ಸಂಪಾದಕೀಯ

ವೇಳಾಪಟ್ಟಿ ಸಮಯೋಚಿತವಾಗಿರಲಿ

Published On :

ವಿವಿಧ ಹುದ್ದೆಗಳ ಅನುಸಾರ ಬೇರೆ ಬೇರೆ ಇಲಾಖೆಗಳಲ್ಲಿ ಅರ್ಜಿ ಆಹ್ವಾನಿಸಿದಂತೆಲ್ಲಾ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಶುಲ್ಕ ತೆತ್ತು ಅರ್ಜಿ ಸಲ್ಲಿಸಿ ಪರಿಶ್ರಮದಿಂದ ಅಧ್ಯಯನ ಮಾಡುತ್ತಾ ನೇಮಕಾತಿ ಪ್ರವೇಶ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವುದು ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳ ಪ್ರಸ್ತುತ ಸ್ಥಿತಿಯಾಗಿದೆ. ಒಂದು ನಿರ್ದಿಷ್ಟ ಹುದ್ದೆಯನ್ನು ಖಂಡಿತವಾಗಿಯೂ ಪಡೆದುಕೊಳ್ಳಬಹುದು ಎಂಬ ಆತ್ಮವಿಶ್ವಾಸದಿಂದ. ಆ ಹುದ್ದೆಯ ನೇಮಕಾತಿ ಪರೀಕ್ಷೆಗೆ ಮಾತ್ರ ತಯಾರಿ ಮಾಡಿಕೊಂಡು ನಿರಾಳವಾಗಿರುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯವಾಗಿದೆ. ಅರ್ಜಿ ಸಲ್ಲಿಸಲು ಅವಕಾಶ ಇರುವ ಎಲ್ಲಾ ಹುದ್ದೆಗಳಿಗೂ ಅರ್ಜಿ ಗುಜರಾಯಿಸಿ ಚಾತಕ ಪಕ್ಷಿಗಳಂತೆ ನೇಮಕಾತಿಯ ನಿರೀಕ್ಷೆಯಲ್ಲಿ ಕಾಲ ಕಳೆಯಬೇಕಾದ ಸಂದಿಗ್ಧತೆಯಲ್ಲಿ ಅಭ್ಯರ್ಥಿಗಳಿದ್ದಾರೆ. ಆದರೆ ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಪರೀಕ್ಷೆಗಳನ್ನು ನಡೆಸುವಾಗ ಈ ಮೇಲಿನ ಅಂಶಗಳನ್ನು ಗಮನಿಸದೇ ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸುತ್ತಿದೆ. ಕೆಪಿಎಸ್‌ಸಿ ನಿಗದಿಪಡಿಸಿದ ದಿನದಂದೇ ಮುಂಚಿತವಾಗಿ ನಿಗದಿಯಾದ ಬೇರೆ ಇಲಾಖೆಯ ಪರೀಕ್ಷೆಗಳಿರುವುದರಿಂದ ಎರಡೆರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಂಕಷ್ಟಪಡಬೇಕಾಗಿದೆ. ಅದರೊಂದಿಗೆ ಹುದ್ದೆಯ ಆಕಾಂಕ್ಷಿಗಳು ಪಾವತಿಸಿದ ಶುಲ್ಕ, ಸಿದ್ಧತೆಗಾಗಿ ವ್ಯಯಿಸಿದ ಸಮಯ, ಶ್ರಮ ಎಲ್ಲವೂ ವ್ಯರ್ಥವಾಗಿ, ಕಂಗಾಲಾಗಬೇಕಾಗಿದೆ. ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆಯು ಯುಜಿಸಿ ಪರೀಕ್ಷೆಯ ದಿನದಂದೇ ನಡೆಯಿತು. ಅಭ್ಯರ್ಥಿಗಳು ಕಾನೂನಿನ ಮೊರೆ ಹೋದರೂ ಪರೀಕ್ಷೆ ನಿಗದಿತ ದಿನದಂದೇ ನಡೆದವು. ಈಗ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 1750 ಎಸ್‌ಡಿಎಎ ಹುದ್ದೆಗಳಿಗೆ ಜನವರಿ 23 ಮತ್ತು 24ರಂದು ನೇಮಕಾತಿ ಪರೀಕ್ಷೆಯನ್ನು ನಡೆಸಲು ಕೆಪಿಎಸ್‌ಸಿ ನಿರ್ಧರಿಸಿದೆ. ಆದರೆ ಅದೇ ದಿನಾಂಕದಂದು ರೈಲ್ವೆ ಇಲಾಖೆಯ ಅರೆವೈದ್ಯಕೀಯ ಹುದ್ದೆಗಳಿಗೆ ಸಂಬಂಧಿಸಿದ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಮತ್ತು ಹೈದರಾಬಾದ್ ವಲಯಗಳಲ್ಲಿ ನಡೆಸುವ ಬಗ್ಗೆ ತಿಂಗಳುಗಳ ಹಿಂದೆಯೇ ರೈಲ್ವೆ ಇಲಾಖೆ ವೇಳಾಪಟ್ಟಿ ಬಿಡುಗಡೆಗೊಳಿಸಿತ್ತು. ಈಗ ಎರಡೂ ಹುದ್ದೆಗಳಿಗೂ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಆದ್ದರಿಂದ ಕೆಪಿಎಸ್‌ಸಿ ವೇಳಾಪಟ್ಟಿ ನೀಡುವಾಗ ಅನ್ಯ ಇಲಾಖೆಗಳ ಪರೀಕ್ಷೆಗಳನ್ನು ಗಮನಿಸಿ ಅಭ್ಯರ್ಥಿಗಳಿಗೆ ಸೂಕ್ತ ಎನಿಸುವ ಸಮಯೋಚಿತ ದಿನಾಂಕಗಳನ್ನು ನಿಗದಿಪಡಿಸಲಿ. ಸದ್ಯ ಈ ಪರೀಕ್ಷೆಯ ದಿನಾಂಕಗಳನ್ನು ಮರುಪರಿಶೀಲಿಸಬೇಕಾಗಿ ವಿನಂತಿ.
-ಸಂದೇಶ್. ಎಚ್.ನಾಯ್ಕ್, ಹಕ್ಲಾಡಿ, ಕುಂದಾಪುರ

