ಕೇಳಿದ್ದು ಉಪನ್ಯಾಸಕ ಹುದ್ದೆ ಕೊಡಿಸಿದ್ದು ಪ್ರೊಫೆಸರ್‌ಗಿರಿ
ಸರ್ ಸಿದ್ದಪ್ಪ ಕಂಬಳಿಯವರು ಮುಂಬಯಿ ಕರ್ನಾಟಕದಲ್ಲಿ 1921 ರಿಂದ 1945 ರವರೆಗೆ ...
ಸರ್ ಸಿದ್ದಪ್ಪ ಕಂಬಳಿಯವರು ಮುಂಬಯಿ ಕರ್ನಾಟಕದಲ್ಲಿ 1921 ರಿಂದ 1945 ರವರೆಗೆ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದರು. ಅವರು ಹುಬ್ಬಳ್ಳಿಯಲ್ಲಿ ವಕೀಲರಾಗಿದ್ದಾಗ ಜನರ ಅಜ್ಞಾನ, ಬಡತನ. ತುಳಿತಕ್ಕೊಳಗಾದವರ ದಾರುಣ ಪರಿಸ್ಥಿತಿ ಇವನ್ನೆಲ್ಲಾ ನೋಡಿ ಇಂತಹ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಕೆಲಸ ಮಾಡಬೇಕೆನ್ನಿಸಿತು. ಗಾಂಧೀಜಿಯವರೂ ಸಹ ಸಿದ್ದಪ್ಪನವರನ್ನು ಭೇಟಿಯಾಗಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಹೀಗಾಗಿ ಸಿದ್ದಪ್ಪ ಕಂಬಳಿಯವರು ಜನಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು. ಹುಬ್ಬಳ್ಳಿ ನಗರ ಸಭೆಯ ಅಧ್ಯಕ್ಷರಾಗಿ, ಜಿಲ್ಲಾಬೋರ್ಡ್ ಅಧ್ಯಕ್ಷರಾಗಿ, ಮುಂಬಯಿ ವಿಧಾನ ಪರಿಷತ್ತಿನ ಸದಸ್ಯರಾಗಿ, ಸಭಾಪತಿಗಳಾಗಿ, ಮುಂಬಯಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು. ಪ್ರಾಮಾಣಿಕತೆಗೆ, ಸರಳಜೀವನಕ್ಕೆ ಹೆಸರಾಗಿದ್ದ ಕಂಬಳಿಯವರು ಹಿಂದುಳಿದವರ ಮತ್ತು ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರಲ್ಲಿ ಜಾತೀಯತೆ ಲವಲೇಶವೂ ಇರಲಿಲ್ಲ. ಆದ್ದರಿಂದ ಬಾಬಾಸಾಹೇಬ್ ಅಂಬೇಡ್ಕರರಿಗೆ ಸಿದ್ದಪ್ಪನವರನ್ನು ಕಂಡರೆ ತುಂಬಾ ಗೌರವ ಮತ್ತು ಪ್ರೀತಿ.
