ಸಂಪಾದಕೀಯ

ಒಂದು ಸಾವಿರ ಡಾಲರ್‌ನಿಂದ ಹುಟ್ಟಿಕೊಂಡ ಡೆಲ್!

Published On :

ಡೆಲ್ ಕಂಪನಿಯ ಕಂಪ್ಯೂಟರ್ ಆಗಲಿ, ಲ್ಯಾಪ್‌ಟಾಪ್ ಆಗಲಿ ಈಗ ತುಂಬಾ ಪ್ರಸಿದ್ಧ. ಇದರ ಹಿಂದಿನ ಮುಖ್ಯ ವ್ಯಕ್ತಿ ಮೈಖೇಲ್ ಡೆಲ್. ಹತ್ತೊಂಬತ್ತು ವರ್ಷದವನಿದ್ದಾಗ ತನ್ನಲ್ಲಿದ್ದ ಒಂದು ಸಾವಿರ ಡಾಲರ್‌ನಿಂದ ಒಂದು ಕಂಪ್ಯೂಟರ್ ಕಂಪನಿಯನ್ನು ಸ್ಥಾಪಿಸಿದ. ಆಗ ಐಬಿಎಂ ಕಂಪ್ಯೂಟರ್‌ಗಳು ಮೂರು ಸಾವಿರ ಡಾಲರ್‌ಗೆ ಒಂದರಂತೆ ಮಾರಾಟವಾಗುತ್ತಿದ್ದವು. ಡೆಲ್, ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದ ಬಿಡಿ ಭಾಗಗಳನ್ನು ತಂದು ಜೋಡಿಸಿ ಅದೇ ರೀತಿಯ ಕಂಪ್ಯೂಟರ್‌ಗಳನ್ನು ತಯಾರಿಸಿದಾಗ ಅವನಿಗೆ ಕೇವಲ 750 ಡಾಲರ್ ವೆಚ್ಚವಾಗುತ್ತಿತ್ತು. ಈ ರೀತಿ ತಯಾರಿಸಿದ ಕಂಪ್ಯೂಟರ್‌ಗಳು ಗುಣಮಟ್ಟದಲ್ಲಿ ಅತ್ಯಂತ ಉತ್ಕೃಷ್ಟವಾಗಿದ್ದವು. ಇದರಿಂದ ಉತ್ತೇಜನಗೊಂಡು ತನ್ನ ಕಾಲೇಜು ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಿ ಐಬಿಎಂ ಕಂಪನಿಗೆ ಪೈಪೋಟಿಯಾಗಿ ಒಂದು ಕಂಪನಿಯನ್ನು ಸ್ಥಾಪಿಸಿಯೇ ಬಿಟ್ಟ. ಅದೇ ಡೆಲ್ ಕಂಪನಿ. ಅದು ಕೇವಲ ಮೂರು ವರ್ಷಗಳಲ್ಲಿ 150 ಮಿಲಿಯನ್ ಡಾಲರ್ ಸಂಪಾದಿಸಿತು. ಇದು ಅವನಿಗೆ ಅಪಾರ ಪ್ರಸಿದ್ಧಿಯನ್ನೂ ಮತ್ತು ಹಣವನ್ನೂ ತಂದುಕೊಟ್ಟಿತು. ಆಗ ಡೆಲ್‌ಗೆ ಕೇವಲ 22 ವರ್ಷ ವಯಸ್ಸು. 2004ರಲ್ಲಿ ಡೆಲ್, ಆ ಕಂಪನಿಯಿಂದ ಹೊರಬಂದಾಗ ಅದರ ವಹಿವಾಟಿನಲ್ಲಿ ಗಣನೀಯ ಇಳಿಕೆ ಪ್ರಾರಂಭವಾಯಿತು. ಆಗ ಆತ ಪುನಃ ಕಂಪನಿಯ ವ್ಯವಹಾರದ ಚುಕ್ಕಾಣಿ ಹಿಡಿದ. ಕೇವಲ 48 ಗಂಟೆಗಳಲ್ಲಿ ಹೊಸ ಆಡಳಿತ ಮಂಡಳಿಯನ್ನು ರಚಿಸಿ, ನೇರವಾಗಿ ಗಿರಾಕಿಗಳಿಗೆ ಕಂಪ್ಯೂಟರ್‌ಗಳನ್ನು ಮಾರಾಟ ಮಾಡತೊಡಗಿದ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ಕಡಿಮೆ ಬೆಲೆಗೆ ಅತ್ಯುತ್ತಮ ಕಂಪ್ಯೂಟರ್‌ಗಳು ಗ್ರಾಹಕರಿಗೆ ದೊರೆಯುವಂತಾಯಿತು. 2012 ರ ಫೋರ್ಬ್ಸ್ ಸಂಸ್ಥೆಯ ಸಮೀಕ್ಷೆಯಂತೆ 48 ವರ್ಷದ ಡೆಲ್ ವಿಶ್ವದ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ 41ನೆಯ ಸ್ಥಾನ ಪಡೆದಿದ್ದಾರೆ. ಇನ್ನು ತಾನು ಸಂಪಾದಿಸಿದ ಹಣದಲ್ಲಿ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಲು 'ಮೈಖೇಲ್ ಅಂಡ್ ಡೆಲ್ ಫೌಂಡೇಷನ್‌' ಸ್ಥಾಪಿಸಿ ಅಗತ್ಯವಿದ್ದವರಿಗೆ ಸಹಾಯ ಮಾಡಲು ಪ್ರಾರಂಭಿಸಿದ. 2010ರಲ್ಲಿ ತನ್ನ ಫೌಂಡೇಷನ್ನಿನ ಮೂಲಕ ಅಮೆರಿಕ, ಭಾರತ ಮತ್ತು ದಕ್ಷಿಣ ಆಫ್ರಿಕಾದ ಮಕ್ಕಳಿಗಾಗಿ 650 ಮಿಲಿಯನ್ ಡಾಲರ್ ಹಣವನ್ನು ಅರೋಗ್ಯ ರಕ್ಷಣೆಗೆ ವೆಚ್ಚಮಾಡಿ ಉತ್ತಮ ದಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾನೆ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.