ಖಾಸಗಿ ಹಿತಾಸಕ್ತಿ

ಕೇಂದ್ರ ಸರ್ಕಾರ ಸಗಟು ಖರೀದಿದಾರರಿಗೆ ಡೀಸೆಲ್ ದರವನ್ನು ಲೀಟರ್‌ಗೆ ರೂ. 11.95 ಹೆಚ್ಚಿಸಿರುತ್ತದೆ. ಖಾಸಗಿ ಖರೀದಿದಾರರಿಗೆ ಲೀಟರ್‌ಗೆ 50 ಪೈಸೆ ಮಾತ್ರ ಹೆಚ್ಚಿಸಿರುತ್ತದೆ. ಇದು ಖಾಸಗಿ ಸಂಸ್ಥೆಯವರಿಗೆ ಅನುಕೂಲ ಮಾಡಿಕೊಡುವ ದುರುದ್ದೇಶಪೂರಿತವಾಗಿರುತ್ತದೆ. ನಮ್ಮ ರಾಜ್ಯ ಸರ್ಕಾರದ ಸಾರಿಗೆ ಸಂಸ್ಥೆಯಾದ ಕ.ರಾ.ರ.ಸಾ.ಸಂ. ಯು ದೇಶದ ಸಾರ್ವಜನಿಕ ವಲಯದಲ್ಲೇ ತನ್ನ ಅತ್ಯುನ್ನತ ಸೇವೆಗೆ ಹೆಸರಾಗಿದೆ. ಅಂತೆಯೇ, ನಮ್ಮ ರೈಲ್ವೆ ಸಾರಿಗೆಯು ವಿಶ್ವದಲ್ಲಿಯೇ ಅತಿ ದೊಡ್ಡ ಹಾಗೂ ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿರುತ್ತದೆ. ಅವೈಜ್ಞಾನಿಕ ರೀತಿಯ ಡೀಸೆಲ್ ದರ ಏರಿಕೆಯಿಂದ ಇವುಗಳು ಮುಂಬರುವ ದಿನಗಳಲ್ಲಿ ನಷ್ಟದಲ್ಲಿ ನಡೆದು, ನಷ್ಟ ಭರಿಸಲಾಗದೆ ಮುಂದೊಂದು ದಿನ ಮಾರಾಟದ ವಸ್ತುವಾಗಿ ಖಾಸಗಿಯವರ ಪಾಲಾಗಲಿದೆ. ನಮ್ಮ ನಾಡಿನ ಪ್ರಜೆಗಳು, ಆಳುವ ಪ್ರಭುಗಳು ಏನು ತೀರ್ಮಾನ ತೆಗೆದುಕೊಂಡರೂ, ಅದನ್ನು ಮೂಕಪ್ರೇಕ್ಷಕರಂತೆ ಎಲ್ಲದನ್ನೂ ಸಹಿಸಿಕೊಳ್ಳುವ ಸಹನಾಮಯಿಗಳು.
-ಶಾರದ ಗುದ್ಲಪ್ಪ, ಚಿತ್ರದುರ್ಗ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.