ಮಹಾತ್ಮರ ಹೆಸರು ಮಾಡಿದ ಮೋಡಿ
1948ನೇ ಫೆಬ್ರವರಿ 13ನೆಯ ತಾರೀಖು ಚಿತ್ತೂರು ಜಿಲ್ಲಾ ನ್ಯಾಯಾಲಯದಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿದ್ದ ಮೊಕದ್ದಮೆಯೊಂದು ಇದ್ದಕ್ಕಿದ್ದಂತೆ ಮುಕ್ತಾಯವಾಯಿತು. ಅದಕ್ಕೆ ಕಾರಣ ಮಹಾತ್ಮ ಗಾಂಧಿಯವರ ಹೆಸರು ಎಂದರೆ ಆಶ್ಚರ್ಯಪಡಬೇಕಾಗುತ್ತದೆ. ಒಬ್ಬ ವೃದ್ಧೆಯ ಹೆಸರಿನಲ್ಲಿದ್ದ ಆಸ್ತಿ ಪಡೆಯಲು ಆಕೆಯ ಅಳಿಯ ನ್ಯಾಯಾಲಯದ ಮೊರೆ ಹೋಗಿದ್ದ. ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಈ ಮೊಕದ್ದಮೆಯನ್ನು ಹೇಗಾದರೂ ಬಗೆ ಹರಿಸಲೇಬೇಕೆಂದು ಯೋಚಿಸಿ ನ್ಯಾಯಾಧೀಶರು ಮೇಲೆ ನಮೂದಿಸಿದ ದಿನದಂದು ಅತ್ತೆ ಮತ್ತು ಅಳಿಯನನ್ನು ನ್ಯಾಯಾಲಯಕ್ಕೆ ಬರಹೇಳಿದ್ದರು. ಅವರಿಬ್ಬರಿಗೂ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದರಿಂದ ಸಂಬಂಧ ಕೆಡುವುದಲ್ಲದೆ ವೃಥಾ ಹಣ ವ್ಯವವಾಗುತ್ತದೆಂಬುದನ್ನು ನ್ಯಾಯಾಧೀಶರು ಮನವರಿಕೆ ಮಾಡಿಕೊಟ್ಟರು. ಆದರೆ ಅವರು ಕೇಳಬೇಕಲ್ಲಾ! ಕೊನೆಗೆ ತಮ್ಮ ಪೀಠದ ಹಿಂದಿರುವ ಗಾಂಧೀಜಿಯವರ ಫೋಟೋ ತೋರಿಸಿ, ಮಹಾತ್ಮ ಗಾಂಧಿಯವರ ಹೆಸರನ್ನು ನೀವು ಕೇಳಿದ್ದೀರಾ ಎಂದು ಕೇಳಿದರು. ಅವರು ಹೌದೆಂದು ತಲೆಯಾಡಿಸಿದರು. ಆಗ ನ್ಯಾಯಾಧೀಶರು ಮಹಾತ್ಮ ಗಾಂಧಿಯವರು ಬಡವರಿಗಾಗಿ, ಅಜ್ಞಾನಿಗಳಿಗಾಗಿ ಬದುಕಿದ್ದರು. ಅವರು ಮೃತಪಟ್ಟರು ಎಂಬುದು ಗೊತ್ತಿದೆಯೆ ಎಂದು ಪ್ರಶ್ನಿಸಿದರು. ಅದಕ್ಕೆ ಹೌದು ಎಂಬ ಉತ್ತರ ಬಂತು. ಆಗ ನ್ಯಾಯಾಧೀಶರು ಕೇಳಿದರು, 'ಅವರ ಸಾವಿಗೆ ವಿಶ್ವವೇ ಮರುಗುತ್ತಿದೆ. ಏಕೆ ಹೇಳಿ?' ಎಂದರು.
ಅದಕ್ಕೆ ಎಲ್ಲರೂ ಒಕ್ಕೊರಲಿನಿಂದ 'ಅವರು ಎಲ್ಲರನ್ನೂ ಪ್ರೀತಿಸುತ್ತಿದ್ದರು. ಪುಣ್ಯಾತ್ಮರವರು' ಎಂದರು. ಆಗ ನ್ಯಾಯಾಧೀಶರು ಹೇಳಿದರು, 'ನೀವು ನಿಜವಾಗಿ ಗಾಂಧೀಜಿಯವರನ್ನು ಪ್ರೀತಿಸುವುದೇ ಆದರೆ, ನೀವೂ ಒಬ್ಬರಿಗೊಬ್ಬರು ಪ್ರೀತಿ ವಿಶ್ವಾಸದಿಂದಿರಿ. ಇಂಥ ಮೂರ್ಖ ವ್ಯವಹಾರ ಬಿಡಿ. ಇಲ್ಲವಾದರೆ ಅವರ ಆತ್ಮ ಸದಾ ಕೊರಗುತ್ತಿರುತ್ತದೆ'. ಆಗ ಅತ್ತೆ ಮತ್ತು ಅಳಿಯನಿಗೆ ಜ್ಞಾನೋದಯವಾಗಿ, ಇನ್ನು ಮುಂದೆ ತಾವು ಯಾವ ಕಾರಣಕ್ಕೂ ಜಗಳವಾಡುವುದಿಲ್ಲವೆಂದು ಪ್ರಮಾಣ ಮಾಡಿದರು. ನ್ಯಾಯಾಧೀಶರ ಸಲಹೆಯಂತೆ, ಅಳಿಯ ಮತ್ತು ಮಗಳು ವೃದ್ಧೆಗೆ ನಮಸ್ಕರಿಸಿದರು. ಅವಳೂ ಸಹ ಅವರಿಬ್ಬರನ್ನು ಆಲಂಗಿಸಿಕೊಂಡು ಆಶೀರ್ವದಿಸಿದಳು. ತಾಯಿ, ಮಗಳು ಮತ್ತು ಅಳಿಯನ ಕಣ್ಣುಗಳಲ್ಲಿ ನೀರಿಳಿಯುತ್ತಿತ್ತು. ಒಬ್ಬರನ್ನೊಬ್ಬರು ಕ್ಷಮಿಸುವಂತೆ ಕೇಳಿಕೊಂಡರು.
ತಾಯಿಯು ತಾನು ಬದುಕಿರುವವರೆಗೂ ಪತಿಯ ಆಸ್ತಿಯನ್ನು ಅನುಭವಿಸಬೇಕೆಂತಲೂ, ಅವಳ ಮರಣಾನಂತರ ಅದು ಮಗಳಿಗೆ ಬರತ್ಕದ್ದೆಂದು ಆದೇಶಿಸಿದರು. ಇದು ಇಬ್ಬರಿಗೂ ನ್ಯಾಯಸಮ್ಮತವೆಂದು ತೋರಿತು. ಹೀಗೆ ಗಾಂಧೀಜಿಯಂತಹ ಮಹಾಪುರುಷರ ಹೆಸರಿನಿಂದಲೇ ಮೊಕದ್ದಮೆ ತೀರ್ಮಾನವಾಯಿತು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

