ಟಿಪ್ಪು ಮಾಡಿರುವ ಘೋರ ತಪ್ಪೇನು?
ಕೇಂದ್ರ ವಿಶ್ವವಿದ್ಯಾಲಯದ ಹೆಸರನ್ನು ಟಿಪ್ಪು ವಿ.ವಿ.ಯಾಗಿ ಹೆಸರಿಸಲು ಹಿರಿಯ ಸಂಶೋಧಕ ಚಿ.ಮೂ. ರವರು ವಿರೋಧಪಡಿಸುತ್ತಿರುವುದು ಸಮಂಜಸವಲ್ಲ. ಇತಿಹಾಸ ಕೆದಕಿದಾಗ ಅನೇಕ ರಾಜರುಗಳಲ್ಲಿ ಅವರವರ ವ್ಯಕ್ತಿಗತ ನ್ಯೂನತೆಗಳು ಇರಲು ಸಾಧ್ಯವಿದೆ ಎನಿಸುತ್ತದೆ. ಈಗಿನ ರಾಜಕಾರಣದಷ್ಟು ಹೊಲಸಿರಲಿಲ್ಲ. ಈಗ ಬರೀ ಜಾತಿ ರಾಜಕಾರಣ ನಡೆಯುತ್ತಿರುವುದು ಚಿ.ಮೂ. ರವರಿಗೆ ತಿಳಿದಿಲ್ಲವೇ? ಆಗಿನ ನಮ್ಮ ರಾಜರುಗಳ ನ್ಯೂನತೆಗಳನ್ನು ಅರಿತ ಯೂರೋಪಿಯನ್ನರು ನಮ್ಮ ದೇಶ ಲೂಟಿ ಮಾಡಲು ಕಾರಣವಾಯಿತೆ ವಿನಃ ಸ್ವಂತಃ ಅವರು ಬರಲು ಸಾಧ್ಯವಿಲ್ಲ. ನಮ್ಮ- ನಮ್ಮಲ್ಲೇ ತಿಕ್ಕಾಟವಾಗಿ ಮೂರನೆಯವನು ಲಾಭ ಪಡೆದಿರುವುದು ಇತಿಹಾಸ ತಾನೆ? ಮನುಜನೆಂದ ಮೇಲೆ ಸಾಧಾರಣ ತಪ್ಪು ಎಸಗುವುದು ಸಹಜ. ಹಾಗಂತ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ಅಳೆಯಲು ಸಾಧ್ಯವೇ?! ಸಣ್ಣ ತಪ್ಪು ಹಗರಣವಾಗಬಾರದು! ಟಿಪ್ಪು ಕೆಲವರನ್ನು ದ್ವೇಷಿಸುವುದಾದರೆ ಬ್ರಿಟಿಷರ ವಿರುದ್ಧ ಹೋರಾಡಿ ತನ್ನ ಮಕ್ಕಳನ್ನೇ ರಣರಂಗವಾಗಿ ತ್ಯಾಗ ಮಾಡಿ, ಸಾಯುತ್ತಿರಲಿಲ್ಲ. ಎಲ್ಲವೂ ಕನ್ನಡ ನಾಡಿಗಾಗಿ, ಈ ಮಣ್ಣಿಗಾಗಿ, ಎಲ್ಲರ ಹಿತದಿಂದ ಸರಿ! ಇಲ್ಲದಿದ್ದಲ್ಲಿ 'ಮೈಸೂರು ಹುಲಿ' ಬಿರುದೇಕೆ ಬರುತ್ತಿತ್ತು? ಟರ್ಕಿ ಸ್ಥಾನದಿಂದ ಬಂದಂತಹ ಕೆಲವು ಮುಸ್ಲಿಂ ದೊರೆಗಳು ದೇಶವನ್ನು ಕೊಳ್ಳೆ ಹೊಡೆದಿದ್ದಾರೆ ಎನ್ನಬಹುಹು! ಹಾಗಂತ ಮುಸ್ಲಿಂರೆಲ್ಲ ಕೆಟ್ಟ ದೊರೆಗಳೆಂದು ಬಿಂಬಿಸುವುದು ತರವಲ್ಲ. ಇದು ಮೂಲಭೂತ ವಾದಿಗಳಾಗಲು ಕಾರಣವಿರಬಹುದೆನ್ನಲಾಗುವುದು. ಯಾರೋ ಮಾಡಿದ ತಪ್ಪಿಗಾಗಿ ಮುಸ್ಲಿಂ ಸಂಕುಲಕ್ಕೆ ಕೊಂಡಿ ಹಾಕುವುದು ಸರಿಯಲ್ಲ.
