ಕೈಲಾಸಂ ಮೇಲೆ ಶಿವರಾಂ ಕೋಪಗೊಂಡದ್ದೇಕೆ?
ಕನ್ನಡದ ನಗೆಯ ಮಾಸಪತ್ರಿಕೆ 'ಕೊರವಂಜಿ' ಖ್ಯಾತಿ ಡಾ. ಶಿವರಾಂ 'ರಾಶಿ' ಎಂದೇ ಪ್ರಸಿದ್ಧರು. ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಒಮ್ಮೆ ಹಳೆಯ 'ಪಂಚ್' ಪತ್ರಿಕೆಗಳನ್ನು ಹರಾಜು ಹಾಕಲಾಯಿತು. ಶಿವರಾಂ ಮೂರು ರುಪಾಯಿಗಳಿಗೆ ಕೂಗಿದರು. ಆದರೆ ಪ್ರಿನ್ಸಿಪಾಲರು ಅದನ್ನು ನಾಲ್ಕು ರುಪಾಯಿಗೆ ಕೊಂಡು ಅವುಗಳನ್ನು ಶಿವರಾಂ ಅವರಿಗೆ ಉಡುಗೊರೆಯಾಗಿ ನೀಡಿದರು. ಇದು ಕೊರವಂಜಿಯ ಉದಯಕ್ಕೆ ಕಾರಣವಾಯಿತು.
1928- ಅವರ ವಿದ್ಯಾಭ್ಯಾಸದ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ. ಜವಾಬ್ದಾರಿ ಇಲ್ಲದ ತಂದೆ, ತಬ್ಬಲಿಗಳಂತಿದ್ದ ತಮ್ಮ, ತಂಗಿಯರು. ಇದರ ನಡುವೆ ಶಿವರಾಂ ಅವರ ವೈದ್ಯಕೀಯ ಶಿಕ್ಷಣ, ವಿವಾಹವಾದರೂ ತವರಿನಲ್ಲಿದ್ದ ಪತ್ನಿ, ಬಡತನದಿಂದಾಗಿ ಫೀಸು ಕಟ್ಟಲೂ ಪರದಾಟ. ಹಣಕಾಸಿನ ಮುಗ್ಗಟ್ಟಿನಿಂದ ಹೊರಬರಲು ಸಾಧ್ಯವಾಗದೆ ಒದ್ದಾಡುವಂತಾಯಿತು. ಆಗ ಶಿವರಾಂ ಓದು ನಿಲ್ಲಿಸಿ ಕೆಲಸದ ಬೇಟೆಗೆ ತೊಡಗಿದರು. ಆಗ ಭವನಾನಿ ಎಂಬ ಚಿತ್ರ ನಿರ್ಮಾಪಕರು 'ಮೃಚ್ಛಕಟಿಕ' ಆಧಾರಿತ ಸಿನಿಮಾ ತಯಾರಿಸುತ್ತಿದ್ದರು. ಅದಕ್ಕಾಗಿ ನಟನಟಿಯರ ಆಯ್ಕೆ ನಡೆದಿತ್ತು. ಆ ಚಿತ್ರದಲ್ಲಿ ಕೈಲಾಸಂ ಅವರದು ಶಕಾರನ ಪಾತ್ರ. ಶಿವರಾಂ ಅವರು ಭವನಾನಿಯವರನ್ನು ಕಂಡು ತಮಗೂ ಒಂದು ಪಾತ್ರನೀಡಬೇಕೆಂದು ದುಂಬಾಲು ಬಿದ್ದರು. ಕೊನೆಗೆ ತಿಂಗಳಿಗೆ ಎಪ್ಪತ್ತೈದು ರುಪಾಯಿ ವೇತನದ ಮೇಲೆ ಶಿವರಾಂ ಅವನರನ್ನು ಒಂದು ಪಾತ್ರ ನಿರ್ವಹಿಸಲು ನೇಮಿಸಿಕೊಂಡರು. ಶಿವರಾಂ ಅವರ ಪರಿಚಯವಿದ್ದ ಕೈಲಾಸಂ ಅವರಿಗೆ ಇದು ಸರಿಕಾಣಲಿಲ್ಲ. ವೈದ್ಯಕೀಯ ಶಿಕ್ಷಣ ಮುಂದುವರೆಸದೆ ಸಿನಿಮಾದಲ್ಲಿ ನಟಿಸಲು ಬಂದ ಅವರ ನಿರ್ಧಾರವನ್ನು ಕೈಲಾಸಂ ಬಲವಾಗಿ ವಿರೋಧಿಸಿದರು. ಕೂಡಲೇ ಅವರು ಭವನಾನಿಯವರ ಬಳಿ ತೆರಳಿ, ಶಿವರಾಂ ಅವರ ನೇಮಕವನ್ನು ರದ್ದು ಮಾಡದಿದ್ದರೆ ತಾವು ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಖಡಾಖಂಡಿತವಾಗಿ ನುಡಿದರು. ಯಾವುದೇ ಕಾರಣಕ್ಕೂ ಕೈಲಾಸಂ ಅವರನ್ನು ಕಳೆದುಕೊಳ್ಳಲು ಇಷ್ಟಪಡದ ಭವನಾನಿ ಶಿವರಾಂ ಅವರನ್ನು ಕರೆದು ಅವರಿಗೆ ಹೊರಡಲು ತಿಳಿಸಿದರು.
ಅಲ್ಲದೆ ಈ ನಿರ್ಧಾರ ಕೈಗೊಳ್ಳಲು ಕೈಲಾಸಂ ಅವರೇ ಕಾರಣ ಎನ್ನುವುದನ್ನೂ ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಶಿವರಾಂ, ಕೈಲಾಸಂ ಬಳಿ ತೆರಳಿ ತಮ್ಮ ಅಸಮಾಧಾನವನ್ನು ತೋಡಿಕೊಂಡರು. ಅದಕ್ಕೆ ಕೈಲಾಸಂ ನಸುನಕ್ಕು ಹೇಳಿದರು, 'ನೀನೆಂಥಾ ಮೂರ್ಖ? ವ್ಯೆದ್ಯನಾಗು, ರೋಗಿಗಳ ಸೇವೆ ಮಾಡು, ಚೆನ್ನಾಗಿ ಬದುಕು, ಭದ್ರತೆಯ ಜೀವನ ನಿನ್ನದಾಗುತ್ತದೆ. ಅದನ್ನು ಬಿಟ್ಟು ಸಿನಿಮಾದ ಅಪಾಯ ಮಾರ್ಗಗಳನ್ನು ಹಿಡಿಯುತ್ತೀಯಾ?' ಎಂದು ಬೈದು ಬುದ್ಧಿ ಹೇಳಿದರು. ಕೈಲಾಸಂ ಮಾತುಗಳು ರಾಶಿ ಮೇಲೆ ಅಗಾಧ ಪರಿಣಾಮ ಬೀರಿತು. ಇದರಿಂದಾದ ಲಾಭವೆಂದರೆ, ಕನ್ನಡಕ್ಕೊಬ್ಬ ಒಳ್ಳೆಯ ಬರಹಗಾರ, ನಾಡಿಗೆ ಒಬ್ಬ ಸಮರ್ಥ ವ್ಯೆದ್ಯನೂ ಸಿಕ್ಕ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

