ಜಾತಿಗಿಂತ ನೀತಿ ಮುಖ್ಯ
ಚನ್ನಪ್ಪ ಉತ್ತಂಗಿಯವರು ಕ್ರೈಸ್ತ ಸಮಾಜಕ್ಕೆ ಸೇರಿದ ಸದ್ಗುಣಶಾಲಿಗಳು. ಮಂಗಳೂರಿನ ದೈವಜ್ಞಾನ ಶಾಲೆಯಲ್ಲಿ ಕಲಿತು ಕ್ರೈಸ್ತ ಧರ್ಮಗುರುಗಳಾಗಿ ನೇಮಕಗೊಂಡರು. ಅವರ ಮೂಲ ಪುರುಷ ಲಿಂಗಾಯತರಾಗಿದ್ದರಿಂದ ಅವರಿಗೆ ವೀರಶೈವ ಧರ್ಮದ ಬಗ್ಗೆ, ಕ್ರಿಶ್ಚಿಯನ್ ಧರ್ಮದ ಬಗ್ಗೆ ಇದ್ದಷ್ಟೇ ಶ್ರದ್ಧೆ ಇತ್ತು. ಹೀಗಾಗಿ ಅವರು ಬಸವ, ಸರ್ವಜ್ಞರನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ ಮತ್ತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಕೆಲವು ಲಿಂಗಾಯತ ಮಠಾಧೀಶರು ಉತ್ತಂಗಿಯವರನ್ನು ತಮ್ಮ ಮಠಗಳಿಗೆ ಕರೆಸಿ, ಅಲ್ಲಿನ ಭಕ್ತಾದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ವೀರಶೈವ ಧರ್ಮದ ಬಗ್ಗೆ ಮಾರ್ಗದರ್ಶನ ಮಾಡಿಸುತ್ತಿದ್ದರು. ಸದಾ ಖಾದಿ ಬಟ್ಟೆ ಧರಿಸುತ್ತಿದ್ದ ಉತ್ತಂಗಿಯವರು ಬಾಸೆಲ್ ಮಿಷನ್ನಿನ ಪ್ರತಿರೋಧದ ನಡುವೆಯೂ ಬಸವೇಶ್ವರ ಮತ್ತು ಸರ್ವಜ್ಞರ ಕುರಿತಾಗಿ ಉಪನ್ಯಾಸ ಮಾಡುವುದು, ಕೃತಿಗಳನ್ನು ರಚಿಸುವುದು ಮಾಡಿ ತಾವೊಬ್ಬ ಅಪ್ಪಟ ಜಾತ್ಯತೀತ ಭಾರತೀಯ ಎಂಬುದನ್ನು ಶೃತಪಡಿಸಿದರು. ಅವರ ಸಿದ್ಧರಾಮ ಸಾಹಿತ್ಯ ಸಂಗ್ರಹ, ಸರ್ವಜ್ಞ ವಚನಗಳು ಜನಪ್ರಿಯ ಕೃತಿಗಳು. ಕ್ರೈಸ್ತಮತ ಉಪದೇಶಕರಾಗಿಯೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ ಚನ್ನಪ್ಪನವರು ಇತರ ಮತಗಳ ವಿಷಯವನ್ನೂ ಶ್ರದ್ಧೆಯಿಂದ ತಿಳಿದುಕೊಂಡಿದ್ದರು. ಇದರಿಂದ ಮುನಿಸಿಕೊಂಡ ಕ್ರೈಸ್ತ ಧರ್ಮಾಧಿಕಾರಿ ಚನ್ನಪ್ಪನವರಿಗೆ ಪತ್ರವೊಂದನ್ನು ಬರೆದು, 'ನಿಮ್ಮನ್ನು ಮಿಷನ್ ಕೆಲಸದಿಂದ ಏಕೆ ಕಿತ್ತುಹಾಕಬಾರದು?' ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರವಾಗಿ ಉತ್ತಂಗಿ ಚನ್ನಪ್ಪನವರೂ ಹೀಗೆ ಬರೆದರು 'ತಾವು ಮೇಲಧಿಕಾರಿಯಾಗಿದ್ದರೂ ತಮ್ಮಂತೆಯೇ ಬಾಸೆಲ್ ಮಿಷನ್ನಿನ ಸೇವಕರಾಗಿದ್ದೀರಿ. ಕ್ರಿಸ್ತನಲ್ಲಿರುವ ಸತ್ಯವನ್ನು ಸಾರಿ ಹೇಳುವುದರಲ್ಲಿ ವಿದೇಶೀಯರಾದ ತಮಗೆಷ್ಟು ಉಪದೇಶ ಸ್ವಾತಂತ್ರ್ಯವಿದೆಯೋ ಅಷ್ಟೇ ಸ್ವಾತಂತ್ರ್ಯ ನನಗೂ ಇದೆ.' ಇದು ಉತ್ತಂಗಿಯವರಲ್ಲಿದ್ದ ಕೆಚ್ಚನ್ನೂ, ವಿನಾಕಾರಣ ಮಾಡಿದ ಆರೋಪವನ್ನು ವಿರೋಧಿಸುವ ಗುಣವನ್ನೂ ತೋರಿಸುತ್ತದೆ. ಹೀಗಾಗಿ ಅವರನ್ನು ಎಲ್ಲ ಹಿಂದೂ ಮಠಾಧೀಶರು ಮತ್ತು ಸಾಹಿತಿಗಳು ಗೌರವಿಸುತ್ತಿದ್ದರು.
ಒಮ್ಮೆ ಉತ್ತಂಗಿಯವರು ಬೆಂಗಳೂರಿಗೆ ಹೋಗಿದ್ದಾಗ ಪ್ರಖ್ಯಾತ ವಿದ್ವಾಂಸರಾದ ದೇವುಡು ನರಸಿಂಹ ಶಾಸ್ತ್ರಿಗಳ ಮನೆಗೆ ಹೋಗಿದ್ದರು. ಮನೆಗೆ ಬಂದ ಉತ್ತಂಗಿಯವರ ಪಾದಗಳನ್ನು ತಾವೇ ತೊಳೆಯಲು ಮುಂದಾದ ದೇವುಡು ಅವರನ್ನು ನೋಡಿ ಅಪ್ರತಿಭರಾಗಿ 'ಇದೇನು ಮಾಡುತ್ತಿದ್ದೀರಿ?' ಎಂದು ಕೇಳಿದರು. ಅದಕ್ಕೆ ದೇವುಡು ಹೇಳಿದರು, ಆ 'ಮಹಾಮಹಿಮ ಏಸುವಿನ ಪಾದ ತೊಳೆಯುವ ಭಾಗ್ಯ ನನಗೆ ಸಿಗಲಿಲ್ಲ. ಅವನ ಅಂತರಂಗ ಶಿಷ್ಯರಾದ ತಮ್ಮ ಪಾದ ತೊಳೆಯುವ ಪುಣ್ಯವಾದರೂ ಸಿಗಲಿ ಎಂದು ಹೀಗೆ ಮಾಡಿದೆ' ಎಂದರು. ಇದು ಉತ್ತಂಗಿ ಚನ್ನಪ್ಪನವರು ಗಳಿಸಿದ್ದ ಪ್ರೀತಿ-ವಿಶ್ವಾಸ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