ಹೈದರಾಲಿ ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಲು ದಿವಾನ್ ಪೂರ್ಣಯ್ಯ, ಕಳ್ಳಿಬೇಲೆಮನೆ ನರಸಪ್ಪಯ್ಯ (ಚಿತ್ರದುರ್ಗದ ಮಂತ್ರಿ) ದಾಯಾದಿ ದೊಡ್ಡ ಮದಕರಿ ನಾಯಕ, ಇನ್ನಿತರರು ಕಾರಣವೆಂಬುದು ಜನಪದ (ಐತಿಹ್ಯ) ಮಾತಾಗಿದೆ. ಮುಸ್ಲಿಂರನ್ನು ಕಳ್ಳರಂತೆ ಬಿಂಬಿಸುವುದು ಸರಿಯೇ?! ಮುಸ್ಲಿಂರು ಸಹ ಇದೇ ಭರತ ಭುವಿಯಲ್ಲಿ ಮಣ್ಣಾಗುವರೆ ಹೊರತು ಬೇರೆಲ್ಲಿ ಹೇಳಿ!
-ಬಿ. ಮೊಹಿದ್ದೀನ್ ಖಾನ್, ಚಿತ್ರದುರ್ಗ.
ಪಕ್ಷಾಂತರಿಗಳೋ ಪಕ್ಷಾಂತರಿಗಳು!
ಕಳ್ಳರು ಸುಳ್ಳರು ಖದೀಮರು- ಯಾರು ಹಿತವರು ನಮಗೆ ಈ ಮೂವರಲ್ಲಿ ಎಂಬ ಪ್ರಶ್ನೆ ಮತದಾರನಲ್ಲಿ ಈಗ ಉದ್ಭವವಾಗುತ್ತಿದೆ. ಯಾರನ್ನೂ ಆರಿಸಲಾಗದೇ ಯಾರನ್ನಾದರೂ ಆರಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಮತದಾರನೀಗ ಕಂಗೆಟ್ಟಿದ್ದಾನೆ. ಬಿಸಿಲಿನ ಬೇಗೆಯನ್ನು ಮೀರಿದ ಮಾನಸಿಕ ಬೇಗೆಯಿಂದ ಬಳಲುತ್ತಿದ್ದಾನೆ. ದೇಶ, ಭಾಷೆ, ಪಕ್ಷ, ನೀತಿ, ನಿಷ್ಠೆ ಯಾರಿಗೂ ಬೇಡ. ಎಲ್ಲರಿಗೂ ಬೇಕಾಗಿರುವುದು ಅಧಿಕಾರ ಮಾತ್ರ. ಅಧಿಕಾರಕ್ಕಾಗಿ ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ನಮ್ಮ ರಾಜಕಾರಣಿಗಳಲ್ಲಿ ಬಹುಪಾಲು ಪಕ್ಷಾಂತರಿಗಳು. ಪ್ರತಿಯೊಬ್ಬರೂ ಹುಡುಕುವುದು ಜೇನಿರುವ ಪುಷ್ಪವನ್ನು. ಅದು ಯಾರ ಮನೆಯದ್ದಾದರೇನಂತೆ, ಯಾರ ಒಡೆತನದಲ್ಲಿದ್ದರೆನಂತೆ, ಸಕ್ಕರೆ ಸಿಕ್ಕರೆ ಸಾಕಲ್ಲವೇ? ಪ್ರಸ್ತುತ ಪಕ್ಷಾಂತರ ಪ್ರಕರಣಗಳನ್ನು ನೋಡಿ ಯಾರಿಗಾದರೂ ಹೇಸಿಗೆ ಅನಿಸುತ್ತಿಲ್ಲವೇ? ಇವತ್ತು ಅಧಿಕಾರದ ಆಸೆಯಿಂದ ಪಕ್ಷವನ್ನು ಬಿಡುವವರು ನಾಳೆ ಇನ್ಯಾವುದೋ ಆಮಿಷಕ್ಕೆ ಒಳಗಾಗಿ ದೇಶವನ್ನೇ ಒತ್ತೇ ಇಡಲಾರರು ಎಂಬುದರ ಬಗ್ಗೆ ನಂಬಿಕೆ ಏನು? ಇಂತಹ ಅಯೋಗ್ಯ ರಾಜಕಾರಣಿಗಳಿಗೆ ನಾವು ಮತ ಹಾಕಬೇಕೇ?
-ನಾಗರಾಜ ಎ. ಆರ್. ಕೊಂಡಜ್ಜಿ, ದಾವಣಗೆರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

