ಶ್ರೀಮಂತಿಕೆಯನ್ನು ರಾಷ್ಟ್ರಕ್ಕೆ ಅರ್ಪಿಸಿದ ಸುಭಾನಿ
ಸ್ವಾತಂತ್ರ್ಯ ಸಂಗ್ರಾಮದ ದಿನಗಳವು. ಸರೋಜಿನಿ ನಾಯ್ಡು ರವರು ಗೋಖಲೆ ಮತ್ತು ಗಾಂಧೀಜಿಯವರಿಂದ ಪ್ರೇರಿತರಾಗಿ ದೇಶಕ್ಕಾಗಿ ಹೋರಾಡುವ ಪಣ ತೊಟ್ಟಿದ್ದರು. ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರಾಗಿ, ಸ್ವತಂತ್ರ ಭಾರತದ ಮೊದಲ ಮಹಿಳಾ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಸರೋಜಿನಿಯವರು ಪ್ರಖ್ಯಾತ ಕವಿಯಿತ್ರಿಯಾಗಿ ಭಾರತದ ಕೋಗಿಲೆ ಎಂದು ಕರೆಯಲ್ಪಟ್ಟಿದ್ದರು. ಹಿಂದೂ ಮತ್ತು ಮುಸ್ಲಿಂ ಐಕ್ಯತೆಗಾಗಿ ಶ್ರಮಿಸಿದ ಸರೋಜಿನಿ ನಾಯ್ಡು ಭಾರತೀಯ ಮುಸ್ಲಿಮರ ಅದರಲ್ಲೂ ಮುಸ್ಲಿಂ ಮಹಿಳೆಯರ ಹಕ್ಕಿಗಾಗಿ ಹೋರಾಟ ಮಾಡಿದರು. ಹೀಗಾಗಿ ಮುಸ್ಲಿಮರಿಗೆ ಸರೋಜಿನಿಯವರನ್ನು ಕಂಡರೆ ಒಂದು ರೀತಿಯ ಅಕ್ಕರೆ. ರೌಲತ್ ಕಾಯ್ದೆಯ ವಿರುದ್ಧ ಹೋರಾಟ ನಡೆಸಿದ್ದಲ್ಲದೆ, ಗಾಂಧೀಜಿಯವರ ಅಚ್ಚುಮೆಚ್ಚಿನ ನಾಯಕಿಯಾಗಿ, ಅವರೊಡನೆ ಅನೇಕ ಚಳವಳಿಗಳಲ್ಲಿ ಭಾಗವಹಿಸಿದ್ದರು. ಅದ್ಭುತ ವಾಗ್ಮಿಗಳಾಗಿದ್ದ ನಾಯ್ಡು, ಯುವಕರಿಗೆ ಪ್ರೇರಕ ಶಕ್ತಿಯಾಗಿ, ದೇಶಭಕ್ತರ ಕಣ್ಮಣಿಯಾಗಿ ಹೆಸರು ಗಳಿಸಿದ್ದರು. ಅವರ ಜೀವನಚರಿತ್ರೆ ಬರಹಗಾರರಾಗಿದ್ದ ಪದ್ಮಿನಿ ಸೇನ್ ಗುಪ್ತಾ, ಹೇಗೆ ಸರೋಜಿನಿ ನಾಯ್ಡು ಅವರು ಮುಂಬೈನ ಶ್ರೀಮಂತ ವರ್ತಕನನ್ನು ದೇಶಸೇವೆಗೆ ಅಣಿಗೊಳಿಸಿದರು ಎಂಬುದನ್ನು ಹೃದಯಂಗಮವಾಗಿ ವಿವರಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದ ಮುಂಬೈನಲ್ಲಿ ಓಮರ್ ಸುಭಾನಿ ಎಂಬ ವರ್ತಕ ಸರೋಜಿನಿಯವರ ಆಪ್ತರಾಗಿದ್ದರು. ವ್ಯಾಪಾರ ವಹಿವಾಟುಗಳಿಂದ ಅಪಾರ ಶ್ರೀಮಂತಿಕೆ ಗಳಿಸಿದ್ದ ಅವರು ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿದ್ದ ಕಾಲದಲ್ಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಹಣ ಸಂಪಾದನೆಯಲ್ಲಿ ಮುಳುಗಿದ್ದರು. ಸರೋಜಿನಿ ನಾಯ್ಡುರವರು ಓಮರ್ ಸುಭಾನಿಯವರನ್ನು ಭೇಟಿಯಾಗಿ ಅವರಿಗೆ ದೇಶದ ಪರಿಸ್ಥಿತಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ, ಪ್ರಾಣತ್ಯಾಗ ಮಾಡುತ್ತಿದ್ದ ದೇಶಭಕ್ತರ ಬಗ್ಗೆ ವಿವರಿಸಿ ಹೇಳಿ, ಅವರು ಸಂಪಾದಿಸಿದ ಐಶ್ವರ್ಯವನ್ನೇಕೆ ದೇಶಕ್ಕಾಗಿ ವಿನಿಯೋಗಿಸಬಾರದು ಎಂದು ಕೇಳಿದರು. ಸಂಪತ್ತು ಗಳಿಕೆ ಕೇವಲ ಸ್ವಹಿತಕ್ಕಾಗಿ ಎಂದು ತಿಳಿದಿದ್ದ ಈ ಶ್ರೀಮಂತ ವರ್ತಕ, ಸರೋಜಿನಿಯವರ ಮಾತು ಕೇಳಿ ಪ್ರಭಾವಿತರಾಗಿ ಸಮ್ಮತಿ ಸೂಚಿಸಿದರು. ಕೂಡಲೇ ತಮ್ಮೆಲ್ಲ ಸಂಪತ್ತನ್ನೂ ಗಾಂಧೀಜಿಯವರ ಪದತಲದಲ್ಲಿ ಅರ್ಪಿಸಿ, ರಾಷ್ಟ್ರನಿರ್ಮಾಣಕ್ಕೆ ಅದನ್ನು ಬಳಸಬೇಕೆಂದು ವಿನಂತಿಸಿಕೊಂಡರು. ಇದು ಓಮರ್ ಅವರ ದೇಶ ಪ್ರೇಮವನ್ನೂ, ಸರೋಜಿನಿ ನಾಯ್ಡುರವರ ಪ್ರೇರಕ ಶಕ್ತಿಯನ್ನೂ ತೋರಿಸಿಕೊಡುತ್ತದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

