ಸಂಪಾದಕೀಯ

ಅತಿ ಬಡ ಮುಖ್ಯಮಂತ್ರಿ

Published On :

ತ್ರಿಪುರ ರಾಜ್ಯ ಭಾರತದ ಮೂರನೇ ಸಣ್ಣ ರಾಜ್ಯ. ಈಶಾನ್ಯ ರಾಜ್ಯವಾದ ಇಲ್ಲಿ ಕಮ್ಯುನಿಸ್ಟ್ ಆಡಳಿತವಿದೆ. 1998ರಿಂದ ಇಲ್ಲಿಯವರೆಗೆ ಅಂದರೆ ಮೂರು ಅವಧಿಗೆ ಆ ರಾಜ್ಯದ ಮುಖ್ಯಮಂತ್ರಿಯಾಗಿರುವವರು ಮನಿಕ್ ಸರ್ಕಾರ್. ಈಗ ನಾಲ್ಕನೇ ಬಾರಿಗೂ ಮುಖ್ಯಮಂತ್ರಿಯಾಗುವ ಸಂಪೂರ್ಣ ಭರವಸೆ ಅವರಿಗಿದೆ. ಹೀಗೆ ಕಳೆದ ಹದಿನೈದು ವರ್ಷದಿಂದ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರ್ ನಮ್ಮ ದೇಶದ ಅತಿ ಬಡ ಮುಖ್ಯಮಂತ್ರಿಯೆಂದರೆ ಆಶ್ಚರ್ಯವಾಗದಿರದು. ಏಕೆಂದರೆ 64 ವರ್ಷದ ಇವರ ಬಳಿ ಒಂದು ಸ್ವಂತ ಕಾರಾಗಲೀ, ಮನೆಯಾಗಲೀ, ಕಡೇ ಪಕ್ಷ ಮೊಬೈಲ್ ಆಗಲಿ ಇಲ್ಲ. ಕುರ್ತಾ - ಪೈಜಾಮ ಇವರ ದಿನನಿತ್ಯದ ಉಡುಪು. ಕೇವಲ ತಮ್ಮ ಬಳಿಯಲ್ಲಿದ್ದ 1080 ರು.ಗಳೊಂದಿಗೆ ಚುನಾವಣೆಗೆ ಈ ಬಾರಿ ಮತ್ತೆ ಸ್ಪರ್ಧಿಸಿದ್ದಾರೆ. 2003 ರ ಚುನಾವಣೆಗಾಗಿ ಇವರು ಮಾಡಿದ ವೆಚ್ಚ ಕೇವಲ ಮೂರು ಸಾವಿರ ರುಪಾಯಿಗಳು(ಅದೇ ಇದುವರೆಗಿನ ಅವರ ಅಧಿಕ ಖರ್ಚು).  ಮನಿಕ್ ಸರ್ಕಾರ್ ತಮಗೆ ಬರುವ ವೇತನವನ್ನೆಲ್ಲಾ ತಮ್ಮ ಪಕ್ಷಕ್ಕೆ ದಾನಮಾಡುತ್ತಾರೆ. ಪಕ್ಷ ಇವರ ಖರ್ಚಿಗಾಗಿ ಪ್ರತಿ ತಿಂಗಳೂ ಐದು ಸಾವಿರ ರುಪಾಯಿ ನೀಡುತ್ತದೆ. ಇವರ ಪತ್ನಿ ಕೇಂದ್ರ ಸರ್ಕಾರದ ಹುದ್ದೆಯಲ್ಲಿದ್ದು ಈಗ ನಿವೃತ್ತರಾಗಿದ್ದಾರೆ. ಇವರಿಗೆ ತಂದೆಯಿಂದ ಬಂದ ಆಸ್ತಿಯೆಂದರೆ ಅಗರ್ತಲಾದಲ್ಲಿ ಒಂದು ಪುಟ್ಟ ಮನೆ. ಅದನ್ನು ಅವರು ತಮ್ಮ ತಂಗಿ ರತ್ನ ಎನ್ನುವವರಿಗೆ ಕೊಡುಗೆಯಾಗಿ ನೀಡಿದ್ದಾರೆ. ಅವರೆಷ್ಟು ಸರಳ ಎಂದರೆ ಪ್ರತಿದಿನ ಅವರು ತಮ್ಮ ಬಟ್ಟೆಯನ್ನು ತಾವೇ ಒಗೆದುಕೊಳ್ಳುತ್ತಾರೆ. ಕಲ್ಕತ್ತ ವಿಶ್ವ ವಿದ್ಯಾನಿಲಯದ ಬಿ.