ಮಾರ್ಕೆಟ್ ಬಿದ್ದುಹೋಗಿದೆಯಲ್ಲಾ?
ಹಿನ್ನೆಲೆ ಗಾಯಕ ಪ್ರತಿವಾದಿ ಭಯಂಕರ ಶ್ರೀನಿವಾಸ್ ಅಂದರೆ ಪಿ.ಬಿ.ಶ್ರೀನಿವಾಸ್ ಒಂದು ಕಾಲಕ್ಕೆ ಚಲನ ಚಿತ್ರರಂಗದಲ್ಲಿ ಅಪ್ರತಿಮ ಗಾಯಕರಾಗಿ ಹೆಸರು ಗಳಿಸಿದ್ದ ಕಲಾವಿದ. ಇಂದಿಗೂ ಅವರು ಹಾಡುತ್ತಾರಾದರೂ ವಯಸ್ಸಿನ ಪ್ರಭಾವದಿಂದ ಅವರ ಧ್ವನಿ ಮೊದಲಿನಂತಿಲ್ಲ. ರಾಜ್ ಕುಮಾರ್ ಅವರ ದನಿಯಾಗಿ ಅವರ ಬಹುತೇಕ ಚಿತ್ರಗಳಿಗೆ ಹಿನ್ನಲೆ ಗಾಯಕರಾಗಿ ಹಾಡಿದ್ದಾರೆ. ಅವರನ್ನು ರಾಜ್ ಕುಮಾರ್ ಅವರು ತಮ್ಮ 'ಶಾರೀರ' ಎಂದು ಕರೆಯುತ್ತಿದ್ದರು. ಕಾಕಿನಾಡದವರಾದ ಶ್ರೀನಿವಾಸ್ ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಯ ಚಲನಚಿತ್ರಗಳಿಗೆ ಹಾಡಿ ಸುಪ್ರಸಿದ್ಧರಾಗಿದ್ದಾರೆ.
ಅವರಿಗೊಮ್ಮೆ ನಾದಪ್ರಿಯರ ಸಂಗೀತ ನಿರ್ದೇಶನದಲ್ಲಿ ಚಲನಚಿತ್ರವೊಂದರಲ್ಲಿ ತುಂಬಾ ದಿನಗಳಾದ ಮೇಲೆ ಹಾಡುವ ಅವಕಾಶ ಸಿಕ್ಕಿತ್ತು. ಅತಿ ಮಧುರವಾಗಿ ಹಾಡಿದ ಶ್ರೀನಿವಾಸ್ ಎಲ್ಲರ ಮೆಚ್ಚುಗೆ ಗಳಿಸಿದರು. ಅವರು ಸ್ಟುಡಿಯೋದಿಂದ ಹೊರಡುವಾಗ ನಿರ್ಮಾಪಕರು ಅವರ ಕೈಲೊಂದು ಹಣದ ಲಕೋಟೆಯನ್ನು ಸಂಭಾವನೆಯಾಗಿ ನೀಡಿದರು. ಆಗ ಅವರು ನಿರ್ದೇಶಕ ಸುಬ್ರಹಣ್ಯಂ ಮತ್ತಿತರ ಗೆಳೆಯರನ್ನು ಸಮೀಪದಲ್ಲಿದ್ದ ಹೊಟೆಲ್ಗೆ ಕಾಫಿ ಕುಡಿಯಲು ಕರೆದೊಯ್ದರು. ದಾರಿಯಲ್ಲಿ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ತುಂಬಿಸಿ ನಿರ್ಮಾಪಕರು ಕೊಟ್ಟ ಲಕೋಟೆಯನ್ನು ತೆರದು ನೋಡಿದಾಗ ಅದರಲ್ಲಿ ಕೇವಲ ಮುನ್ನೂರು ರುಪಾಯಿಗಳಿದ್ದವು. ಅದನ್ನು ನೋಡಿ ಅವರಿಗೆ ನಿರಾಸೆಯಾದರೂ ತೋರ್ಪಡಿಸಿಕೊಳ್ಳದೆ, ಅದನ್ನು ಸುಬ್ರಹ್ಮಣ್ಯಂ ಅವರಿಗೆ ಹಿಂದಿರುಗಿಸುತ್ತಾ 'ಬಹುಶಃ ಯಾರಿಗೋ ಕೊಡುವ ಲಕೋಟೆಯನ್ನು ಮರೆತು ನನಗೆ ನೀಡಿರಬೇಕು. ಇದನ್ನು ನಿರ್ಮಾಪಕರಿಗೆ ಹಿಂದಿರುಗಿಸಿ, ನನ್ನ ಪಾಲಿನ ಸಂಭಾವನೆ ಕಳುಹಿಸಲು ಹೇಳಿ' ಎಂದು ಹೇಳಿದರು.
ಆಗ ಸುಬ್ರಹ್ಮಣ್ಯಂ ಅದನ್ನು ನಿರ್ಮಾಪಕರಿಗೆ ವಾಪಸ್ಸು ನೀಡಿ ಶ್ರೀನಿವಾಸ್ ಅವರಿಗೆ ಅಲ್ಪ ಹಣ ನೀಡಿ ಅವಮಾನಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಹಾಗೆಯೇ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಸಂಭಾವನೆ ನೀಡುವಂತೆ ಆಗ್ರಹಿಸಿದರು. ಆಗ ನಿರ್ಮಾಪಕರು ತಾವು ಸರಿಯಾಗಿಯೇ ನೀಡಿರುವುದಾಗಿಯೂ, ಮಾರ್ಕೆಟ್ ಬಿದ್ದುಹೋಗಿರುವ ಶ್ರೀನಿವಾಸ್ ಅವರಿಗೆ ಅದಕ್ಕಿಂತ ಹೆಚ್ಚು ಹಣ ನೀಡಲು ಸಾಧ್ಯವಿಲ್ಲವೆಂದೂ ಖಡಾಖಂಡಿತವಾಗಿ ನುಡಿದರು. ಆಗ ನಿರ್ದೇಶಕರು ಕಲಾವಿದನಾದವನು ಎಂದಿಗೂ ಕಲಾವಿದನೇ. ಕೆಲದಿನಗಳಿಂದ ಚಿತ್ರದಲ್ಲಿ ಹಾಡಿಲ್ಲವೆಂದರೆ ಅದು ಮಾರ್ಕೆಟ್ ಬಿದ್ದಿದೆ ಎಂದರ್ಥವಲ್ಲ. ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣ ನೀಡಲೇಬೇಕೆಂದು ವಾದಿಸಿ, ಕಡೆಗೆ ಅವರೊಡನೆ ಜಗಳವಾಡಿ ಶ್ರೀನಿವಾಸ್ ಅವರಿಗೆ ಯೋಗ್ಯ ಸಂಭಾವನೆ ಕೊಡಿಸಿಕೊಟ್ಟರು. ಒಬ್ಬ ಕಲಾವಿದನಾದವನಿಗೆ ಬೇಡಿಕೆ ಇಲ್ಲದಿರುವಾಗ ಅವನಿಂದ ದುಡಿಸಿಕೊಂಡವರ ಮನೋಭಾವ ಹೇಗಿರುತ್ತದೆ ಎಂಬುದನ್ನು ಈ ಘಟನೆ ತಿಳಿಸಿಕೊಡುತ್ತದೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

