ಸಂಪಾದಕೀಯ

ಎಸ್.ವಿ.ಪಿ ಮತ್ತು ಗುರುಗಳು

Published On :

ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು ಜನಿಸಿ ಈ ಫೆಬ್ರವರಿ ಎಂಟಕ್ಕೆ ಒಂದು ನೂರು ವರ್ಷಗಳು. ಅವರ ಜನ್ಮ ಶತಾಬ್ಧಿಗೆ ಇದೊಂದು ಸ್ಮರಣೆ ಮಾತ್ರ. ಅವರೊಬ್ಬ ಅಪ್ಪಟ ಮಲೆನಾಡಿನ ಪ್ರತಿಭೆ. ಅವರ ಗುರುಗಳ ಬಗ್ಗೆ ಅವರಿಗಿದ್ದ ಅಪಾರ ಪ್ರೀತಿ ಮತ್ತು ಗೌರವಕ್ಕೆ ಇದೊಂದು ನಿದರ್ಶನ-  ಅವರ 'ಬದುಕು-ಬೆಳಕು' ಕೃತಿಯಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳನ್ನು ದಾಖಲಿಸಿದ್ದಾರೆ. ಅವರ ಮಾತುಗಳು ಬರೀ ಶುಷ್ಕ ಮಾತುಗಳಾಗಿರದೆ, ರಸಭರಿತವಾಗಿದ್ದು ಕೇಳುಗನಿಗೆ ರಂಜನೆ ನೀಡುತ್ತಿದ್ದವು. ಅವರೊಮ್ಮೆ ಕಾಳಿದಾಸನ 'ಮೇಘದೂತ' ಅನುವಾದ ಮಾಡಿ ಮಾರಾಟ ಮಾಡಿದಾಗ ಎಲ್ಲ ಖರ್ಚು ಕಳೆದು ದಕ್ಕಿದ್ದು 35 ರುಪಾಯಿ. ಅದರಿಂದ ಒಂದು ಸೊಳ್ಳೆ ಪರದೆ ಕೊಂಡು ತಂದರಂತೆ. 'ಕಾಳಿದಾಸನಿಗೆ ಭೋಜರಾಜ ಒಂದಕ್ಷರಕ್ಕೆ ಲಕ್ಷ ವರಹ ಕೊಟ್ಟನಂತೆ. ನನಗೆ ಲಕ್ಷ ವರಹ ಬರಲಿಲ್ಲ. ಲಕ್ಷ ರಂಧ್ರ ಬಂತು' ಎಂದು ಹೇಳಿದಾಗ ಜೊತೆಗಿದ್ದವರೆಲ್ಲಾ ಬಿದ್ದು ಬಿದ್ದು ನಕ್ಕರಂತೆ.
ಒಮ್ಮೆ ಭಟ್ಟರಿಗೆ ಹಣದ ಅಡಚಣೆಯಾಗಿ ತಮ್ಮ ಗುರುಗಳಾದ ವೆಂಕಣ್ಣಯ್ಯನವರ ಬಳಿ ಹೋಗಿ ಹತ್ತು ರುಪಾಯಿ ಸಾಲ ಕೇಳಿದರು. ವೆಂಕಣ್ಣಯ್ಯನವರು ಏಕೆ, ಏನು ಎಂದು ಕೇಳದೆ ಅವರಿಗೆ ಹಣ ನೀಡಿದರು. ಮೂರ್ನಾಲ್ಕು ತಿಂಗಳಾದ ಬಳಿಕ ಅವರಿಗೆ ಬಂದ ವಿದ್ಯಾರ್ಥಿವೇತನದಲ್ಲಿ ಹತ್ತು ರುಪಾಯಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ಗುರುಗಳಿಗೆ ಹಿಂದಿರುಗಿಸಿದರು. ಅವರು ಒಡನೆಯೇ, 'ನಿನ್ನಲ್ಲಿ ಕಿಟ್ಟಲ್ ನಿಘಂಟು ಇದೆಯೆ?' ಎಂದು ಪ್ರಶ್ನಿಸಿದರು. ಅದಕ್ಕೆ ಭಟ್ಟರು ಇಲ್ಲವೆಂದರು. ಆಗ ಅವರು ಹೇಳಿದರು, 'ಹಾಗಾದರೆ ಈ ಹಣತೆಗೆದುಕೊಂಡು ವೆಸ್ಲಿ ಪ್ರೆಸ್ಸಿಗೆ ಹೋಗಿ ಒಂದು ನಿಘಂಟು ಕೊಂಡುಕೊಂಡು ಬಾ. ನಿನಗೆ ಅದು ಜೀವನದುದ್ದಕ್ಕೂ ಬೇಕಾಗುತ್ತದೆ'. ಪರಮೇಶ್ವರ ಭಟ್ಟರು ಹಾಗೇ ಮಾಡಿದರು.
