ಕೃಷ್ಣ ಶಾಸ್ತ್ರಿ ಮತ್ತು ಆಂಗ್ಲ ಮಹಿಳೆ
ಕನ್ನಡದ ಪ್ರಸಿದ್ಧ ಬರಹಗಾರರಲ್ಲಿ ಎ.ಆರ್.ಕೃಷ್ಣಶಾಸ್ತ್ರಿಗಳೂ ಒಬ್ಬರು. ಕೃಷ್ಣ ಶಾಸ್ತ್ರಿಗಳು ತಮ್ಮ ವೃತ್ತಿಜೀವನವನ್ನು ಅಠಾರ ಕಚೇರಿಯಲ್ಲಿ ಗುಮಾಸ್ತರಾಗಿ ಪ್ರಾರಂಭಿಸಿದರು. ನಂತರ ಓರಿಯಂಟಲ್ ಲೈಬ್ರರಿಯಲ್ಲಿ ಟ್ಯೂಟರ್ ಆಗಿ ನೇಮಕಗೊಂಡರು. ಕೊನೆಗೆ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅವರಿಗೆ ಕನ್ನಡದ ಜೊತೆಗೆ ಸಂಸ್ಕೃತ, ಬಂಗಾಳಿ, ಪಾಲಿ, ಹಿಂದಿ, ಇಂಗ್ಲಿಷ್, ಜರ್ಮನಿ ಭಾಷೆಗಳಲ್ಲಿ ಪರಿಣತಿ ಇತ್ತು. ಪ್ರಭುದ್ಧ ಕರ್ನಾಟಕ ದ ಸ್ಥಾಪಕ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಅವರ ವಚನ ಭಾರತ, ಕಥಾಮಿತ್ರ ಮತ್ತು ನಿರ್ಮಲ ಭಾರತಿ ಅತ್ಯಂತ ಪ್ರಸಿದ್ಧವಾದ ಗ್ರಂಥಗಳು. ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾಗಿದ್ದರು. ಕುವೆಂಪು, ತೀ.ನಂ.ಶ್ರೀ, ಜಿ.ಪಿ.ರಾಜರತ್ನಂ, ವಿ.ಸೀ., ಕೆ.ವೆಂಕಟರಾಮಪ್ಪ ಮುಂತಾದವರು ಇವರ ಶಿಷ್ಯರಾಗಿ ನಂತರ ಸಾರಸ್ವತ ಲೋಕದ ದಿಗ್ಗಜರಾದರು. ಒಂದು ದಿನ ಬೆಳಿಗ್ಗೆ ಎಂದಿನಂತೆ ಶಾಸ್ತ್ರಿಗಳು ತಮ್ಮ ಮನೆಯ ಮುಂದಿನ ಕೈತೋಟದಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದರು. ಅದು ಅವರ ನಿತ್ಯ ಕ್ರಮವಾಗಿತ್ತು. ಒಮ್ಮೆ ಹೀಗೆ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದಾಗ ಒಬ್ಬ ಆಂಗ್ಲ ಮಿಷನರಿ ಮಹಿಳೆ ಕೈಲಿ ಬೈಬಲ್ ಹಿಡಿದು ಒಳ ಬಂದಳು. ತಾನು ಮನೆಯ ಯಜಮಾನರನ್ನು ಭೇಟಿ ಮಾಡಲು ಬಂದಿರುವುದಾಗಿ ಇಂಗ್ಲಿಷ್‌ನಲ್ಲಿ ತಿಳಿಸಿ, ಅವರನ್ನು ಕರೆಯಲು ವಿನಂತಿಸಿದಳು. ಶಾಸ್ತ್ರಿಗಳು ಯಾರೋ ಮನೆಯ ಕೆಲಸದವರೆಂದು ಆಕೆ ಭಾವಿಸಿದ್ದಳೋ ಏನೋ. ಅದನ್ನರಿತ ಶಾಸ್ತ್ರಿಗಳು ತಾವೇ ಮನೆಯ ಯಜಮಾನರೆಂದೂ, ತಮ್ಮಿಂದ ಏನಾಗಬೇಕೆಂದು ಕೇಳಿದರು. ಆಗ ಆ ಮಹಿಳೆ ಏಸುಕ್ರಿಸ್ತನ ಸಂದೇಶವನ್ನು ಮನೆಮನೆಗೆ ಮುಟ್ಟಿಸಲು ಬಂದಿರುವುದಾಗಿ ಹೇಳಿ, ಏಸು ಸ್ವಾಮಿಯ ಬಗ್ಗೆ ಹೇಳಲುಪಕ್ರಮಿಸಿದಳು. ಆಗ ಶಾಸ್ತ್ರಿಗಳು, ನೋಡಿ ನಮ್ಮ ಹಿಂದೂ ಪುರಾಣದಲ್ಲಿಯೇ ಮೂವತ್ತಮೂರು ಕೋಟಿ ದೇವತೆಗಳಿದ್ದಾರೆ. ಆ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯ ನನಗಿಲ್ಲ. ಎಂದರು. ಅದಕ್ಕೆ ಪಟ್ಟುಬಿಡದ ಆ ಮಹಿಳೆ ಬೈಬಲ್‌ನಲ್ಲಿ ಉಕ್ತವಾದ ಕೆಲವು ಉಪದೇಶಗಳ ಬಗ್ಗೆ ಹೇಳಲು ಹೊರಟಾಗ ಕೃಷ್ಣ ಶಾಸ್ತ್ರಿಗಳು ಹೇಳಿದರು, ತಾಯಿ, ನಾನು ಬೈಬಲ್ಲನ್ನು ಕನಿಷ್ಠ ಏಳೆಂಟುಬಾರಿಯಾದರೂ ಓದಿದ್ದೇನೆ, ಅರ್ಥಮಾಡಿಕೊಂಡಿದ್ದೇನೆ. ಕಳೆದ ಮೂವತ್ತು ವರ್ಷಗಳಿಂದಲೂ ಅದರ ಪರಿಚಯ ನನಗಿದೆ ಎಂದು ಹೇಳಿದಾಗ ಆ ಮಹಿಳೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಅಲ್ಲಿಂದ ತೆರಳಿದಳು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

