ಅಡ್ಡಿಯಾಗದ ಅಂಗ ವೈಕಲ್ಯತೆ
ವಿಲ್ಮಾ ರುಡಾಲ್ಫ್ ಕಥೆ ನಮಗೆಲ್ಲಾ ಸ್ಫೂರ್ತಿ ನೀಡುವಂತಹುದು. ಬಡತನದ ಮನೆಯಲ್ಲಿ ಹುಟ್ಟಿ ನಾಲ್ಕು ವರ್ಷದ ಹಸುಳೆಯಾಗಿದ್ದಾಗ ನ್ಯುಮೋನಿಯಾ ಜ್ವರದಿಂದ ನರಳಿದ್ದಲ್ಲದೆ, ಪೋಲಿಯೋದಿಂದಾಗಿ ಈಕೆಯ ಒಂದು ಕಾಲು ಶಕ್ತಿ ಕಳೆದುಕೊಂಡಿತು. ಯಾವಾಗಲೂ ಕಾಲಿಗೆ ಬಿಗಿಸಿ ಕಟ್ಟಿಕೊಂಡು ನಡೆಯಬೇಕಾಗಿತ್ತು. ಅವಳೆಂದೂ ತನ್ನ ಬರಿಕಾಲನ್ನು ನೆಲಕ್ಕೂರಬಾರದೆಂದು ವೈದ್ಯರು ಎಚ್ಚರಿಸಿದ್ದರು. ಆದರೆ ಹೆತ್ತಕರುಳು, ಅವಳ ತಾಯಿಗೆ ಈ ಕಟ್ಟುಪಾಡುಗಳಲ್ಲಿ ತನ್ನ ಮಗಳು ಜೀವಿಸುವುದು ಇಷ್ಟವಿರಲಿಲ್ಲ. ಆದ್ದರಿಂದ ತನ್ನ ಪುಟ್ಟ ಮಗಳಿಗೆ ಪ್ರೋತ್ಸಾಹದಾಯಕ ನುಡಿಗಳನ್ನು ಹೇಳಿ ಅವಳಲ್ಲಿ ಆತ್ಮವಿಶ್ವಾಸ ತುಂಬಲು ಪ್ರಾರಂಭಿಸಿದಳು. ದೇವರು ಅವಳಿಗೆ ಎಲ್ಲ ರೀತಿಯ ಶಕ್ತಿ ಸಾಮರ್ಥ್ಯಗಳನ್ನು ನೀಡಿರುವುದಾಗಿಯೂ ಅದನ್ನುಪಯೋಗಿಸಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಂತಲೂ ಸದಾ ಹೇಳುತ್ತಿದ್ದಳು. ಹೀಗೆ ಅವಳಲ್ಲಿ ಧೈರ್ಯ ತುಂಬಿ ಆತ್ಮಸ್ಥೈರ್ಯವನ್ನು ಉದ್ದೀಪನಗೊಳಿಸುತ್ತಿದ್ದಳು. ಇವೆಲ್ಲಾ ಮಾತು ವಿಲ್ಮಾಳಲ್ಲಿ ಹೊಸ ಹುರುಪು ತುಂಬಿದವು. ಅವಳು ತನ್ನ ತಾಯಿಗೆ ಹೀಗೆ ಹೇಳುತ್ತಿದ್ದಳು, 'ಅಮ್ಮ, ನಾನು ವಿಶ್ವದಲ್ಲಿಯೇ ಅತಿವೇಗದ ಓಟಗಾರ್ತಿಯಾಗಬೇಕು.' ಅದನ್ನು ಕೇಳಿ ತಾಯಿಗೆ ಸಂತೋಷವಾದರೂ ಮಗಳ ಪರಿಸ್ಥಿತಿ ನೆನೆದು ದುಃಖವಾಗುತ್ತಿತ್ತು. ವೈದ್ಯರ ಸಲಹೆ ಮೀರಿ ತನ್ನ ಒಂಭತ್ತನೇ ವಯಸ್ಸಿನಲ್ಲಿ ಕಾಲಿಗೆ ಬಿಗಿದುಕೊಂಡಿದ್ದ ಕಟ್ಟನ್ನು ಬಿಚ್ಚಿ ಬಿಸುಟು ಮೊದಲ ಹೆಜ್ಜೆಯನ್ನು ನೆಲದ ಮೇಲಿರಿಸಿದಳು. ತನ್ನ ಹದಿಮೂರನೇ ವಯಸ್ಸಿಗೆ ಮೊದಲ ಬಾರಿಗೆ ಓಟದ ಸ್ಫರ್ದೆಯಲ್ಲಿ ಭಾಗವಹಿಸಿ ಕಟ್ಟಕಡೆಯವಳಾಗಿ ಎಲ್ಲರ ಪರಿಹಾಸ್ಯಕ್ಕೆ ಗುರಿಯಾದಳು. ಹದಿನೈದನೇ ವಯಸ್ಸಿನಲ್ಲಿ ವಿಲ್ಮಾಗೆ ಟೆನ್ನಿಸನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಡ್ಟೆಂಪಲ್ ಎಂಬ ತರಬೇತುಗಾರನ ಪರಿಚಯವಾಯಿತು. ತಾನು ವಿಶ್ವದ ಅತಿ ವೇಗದ ಓಟಗಾರ್ತಿಯಾಗಬೇಕೆಂಬ ಆಸೆಯನ್ನು ಆತನ ಮುಂದೆ ವ್ಯಕ್ತಪಡಿಸಿದಳು. ಅವಳ ದೃಢ ನಿರ್ಧಾರದ ಮಾತುಕೇಳಿ, ಆತ ಹೇಳಿದ, 'ನಿನ್ನ ಸ್ಫೂರ್ತಿ ನೋಡಿದರೆ, ಖಂಡಿತಾ ನೀನೊಬ್ಬ ಅದ್ವಿತೀಯ ಆಟಗಾರ್ತಿಯಾಗುವುದರಲ್ಲಿ ಸಂಶಯವಿಲ್ಲ. ನಾನು ನಿನಗೆ ಸಹಾಯ ಮಾಡುತ್ತೇನೆ'. ಅಂದಿನಿಂದ ಅವಳ ಕಠಿಣ ತರಬೇತಿ ಪ್ರಾರಂಭವಾಯಿತು. ತರಬೇತುಗಾರನ ಸಲಹೆಯಂತೆ ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಓಟದ ಅಭ್ಯಾಸ ಮಾಡಿದಳು. ಪ್ರಾರಂಭದಲ್ಲಿ ತೊಂದರೆ ಎನಿಸಿದರೂ ಪರಿಶ್ರಮದ ಫಲವಾಗಿ ತನಗಿದ್ದ ನ್ಯೂನತೆಯನ್ನೂ ಮೀರಿ ವೇಗದ ಓಟಗಾರ್ತಿಯಾಗಿ ರೂಪುಗೊಂಡಳು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಂದೆಂದಿಗೂ ಸೋಲದ ಜುಟ್ಟಾ ಹೈನ್ ಎಂಬ ಓಟಗಾರ್ತಿಯನ್ನು ನೂರು ಮೀಟರ್ ಓಟದಲ್ಲಿ ಹಿಂದಿಕ್ಕಿ ಮೊದಲ ಸ್ವರ್ಣ ಪದಕ ಗಳಿಸಿದಳು. ನಂತರ ಇನ್ನೂರು ಮೀಟರ್ ಓಟ, ನಾಲ್ಕುನೂರು ಮೀಟರ್ ರಿಲೆ ಸ್ಫರ್ಧೆಯಲ್ಲಿ ಭಾಗವಹಿಸಿ ಅದರಲ್ಲಿಯೂ ಬಂಗಾರದ ಪದಕ ಗಳಿಸಿದಾಗ ತಾನು ಅಂದುಕೊಂಡಂತೆ ಸಾಧನೆಗೈದು ಒಂದು ಹೊಸ ದಾಖಲೆಯನ್ನೇ ಬರೆದಳು. 1960ರ ಒಲಿಂಪಿಕ್ಸ್‌ನಲ್ಲಿ ಒಬ್ಬ ಅಂಗವಿಕಲೆ ಮೂರು ಸ್ವರ್ಣಪದಕ ಗಳಿಸಿ ದಾಖಲೆ ಮಾಡಿದ್ದು ಕೇವಲ ಆತ್ಮವಿಶ್ವಾಸದಿಂದ. ಶ್ರದ್ಧೆ, ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದೆಂದು ವಿಲ್ಮಾ ಜಗತ್ತಿಗೆ ತೋರಿಸಿಕೊಟ್ಟಳು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

