ತಪ್ಪಾಯ್ತು ತಿದ್ಕೋತೀವಿ
ತುಮಕೂರಿನಿಂದ ಕುರೂಡಿ ರಾಘವೇಂದ್ರ ಅವರು ಬರೆಯುತ್ತಾರೆ- 'ಪ್ರತಿದಿನ 'ಕನ್ನಡಪ್ರಭ'ದಲ್ಲಿ ಜಿಲ್ಲಾವಾರು ಸಂಬಂಧಿಸಿದಂತೆ ಪ್ರತ್ಯೇಕ 2-3 ಪುಟಗಳು ಇರುತ್ತವೆ. ಅದೇರೀತಿ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲೆ ಹೆಸರು ಮತ್ತು ಆಯಾ ಜಿಲ್ಲೆ ಸಂಪೂರ್ಣ ವರದಿಯನ್ನು ನೀಡುತ್ತಿರುವುದು ಸರಿಯಷ್ಟೇ? ಆದರೆ ಹಲವಾರು ಬಾರಿ ತುಮಕೂರು ಜಿಲ್ಲೆ ಎಂದು ಮುದ್ರಿಸಿದ ಪುಟದಲ್ಲಿ ಹಾಸನ, ಮೈಸೂರು ಅಥವಾ ಮಂಡ್ಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸುದ್ದಿಗಳು ಪ್ರಕಟಗೊಳ್ಳುತ್ತಿವೆ. ಈ ಬಗ್ಗೆ ಪ್ರತಿದಿನ ಗಮನಿಸಿ ಈಗಾಗಲೇ ನಾನು ಹಲವು ಬಾರಿ 'ಕನ್ನಡಪ್ರಭ' ಪತ್ರಿಕೆ ಕಚೇರಿಗೆ ಕರೆ ಮಾಡಿ, ಈ ಬಗ್ಗೆ ಗಮನಹರಿಸುವಂತೆ ಕೋರಿರುತ್ತೇನೆ. ಆದರೂ ಈ ತಪ್ಪು ಮುಂದುವರಿಯುತ್ತಿದೆ. ಇನ್ನಾದರೂ ಸಂಬಂಧಿಸಿದ ಜಿಲ್ಲೆಯ ವರದಿ ಮಾತ್ರ ನೀಡುವುದು ಸೂಕ್ತ ಎಂದು ಭಾವಿಸುತ್ತೇನೆ' ಎಂದಿದ್ದಾರೆ.
ಆಯಾ ಜಿಲ್ಲೆಯ ಸುದ್ದಿಗೆ ಅವಕಾಶ ನೀಡಲೆಂದೇ ಜಿಲ್ಲಾ ಪುಟಗಳನ್ನು ನೀಡಲಾಗುತ್ತದೆ. ಎಲ್ಲ ದಿನವೂ ಎಲ್ಲ ಜಿಲ್ಲೆಯಲ್ಲೂ ಜಿಲ್ಲಾ ಪುಟಕ್ಕೆ ಸಾಕಾಗುವಷ್ಟು ಸುದ್ದಿ ಲಭ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅಕ್ಕಪಕ್ಕದ ಜಿಲ್ಲೆಯ ಸುದ್ದಿ ಬಳಸಿಕೊಳ್ಳಲಾಗುತ್ತದೆ. ಅಲ್ಲದೇ, ಕೆಲವೊಮ್ಮೆ ಅಕ್ಕಪಕ್ಕದ ಜಿಲ್ಲೆಯ ಪ್ರಮುಖ ಸುದ್ದಿಯನ್ನು ಕೂಡ ಜಿಲ್ಲಾ ಪುಟಕ್ಕೆ ತೆಗೆದುಕೊಳ್ಳುವ ರೂಢಿಯಿದೆ. ಜಿಲ್ಲಾ ಪುಟಕ್ಕೆ ಆ ಜಿಲ್ಲೆಯ ಸುದ್ದಿಯನ್ನು ಕೈಬಿಟ್ಟು ಬೇರೆ ಜಿಲ್ಲೆಯ ಸುದ್ದಿಗಳನ್ನು ಪ್ರಕಟಿಸಿದರೆ ಆಗ ಕುರೂಡಿ ರಾಘವೇಂದ್ರ ಅವರ ದೂರನ್ನು ಪರಿಗಣಿಸಬಹುದು.
