ನೇತಾಗಿರಿ ಅಲ್ಲ ಚಮಚಾಗಿರಿ!
ಬಾಲಬಡುಕತನ ಅಥವಾ ಚಮಚಾಗಿರಿಗೂ ಒಂದು ಮಿತಿ ಇಲ್ಲವೆ? ಶರಣಾಗುವುದೆಂದರೆ ತನ್ನತನವನ್ನೇ ಬಲಿಕೊಟ್ಟು, ಕೇವಲ ಇನ್ನೊಬ್ಬರನ್ನು ಸಂತುಷ್ಟಗೊಳಿಸಿ, ಹೇಗಾದರೂ ತನ್ನ ಬೇಳೆ ಬೇಯಿಸಿಕೊಳ್ಳುವುದೇ? ಅಥವಾ ಹಾಗೆ ಮಾಡದಿದ್ದರೆ ತನ್ನ ಸ್ಥಾನಕ್ಕೆ ಕುತ್ತು ಬಂದರೂ ಬರಬಹುದೆಂಬ ಹೆದರಿಕೆಯೇ? ಅದಲ್ಲದಿದ್ದರೆ ಪಕ್ಷ ಮತ್ತು ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದವರು ಮಹಾತ್ಮ ಗಾಂಧಿ ಬಳಿಕ ಸೋನಿಯಾ ಗಾಂಧಿ (ಕ.ಪ್ರ. 30/1) ಎಂಬ ಹೇಳಿಕೆಯನ್ನು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕೊಡುತ್ತಿದ್ದಾರೆ? (ಪುಣ್ಯ, ಮೊದಲು ಸೋನಿಯಾ ಗಾಂಧಿ, ನಂತರ ಮಹಾತ್ಮಗಾಂಧಿ ಅಂತ ಹೇಳಲಿಲ್ಲವಲ್ಲ!) ಎಲ್ಲಿಯ ಮಹಾತ್ಮ ಗಾಂಧಿ, ಇನ್ನೆಲ್ಲಿಯ ಸೋನಿಯಾ ಗಾಂಧಿ. ಕೇವಲ ಗಾಂಧಿ ಎಂಬ ಅಡ್ಡ ಹೆಸರು ಇರುವುದರಿಂದ ಈ ಇಬ್ಬರ ತುಲನೆಯೇ? ಅಷ್ಟಕ್ಕೂ ಸೋನಿಯಾ ಮಾಡಿದ ತ್ಯಾಗವಾದರೂ ಏನು? ವಿದೇಶಿ ಮಹಿಳೆ ಎಂಬ ಹಣೆಪಟ್ಟಿ ಹೊತ್ತು ಈ ದೇಶದ ಉನ್ನತ ಹುದ್ದೆ ಅಲಂಕರಿಸುವುದು ಯಾರಿಗೆ ತಾನೆ ಇಷ್ಟ? ಕಾಂಗ್ರೆಸ್ ಪಕ್ಷದೊಳಗೂ ಭಿನ್ನಮತ ಕೇಳಿ ಬರುತ್ತಿತ್ತು, ಇನ್ನು ವಿಪಕ್ಷದವರಂತೂ ಸೋನಿಯಾ ಪ್ರಧಾನಿಯಾಗಲು ಒಪ್ಪುತ್ತಲೇ ಇರಲಿಲ್ಲ. ಈ ಎಲ್ಲ ಕಾರಣಗಳಿಂದ ಹುದ್ದೆ ಸಿಗಲಿಲ್ಲವೇ ಹೊರತು ಅವರ ತ್ಯಾಗಮನೋಭಾವದಿಂದಲ್ಲ ಎಂಬುದನ್ನು ಮೊಯ್ಲಿಯವರು ತಿಳಿದಿರಬೇಕಿತ್ತು. ಇನ್ನು ಹೊಗಳುಭಟರ ಸಂಸ್ಕೃತಿಯ ಇವರು ಮತ್ತೊಬ್ಬರ ಸಂಸ್ಕೃತಿಯ ಬಗ್ಗೆ ಮಾತನಾಡಲು ಅರ್ಹರಲ್ಲ. ಗಾಂಧಿ ಎಂಬ ಹಣೆಪಟ್ಟಿ ಇಟ್ಟುಕೊಂಡೇ ಮೊಯ್ಲಿಯಂಥವರು ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿದ್ದಾರೆ. ಹಾಗೆ ನೋಡಿದರೆ, ಸೋನಿಯಾ ದೇಶಕ್ಕಂತೂ ಯಾವ ತ್ಯಾಗವನ್ನೂ ಮಾಡಲೇ ಇಲ್ಲ. ಪಕ್ಷಕ್ಕೂ ತ್ಯಾಗ ಎನ್ನುವುದು ಎಲ್ಲಿದೆ? ಸ್ವತಃ ತಾನೇ ಪಕ್ಷದ ಅಧಿನಾಯಕಿಯಾಗಿ, ನಾಮಕಾವಾಸ್ತಾ ಪ್ರಧಾನಿಯನ್ನು ಕೂರಿಸಿ ಕಾರಬಾರ ನಡೆಸುತ್ತಿರುವುದು ಒಂದೆಡೆಯಾದರೆ, ಮುಂದಿನ ತಯಾರಿ ಎಂಬಂತೆ ತನ್ನ ಮಗ ರಾಹುಲ್ ಗಾಂಧಿಯನ್ನು ಉಪರಾಷ್ಟ್ರಾಧ್ಯಕ್ಷನನ್ನಾಗಿ ನೇಮಿಸಿ, ಹೊಗಳುಭಟ್ಟರಿಂದ ಅವನೇ ಮುಂದಿನ ಪ್ರಧಾನಿ ಪಟ್ಟಕ್ಕೆ ಯೋಗ್ಯ ಎನ್ನುವಂತೆ ಬಿಂಬಿಸುತ್ತಿದ್ದಾರಲ್ಲ ಇದೇ ಅವರ ತ್ಯಾಗವೇ?
-ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ. ಉ.ಕ
ರಜೆ ಮಂಜೂರಾತಿ: ಪುನರ್ ಪರಿಶೀಲಿಸಲಿ
ಕಳೆದವಾರ ಪೇದೆಯೊಬ್ಬರು, ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ರಜೆ ಮಂಜೂರಾತಿಯನ್ನು ನಿರಾಕರಿಸಿದ್ದಕ್ಕಾಗಿ ಗುಂಡಿಟ್ಟು ಕೊಂದ ಸುದ್ದಿ ಎಲ್ಲಾ ಪತ್ರಿಕೆಗಳು, ಮಾಧ್ಯಮಗಳಲ್ಲಿ ಬಿತ್ತರವಾಯಿತು. ಇದು ಎಲ್ಲಾ ಸುದ್ದಿಯಂತೆಯೇ ಕೆಲದಿನಗಳ ನಂತರ ಎಲ್ಲರ ಮನದಿಂದಲೂ ಮರೆಯಾಗುವುದು. ನಮ್ಮ ಸರ್ಕಾರಗಳು ನೌಕರರ ರಜೆಯ ವಿಚಾರದಲ್ಲಿ ಶೀಘ್ರ ಪುನರ್ ಪರಿಶೀಲನೆ ಮಾಡಬೇಕಾದ ಅಗತ್ಯವಿದೆ. ಬ್ರಿಟಿಷರ ಕಾನೂನುಗಳು ಕಾಲಕ್ಕೆ ತಕ್ಕಂತೆ ಮಾರ್ಪಾಟುಗೊಳ್ಳದೇ ಇರುವುದೇ ಇಂತಹ ದುರಂತಗಳಿಗೆ ಕಾರಣ. ರಜೆಗಳ ವಿಷಯದಲ್ಲಿ ವೃಥಾ ಕ್ಯಾತೆ ತೆಗೆಯುವುದು ಅಧಿಕಾರಿಶಾಹಿಯ ಅಟ್ಟಹಾಸ ಹಾಗೂ ನೌಕರರನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದಲ್ಲದೇ ಬೇರೇನೂ ಆಗಿರುವುದಿಲ್ಲ. ಪ್ರಬಲವಾದ ಕಾರಣಗಳಿಲ್ಲದೇ ರಜೆ ಮಂಜೂರಾತಿಯನ್ನು ನಿರಾಕರಿಸಕೂಡದು. ಇದು ವ್ಯಕ್ತಿಯ ಮೂಲಭೂತ ಸ್ವಾತಂತ್ರ್ಯಕ್ಕೆ ಮಾರಕ.
- ರೂಪಶ್ರೀ, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

