ನು ಪ್ರಸಿದ್ಧ ಪಡಿಸಿದರೆ, ಅವರಿಗೆ ಒತ್ತಾಯದ ಕನ್ನಡ ದೀಕ್ಷೆ ಕೊಡಲಾಗುವುದು' - ಹರ್ ಬಂಡರ್. ಇದು ಬೇಂದ್ರೆಯವರ ಕನ್ನಡಾಭಿಮಾನವನ್ನೂ, ಕನ್ನಡ ಪ್ರೀತಿಯನ್ನೂ ತೋರಿಸುತ್ತದೆ. ಅದಕ್ಕೆ ಪ್ರತಿಸ್ಪಂದಿಯಾಗಿ ಕಾರಂತರಿಗೆ ಬರೆಯಲಾಗಲಿಲ್ಲವೋ, ಏನೋ ತಿಳಿಯದು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.