ಕಾಂ ಪದವೀಧರರಾದ ಸರ್ಕಾರ್‌ಗೆ ಮಕ್ಕಳಿಲ್ಲ. ಅವರು ಹೇಳುವಂತೆ, 'ಕೃತಿಗಳು ಮಾತಿಗಿಂತ ಪ್ರಭಲವಾದವುಗಳು. ಮಾಡಿದ ಅಭಿವೃದ್ಧಿ ಕಾರ್ಯ ಮತ್ತು ಸಾಧನೆಗಳು ಕೇವಲ ಮಾತು ಮತ್ತು ಭಾಷಣಗಳಿಗಿಂತ ಉತ್ತಮ'. ಪ್ರತಿನಿತ್ಯ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ, ನಿಯಮಿತವಾಗಿ ವ್ಯಾಯಾಮ ಮಾಡುವ ಅಭ್ಯಾಸವನ್ನು ಹೊಂದಿರುವ ಈ ಮುಖ್ಯಮಂತ್ರಿಯ ಅತಿ ದೊಡ್ಡ ಆಸ್ತಿಯೆಂದರೆ, ಅವರ ಬ್ಯಾಂಕ್ ಬ್ಯಾಲೆನ್ಸ್! ಮೂರುಬಾರಿ ರಾಜ್ಯದ ಚುಕ್ಕಾಣಿ ಹಿಡಿದು, ಇದೀಗ ನಾಲ್ಕನೆಯ ಬಾರಿಯೂ ಅಧಿಕಾರ ಪಡೆಯುವ ಭರವಸೆಯಿಟ್ಟುಕೊಂಡಿರುವ ಇವರ ವೈಯಕ್ತಿಕ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಹತ್ತು ಸಾವಿರ ರುಪಾಯಿಗಳು. ರಾಜ್ಯಕ್ಕೆ ಕಂಟಕವಾಗಿದ್ದ ತೀವ್ರವಾದಿಗಳನ್ನು ಮಣಿಸಿ ರಾಜ್ಯವನ್ನು ಶಾಂತಿಯತ್ತ ಕೊಂಡೊಯ್ಯುತ್ತಿರುವ ಸರ್ಕಾರ್ ಅವರನ್ನು ತ್ರಿಪುರಾದ ಜನ ಅತ್ಯಂತ ಆದರದಿಂದ ನೋಡುತ್ತಾರೆ. ಅವರ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಅಲ್ಲಿನ ಜನ ತುಂಬಾ ಮೆಚ್ಚುತ್ತಾರೆ. ಆದ್ದರಿಂದಲೇ ಅವರು ಪ್ರತಿ ಚುನಾವಣೆಯಲ್ಲೂ ಜಯಭೇರಿ ಬಾರಿಸಿ, ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುತ್ತಿದ್ದಾರೆ. ಅಲ್ಪ ಅಧಿಕಾರಾವಧಿಯಲ್ಲಿಯೇ ಸಹಸ್ರಾರು ಕೋಟಿ ಸಂಪಾದಿಸುವ ರಾಜಕಾರಣಿಗಳಿರುವಾಗ, ಮನಿಕ್ ಸರ್ಕಾರ್ ಅಂತಹ ವ್ಯಕ್ತಿಗಳು  ನಮಗೆಲ್ಲಾ ಆದರ್ಶಪ್ರಾಯರಾಗಿದ್ದಾರೆ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.