ಜೀವನದಲ್ಲಿ ಅಸ್ಪೃಶ್ಯತೆಯ ಕರಾಳ ಪರಿಸ್ಥಿತಿಯಿಂದ ನೊಂದಿದ್ದ ಅಂಬೇಡ್ಕರ್ ಅವರು ಸಿದ್ದಪ್ಪನವರು ಸಚಿವರಾಗಿದ್ದಾಗ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದರು. ತಮ್ಮ ವಿಸಿಟಿಂಗ್ ಕಾರ್ಡನ್ನು ಜವಾನನ ಮೂಲಕ ಒಳಗೆ ಕಳುಹಿಸಿ ಹೊರಗೇ ಕುಳಿತಿದ್ದರು. ಅದನ್ನು ನೋಡಿದವರೇ ಕಂಬಳಿಯವರು ತಾವೇ ಹೊರಬಂದು ಅಂಬೇಡ್ಕರರನ್ನು ಒಳಗೆ ಕರೆದೊಯ್ದು ಉಪಚರಿಸಿದರು. ಅಪರಿಚಿತರಂತೆ ಪರಿಚಯದ ಕಾರ್ಡನ್ನು ಕಳುಹಿಸಿದ್ದಕ್ಕೆ ಆಕ್ಷೇಪಿಸಿದರು. ಅಂಬೇಡ್ಕರರಿಗೆ ಸಂಕೋಚ. ಏಕೆಂದರೆ ಅವರು ತಮ್ಮನ್ನು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಖಾಲಿಯಿದ್ದ ಉಪನ್ಯಾಸಕ ಹುದ್ದೆಗೆ ನೇಮಿಸಿಕೊಳ್ಳಬೇಕೆಂದು ಕೇಳಲು ಬಂದಿದ್ದರು. ವಿಷಯವನ್ನು ತಿಳಿದ ಕಂಬಳಿಯವರು, 'ನೀವು ಇದನ್ನು ಕೇಳಲು ಸಂಕೋಚಪಟ್ಟುಕೊಳ್ಳಬೇಕೆ? ನಿಮ್ಮಂತಹವರು ಕಾನೂನು ಕಾಲೇಜಿನಲ್ಲಿದ್ದರೆ ಆ ಕಾಲೇಜಿಗೇ ಗೌರವ. ನಿಮ್ಮಷ್ಟು ಕಾನೂನು ಜ್ಞಾನವಿದ್ದವರು ಈಗ ಆ ಕಾಲೇಜಿನಲ್ಲಿ ಯಾರಿದ್ದಾರೆ?' ಎಂದರು. ಆ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗುವುದೇ ಒಂದು ಗೌರವದ ಸಂಗತಿಯಾಗಿತ್ತು. ಏಕೆಂದರೆ, ಹೈಕೋರ್ಟ್ ನ್ಯಾಯಾಧೀಶ ಪದಕ್ಕೆ ಅಲ್ಲಿಯ ಉಪನ್ಯಾಸಕ ಹುದ್ದೆ ದಾರಿ ಮಾಡಿಕೊಡುವುದೆಂಬ ಭಾವನೆ ಇತ್ತು. ಸಿದ್ದಪ್ಪ ಕಂಬಳಿಯವರ ಮಾತು ಕೇಳಿ ಅಂಬೇಡ್ಕರರಿಗೆ ತುಂಬಾ ಸಮಾಧಾನವಾಯಿತು. ಅಂತೂ ಜಾತಿಗಿಂತ ಅರ್ಹತೆಗೆ ಬೆಲೆಕೊಡುವ ಒಬ್ಬ ವ್ಯಕ್ತಿಯಾದರೂ ಇಲ್ಲಿದ್ದರಲ್ಲಾ ಎಂದು. ಆಗ ಕಂಬಳಿಯವರು ತಕ್ಷಣ ತಮ್ಮ ಇಲಾಖೆಯ ಮುಖ್ಯಸ್ಥರಿಗೆ ಸೂಚನೆ ನೀಡಿ, ಬಿ.ಆರ್.ಅಂಬೇಡ್ಕರ್ ಅವರನ್ನು ಸರ್ಕಾರಿ ಕಾನೂನು ಕಾಲೇಜಿಗೆ ಪ್ರೊಫೆಸರ್ ಆಗಿ ನೇಮಿಸಬೇಕೆಂದು ಆದೇಶ ನೀಡಿದರು. ಉಪನ್ಯಾಸಕ ಹುದ್ದೆ ಕೇಳಲು ಹೋದವರಿಗೆ ಪ್ರಾಧ್ಯಾಪಕ ಹುದ್ದೆ ದೊರೆತದ್ದು ಸಿದ್ದಪ್ಪ ಕಂಬಳಿಯವರ ಜಾತ್ಯತೀತ ಮನೋಭಾವವನ್ನೂ, ಪ್ರತಿಭೆಗೆ ಅವರು ನೀಡುತ್ತಿದ್ದ ಪ್ರೋತ್ಸಾಹವನ್ನೂ ಸೂಚಿಸುತ್ತದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

