ತಪ್ಪಾಯ್ತು ತಿದ್ಕೋತೀವಿ
ಮೈಸೂರಿನಿಂದ ನಾಗರಾಜ ಅವರು ಬರೆಯುತ್ತಾರೆ- 'ದಯವಿಟ್ಟು ಕ್ರೀಡಾಪುಟದತ್ತ ಗಮನಹರಿಸಿ. ನೀವು ಅತಿ ಕಡಿಮೆ ಕ್ರೀಡಾ ಸುದ್ದಿ ನೀಡುತ್ತಿದ್ದೀರಿ. ಹಾಕಿ ನಮ್ಮ ರಾಷ್ಟ್ರೀಯ ಕ್ರೀಡೆ ಯಾಗಿದ್ದರೂ, ಅದರ ಕುರಿತ ಸುದ್ದಿಯನ್ನು ಹಾಕಿ ಎಂದು ನಿಮ್ಮನ್ನು ಒತ್ತಾಯಿಸುವ ಸ್ಥಿತಿ ಬಂದಿದೆ. ಯಾಕೆಂದರೆ ನೀವು ಆ ಸುದ್ದಿಯನ್ನು ಬದಿಗೆ 'ಹಾಕಿ'ದ್ದೀರಿ. ತಪ್ಪುಗಳಂತೂ ಅಪಾರ. ಜ.24ರಂದು ಟೆನ್ನಿಸ್ ಸುದ್ದಿಯಲ್ಲಿ 'ಮರ್ರೆ ಸೆಮಿಫೈನಲ್ಗೆ' ಓಕೆ. ಆದರೆ ಅವರು ಹೇಗೆ ಸೋಂಗಾ ಅವರನ್ನು ಎದುರಿಸಲಿದ್ದಾರೆ? ಯಾಕೆಂದರೆ ರೋಜರ್ ಫೆಡರರ್ ಅವರು ಸೋಂಗಾ ಅವರನ್ನು ಸೋಲಿಸಿದ್ದಾರೆ. ಯಾಕೆ ನಿಮ್ಮ ವರದಿಗಾರರು ಪಂದ್ಯಗಳನ್ನು ಸರಿಯಾಗಿ ವೀಕ್ಷಿಸುವುದಿಲ್ಲ?' ಎಂದು ಪ್ರಶ್ನಿಸಿದ್ದಾರೆ.
ಕ್ರೀಡಾ ವರದಿಗಳಲ್ಲಿ ಪ್ರಕಟವಾಗುವ ತಪ್ಪುಗ ಳನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅವು ನಿಧಾನವಾಗಿ ಪರಿಣಾಮಬೀರುತ್ತಿವೆ. ತಪ್ಪುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಚೇರಿಯಲ್ಲಿ ಟಿವಿ ಇದೆ. ಆದರೆ ಕ್ರೀಡಾ ವರದಿಗಾರರಿಗೆ ಎಲ್ಲ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಕ್ರೀಡೆಗೆ ಸಂಬಂಧಿಸಿದ ಬೇರೆ ಸುದ್ದಿಗಳನ್ನೂ ಅವರು ಬರೆಯಬೇಕಾಗುತ್ತದೆ. ಆದ್ದರಿಂದ ಪಂದ್ಯ ವೀಕ್ಷಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಆದರೆ ಪಂದ್ಯ ವೀಕ್ಷಿಸಲು ಸಾಧ್ಯವಾಗಿಲ್ಲ ಎಂಬುದು ತಪ್ಪಿಗೆ ನೆಪವಾಗಲು ಸಾಧ್ಯವಿಲ್ಲ. ಬರೆಯಬೇಕಾದರೆ ಏಕಾಗ್ರತೆ ಇಲ್ಲದಿದ್ದಾಗ ಇಂತಹ ತಪ್ಪುಗಳಾಗುತ್ತವೆ.
ಬೆಂಗಳೂರಿನಿಂದ ಎಂ.ಪಿ. ಬದ್ರಿನಾಥ್ ಅವರು ಬರೆಯುತ್ತಾರೆ- 'ಜ.15ರಂದು ಮುಖಪುಟದಲ್ಲಿ 'ಭೂತಾಯಿ ಮಡಿಲಿಗೆ' ಶೀರ್ಷಿಕೆಯಲ್ಲಿ 'ಹಿಂದೂ ಸಂಪ್ರದಾಯದ ವಿಧಿ ವಿಧಾನಗಳಂತೆ ನೂತನ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಶ್ರೀಗಳ ಅಂತ್ಯ ಸಂಸ್ಕಾರ ನೆರವೇರಿಸಿದರು' ಎಂದಿದೆ. ಇದನ್ನು ಓದಿದ ಕೂಡಲೇ ಯಾರಿಗೇ ಆದರೂ ಗೊಂದಲವುಂಟಾಗುವುದಿಲ್ಲವೇ? ವಾಸ್ತವವಾಗಿ ಅದು ನೂತನ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಯವರು ಹಿಂದೂ ಸಂಪ್ರದಾಯದ ವಿಧಿ ವಿಧಾನಗಳಂತೆ ಶ್ರೀಗಳ ಅಂತ್ಯಸಂಸ್ಕಾರ ನೆರವೇರಿಸಿದರು ಎಂದಿರಬೇಕಿತ್ತು ಅಲ್ಲವೇ?' ಎಂದು ಪ್ರಶ್ನಿಸಿದ್ದಾರೆ.
ಸುದ್ದಿ ಬರೆಯುವಾಗ ಎರಡು ಹೆಸರುಗಳನ್ನು ಒಟ್ಟಿಗೆ ಬರೆದಾಗ ಈ ರೀತಿಯ ಗೊಂದಲವಾಗುತ್ತದೆ. ಇದರ ಬಗ್ಗೆ ಈ ಹಿಂದೆ ಕೂಡ ಈ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ವಿಧಿವಶರಾದ ಸುದ್ದಿಯಲ್ಲಿ ಎರಡು ಬಾರಿ ಇದೇ ರೀತಿಯ ತಪ್ಪಾಗಿದೆ. ಒಂದೇ ವಾಕ್ಯದಲ್ಲಿ ಎರಡು ಹೆಸರುಗಳನ್ನು ಬಳಸುವಾಗ ಅವುಗಳ ನಡುವೆ ಅವರು ಒಂದಾದರೂ ಬಳಸಬೇಕು. 'ನೂತನ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶ್ರೀಗಳ ಅಂತ್ಯ ಸಂಸ್ಕಾರ ನೆರವೇರಿಸಿದರು' ಎಂದಾದರೂ ಬರೆಯಬಹುದಿತ್ತು. ಅದಕ್ಕಿಂತ ಎರಡು ಹೆಸರುಗಳು ಒಟ್ಟಿಗೆ ಬಾರದಂತೆ ಎಚ್ಚರಿಕೆಯಿಂದ ವಾಕ್ಯ ರಚನೆ ಮಾಡುವುದು ಉತ್ತಮ ಮಾರ್ಗ.
-ವಿಶ್ವೇಶ್ವರಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