ಅದು ಅವರ ಬಳಿ ಕೊನೆಯವರೆಗೂ ಇತ್ತು. ಅದೇ ರೀತಿ ಒಮ್ಮೆ ಕಾಲೇಜಿನಲ್ಲಿ ಕವಿತಾ ಸ್ಫರ್ಧೆ ಏರ್ಪಡಿಸಿದಾಗ ಪರಮೇಶ್ವರ ಭಟ್ಟರು, ತಮಗೆ ಬಹುಮಾನ ಬಾರದೇ ಇದ್ದುದರಿಂದ ಖೇದಗೊಂಡು ಕಾರ್ಯಕ್ರಮಕ್ಕೆ ಗೈರುಹಾಜರಾದರು. ಅದನ್ನು ಗಮನಿಸಿದ ವೆಂಕಣ್ಣಯ್ಯನವರು ಬಸವರಾಜದೇವರ ರಗಳೆ ಕೃತಿಯನ್ನು ವಿಶೇಷ ಬಹುಮಾನ ಎಂದು ಘೋಷಿಸಿ ಅದನ್ನು ಆರ್. ನರಸಿಂಹಾಚಾರ್ಯರ ಕೈಯಿಂದ ಶಿಷ್ಯನಿಗೆ ಕೊಡಿಸಿದರು. ಇದು ವೆಂಕಣ್ಣಯ್ಯನವರ ಶಿಷ್ಯ ವಾತ್ಸಲ್ಯಕ್ಕೆ ಒಂದು ನಿದರ್ಶನ. ಮತ್ತೊಮ್ಮೆ ವರ್ಡ್ಸ್ ವರ್ತ್ ಕವಿಯ 'ಮೈಖೆಲ್‌' ಎಂಬ ಇಂಗ್ಲಿಷ್ ಕಥನವೊಂದನ್ನು ಕನ್ನಡಕ್ಕೆ ಅನುವಾದಿಸಿ ಅದನ್ನು ಗುರುಗಳಾದ ಕುವೆಂಪು ಅವರಲ್ಲಿಗೆ ತೆಗೆದುಕೊಂಡು ಹೋಗಿ ತೋರಿಸಿದರು.
ಅದರಲ್ಲಿಯ ಮೊದಲು ಮತ್ತು ಕೊನೆಯ ಸಾಲನ್ನು ಅವರೇ ಸ್ವತಃ ಬರೆದುಕೊಟ್ಟು ಇವೆರಡು ಸಾಲುಗಳು ಕಾವ್ಯದ ಜೀವಾಳ ಎಂದು ತೋರಿಸಿಕೊಟ್ಟರು. ಆ ಕವನಕ್ಕೆ ಸ್ವರ್ಣ ಪದಕ ಲಭಿಸಿದಾಗ ಭಟ್ಟರಿಗಾದ ಸಂತೋಷ ಅಷ್ಟಿಷ್ಟಲ್ಲ. ಹೀಗಾಗಿ ಅವರೇ ಒಂದೆಡೆ ತಮ್ಮ ಗುರುಗಳ ಬಗ್ಗೆ ಹೀಗೆ ಬರೆದಿದ್ದಾರೆ, 'ನನ್ನ ಜೀವನ ಪಥದಲ್ಲಿ ಕೆಲವರು ಕೈಗಂಬದ ಹಾಗೆ, ಕೆಲವರು ಊರುಗೋಲಿನ ಹಾಗೆ, ಕೆಲವರು ದಾರದೀಪದ ಹಾಗೆ, ಕೆಲವರು ತಂಗಾಳಿಯ ಹಾಗೆ. ಕೆಲವರು ಫಲಪುಷ್ಪಭರಿತಪಾದದ ಹಾಗೆ ಇದ್ದಾರೆ'! ಇದು ಅವರಿಗೆ ಗುರುಗಳ ಬಗ್ಗೆ ಇದ್ದ ಗೌರವವನ್ನು ಸೂಚಿಸುತ್ತದೆ.
 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.