ಮೈಸೂರು ಚಾಮರಾಜಪುರಂದಿಂದ ಕೊ.ಸು. ನರಸಿಂಹಮೂರ್ತಿ ಅವರು ಬರೆಯುತ್ತಾರೆ- 'ಜ.14ರಂದು (ಪುಟ 7) 'ಯಾರು ಈ ಸಾಯಿಬಣ್ಣ' ಎಂಬ ಬಾಕ್ಸ್ ಸುದ್ದಿಯಲ್ಲಿ '...ಕಣ್ಣಾರೆ ಕಂಡಿದ್ದ ಶರಣಪ್ಪ ಎಂಬವರ ಸಾಕ್ಷಿಯೇ ಸಾಯಿಬಣ್ಣ ನೇಣಿಗೆ ಪ್ರಮುಖವಾಗಿದೆ' ಎಂದು ಬರೆಯಲಾಗಿದೆ. ಇದು '....ಎಂಬವರ ಸಾಕ್ಷ್ಯವೇ...' ಎಂದಾಗಬೇಕಿತ್ತು. ಇಲ್ಲ 'ಶರಣಪ್ಪ ಎಂಬ ಸಾಕ್ಷಿಯ ಹೇಳಿಕೆಯೇ ಸಾಯಿಬಣ್ಣ ನೇಣಿಗೆ ಕಾರಣವಾದ ಅಂಶ' ಎಂದಾಗಬೇಕಿತ್ತು. ನಿಮ್ಮ ವರದಿಗಾರರು 'ಸಾಕ್ಷಿ' ಹಾಗೂ 'ಸಾಕ್ಷ್ಯ' ಪದಗಳ ಅರ್ಥವನ್ನು ಗ್ರಹಿಸದೇ ಮಾಡಿರುವ ತಪ್ಪನ್ನು ನೀವ್ಯಾರು ಗಮನಿಸಿಲ್ಲ' ಎಂದಿದ್ದಾರೆ.
ತೀರ್ಥಹಳ್ಳಿಯಿಂದ ಕುತ್ಪಾಡಿ ಜಯಪ್ರಕಾಶ ಹೆಗ್ಡೆ ಅವರು ಬರೆಯುತ್ತಾರೆ- 'ಜ.14ರಂದು 'ತುಂಗೆಯಲ್ಲಿ ಸಂಭ್ರಮದ ತೆಪ್ಪೋತ್ಸವ' ಶಿರೋನಾಮೆ ಅಡಿಯಲ್ಲಿ ತುಂಗಾನದಿಯಲ್ಲಿ 'ವಿದ್ಯುತ್‌ತ್ದೀಪ' ಎಂದು ಅಚ್ಚಾಗಿದೆ. ಉಚ್ಛಾರಣೆಗೆ ಸರಿಯಿದ್ದರೂ ಬರಹ ತಪ್ಪಾಗಿದೆ. 'ವಿದ್ಯುತ್‌ದೀಪ' ಎಂದಾಗಬೇಕಿತ್ತು. ಮುಂದುವರಿದು 'ರಾಮೇಶ್ವರನ ತೆಪ್ಪೋತ್ಸವ ವಿಜೃಂಭಣೆಯಿಂದ' ಎಂದಷ್ಟೇ ಇದೆ. 'ನೆರವೇರಿತು' ಎಂಬ ಪದವೇ ಮಾಯವಾಗಿದೆ' ಎಂದಿದ್ದಾರೆ.
ಕುತ್ಪಾಡಿ ಜಯಪ್ರಕಾಶ ಹೆಗ್ಡೆ ಅವರು ಹೇಳಿದಂತೆ 'ವಿದ್ಯುತ್‌ದೀಪ' ಎಂದು ಬರೆದರೆ, ಅದು ಕೂಡ ತಪ್ಪಾಗುತ್ತದೆ. 'ವಿದ್ಯುದ್ದೀಪ' ಎಂಬುದು ಸರಿಯಾದ ಬಳಕೆ. ಇದು 'ಯಣ್' ಸಂಧಿಯ ಪ್ರಭಾವ!
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

