ಹಿರಿಯರ ಹಾದಿ
ಶರತ್‌ಚಂದ್ರರು ಬಂಗಾಳಿ ಸಾಹಿತ್ಯ ಪ್ರಪಂಚದಲ್ಲಿ ವಿಶಿಷ್ಟ ಸಾಧನೆ ಗೈದವರು. ವಂಗಸಾಹಿತ್ಯದ ಆಗಸಕ್ಕೆ ಇಬ್ಬರು ಚಂದ್ರರು ಮತ್ತು ಒಬ್ಬನೇ ಸೂರ್ಯ ಎಂದು ಹೇಳುತ್ತಾರೆ. ಅಂದರೆ ರವೀಂದ್ರನಾಥ ಠಾಕೂರರು ಸೂರ್ಯನಂತಿದ್ದರೆ ಬಂಕಿಂಚಂದ್ರ ಮತ್ತು ಶರತ್‌ಚಂದ್ರರು ಇಬ್ಬರು ಚಂದ್ರರು. ತುಂಬಾ ಬಡತನದ ಕುಟುಂಬದಲ್ಲಿ ಜನಿಸಿದ ಶರತ್‌ಚಂದ್ರರು ಮೂವತೈದಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಇವರ ಅನೇಕ ಕಾದಂಬರಿಗಳು ಚಲನಚಿತ್ರವಾಗಿ ಅಪಾರ ಜನಪ್ರಿಯತೆ ಗಳಿಸಿದವು. ಅದರಲ್ಲಿ ದೇವದಾಸ್, ಅಪ್ನೆ ಪರಾಯೆ, ಖುಶ್ಬೂ ಮುಂತಾದ ಚಿತ್ರಗಳು ಶರತ್ ಅವರ ಕಾದಂಬರಿ ಆಧಾರಿತ ಚಿತ್ರಗಳು. ಇಂದಿಗೂ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಅವರ ಮನೆಯ ಸಮೀಪದಲ್ಲಿ 'ಶರತ್ ಮೇಳ' ಏಳುದಿನಗಳವರೆಗೆ ಸರ್ಕಾರದ ನೆರವಿಲ್ಲದೆ ಶರತ್‌ಚಂದ್ರರ ಸ್ಮರಣಾರ್ಥ ನಡೆಸಿ ಈ ಅಸಾಮಾನ್ಯ ಕಾದಂಬರಿಕಾರನಿಗೆ ಗೌರವವನ್ನು ಅರ್ಪಿಸಲಾಗುತ್ತಿದೆ. ಈರೀತಿ ಒಬ್ಬ ಸಾಹಿತಿಗೆ ಅವನ ಅಭಿಮಾನಿಗಳು ಅರ್ಪಿಸುವ ಗೌರವ ತುಂಬಾ ಅಪರೂಪ.
ಶರತ್‌ಚಂದ್ರರು ಬರ್ಮ ಯಾತ್ರೆಯನ್ನು ಕೈಗೊಂಡು, ಅಲ್ಲಿಯೇ ನೌಕರಿಗೆ ಸೇರಿ, ಸದಾ ಅಧ್ಯಯನ ಶೀಲರಾಗಿದ್ದರು. ರಂಗೂನಿನಲ್ಲಿದ್ದಾಗ ನಡೆದ ಒಂದು ಘಟನೆ ಅವರ ಹೃದಯ ವೈಶಾಲ್ಯವನ್ನೂ, ಕಷ್ಟದಲ್ಲಿರುವವರಿಗೆ ನೆರವಾಗಬೇಕೆಂಬ ಮನೋಭಾವವನ್ನೂ ಸೂಚಿಸುತ್ತದೆ. ಶರತ್‌ಚಂದ್ರರು ವಾಸವಾಗಿದ್ದ ಮನೆಯ ಇನ್ನೊಂದು ಬದಿಯಲ್ಲಿ ಒಬ್ಬ ಮುದುಕ ತನ್ನ ಪ್ರಾಯಬಂದ ಮಗಳೊಡನೆ ವಾಸವಾಗಿದ್ದ. ದಿನಾಲೂ ಕುಡಿತದ ಚಟ ಬೇರೆ. ಮನೆಗೆ ತನ್ನ ಗೆಳೆಯರನ್ನು ಕರೆತಂದು ಅವರಿಗೆ ಸುರಾಪಾನವನ್ನೇರ್ಪಡಿಸುತ್ತಿದ್ದ. ಆಗ ಆತನ ಮಗಳೇ ಬಂದವರ ಸೇವೆ ಮಾಡಬೇಕಾಗಿತ್ತು. ಇಲ್ಲದಿದ್ದರೆ ತಂದೆಯ ಕಡೆಯಿಂದ ಬೈಗುಳವನ್ನೋ, ಹೊಡೆತವನ್ನೋ ತಿನ್ನಬೇಕಾಗುತ್ತಿತ್ತು. ಈ ರೀತಿಯ ದುಂದುಗಾರಿಕೆಯಿಂದ ಆ ಮುದುಕನ ಸಾಲ ದಿನದಿಂದ ದಿನಕ್ಕೆ ಏರತೊಡಗಿತು. ಮುದುಕನೊಬ್ಬನ ಸಾಲಕ್ಕೆ ಬದಲಾಗಿ ತನ್ನ ಮಗಳನ್ನೇ ಮದುವೆ ಮಾಡಿಕೊಡುವುದಾಗಿ ಮಾತುಕೊಟ್ಟಿದ್ದ. ಇದು ಶರತ್‌ಚಂದ್ರರಿಗೆ ತಿಳಿದು, ಆ ಹುಡುಗಿಯ ಬಗ್ಗೆ ಕನಿಕರ ಮೂಡಿತು. ಆ ಹುಡುಗಿಯನ್ನು ಅಂತಹ ದಾರುಣ ಪರಿಸ್ಥಿತಿಯಿಂದ ಪಾರುಮಾಡಲು ನಿರ್ಧರಿಸಿ, ಆ ಮುದುಕನ ಸಾಲವನ್ನೆಲ್ಲಾ ತಾವೇ ತೀರಿಸಿದ್ದಲ್ಲದೆ, ಆ ಹುಡುಗಿಯನ್ನೂ ವಿವಾಹವಾದರು. ದಂಪತಿಗಳಿಗೆ ಒಂದು ಗಂಡುಮಗುವೂ ಹುಟ್ಟಿತು. ದುರ್ದೈವದಿಂದ ಶರತ್ತರ ಪತ್ನಿ ಮತ್ತು ಮಗ ಪ್ಲೇಗ್ ರೋಗದಿಂದ ಮರಣಿಸಿದರು. ಈ ಘಟನೆಯಿಂದ ಶರತ್‌ಚಂದ್ರರು ಕಷ್ಟದಲ್ಲಿದ್ದವರಿಗೆ ಹೇಗೆ ನೆರವಾಗುತ್ತಿದ್ದರು ಎಂದು ತಿಳಿದುಬರುತ್ತದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

