ತಪ್ಪಾಯ್ತು ತಿದ್ಕೋತೀವಿ
ಸುರೇಶ್ ಹೆಗಡೆಯವರು ಬರೆಯುತ್ತಾರೆ- 'ಜ.9ರಂದು ಮುಖಪುಟದ 'ಕತ್ತರಿಸಿ ಕೊಂದರು' ಎಂಬ ವರದಿಯಲ್ಲಿ ತಪ್ಪು ನುಸುಳಿದೆ. ವರದಿಯಲ್ಲಿ 'ದಟ್ಟವಾದ ಮಂಜಿನ ಲಾಭ ಪಡೆದಿರುವ ಆಗಾಗ ಗಡಿಯೊಳಗೆ ಪ್ರವೇಶಿಸುತ್ತಿದ್ದಾರೆ' ಎಂದು ಅಚ್ಚಾಗಿದೆ. ಈ ವಾಕ್ಯಕ್ಕೆ ಅರ್ಥವಿಲ್ಲ. ಒಂದೋ 'ದಟ್ಟವಾದ ಮಂಜಿನ ಲಾಭಪಡೆದು ಆಗಾಗ ಗಡಿಯೊಳಗೆ ಪ್ರವೇಶಿಸುತ್ತಿದ್ದಾರೆ' ಎಂದಾಗಬೇಕಿತ್ತು. ಇಲ್ಲವಾದಲ್ಲಿ 'ದಟ್ಟವಾದ ಮಂಜಿನ ಲಾಭಪಡೆದಿರುವ ಪಾಕ್ ಸೈನಿಕರು ಆಗಾಗ ಗಡಿಯೊಳಗೆ ಪ್ರವೇಶಿಸುತ್ತಿದ್ದಾರೆ' ಎಂದಾಗಬೇಕಿತ್ತಲ್ಲವೇ?' ಎಂದಿದ್ದಾರೆ.
ಹೊನ್ನಾವರದಿಂದ ಶಂಕರನಾರಾಯಣ ಭಟ್ ಅವರು ಬರೆಯುತ್ತಾರೆ- 'ಅಂಕೆ ಸಂಖ್ಯೆಗಳಿದ್ದಾಗ '' ಚಿಹ್ನೆ ಬಳಸಿದರೆ ಚೆನ್ನ. 10,000, 25,000 ಇತ್ಯಾದಿ. ಆದರೆ ಎಲ್ಲಿ ಅಕ್ಷರದಿಂದ ಮೊಬಲಗನ್ನು ಸೂಚಿಸುತ್ತಾರೋ ಅಲ್ಲಿ ಲಾಂಛನ ಪ್ರಯೋಗ ಸರಿ ಎನ್ನಿಸಲಿಕ್ಕಿಲ್ಲ. ಮಾಸಾಶನವನ್ನು ನಾಲ್ಕು ನೂರು ರುಪಾಯಿಯಿಂದ ಐದು ನೂರು ರುಪಾಯಿಗೆ ಏರಿಸಲಾಗಿದೆ. ಒಂದು ಲಕ್ಷ ರೂಪಾಯಿಗೆ ಏರಿಸಲಾಗಿದೆ ಎಂಬುದರ ಬದಲಿಗೆ ರು. ಲಕ್ಷಕ್ಕೆ ಏರಿಸಿದೆ ಅಂದರೆ ಸರಿಯೆನ್ನಿಸದು. ಈ ರೀತಿಯ ಪ್ರಯೋಗ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುತ್ತದೆ. ಇದು ಕೇವಲ ನನ್ನ ಸಂಶಯವನ್ನು ಪರಿಹರಿಸಿಕೊಳ್ಳುವುದಕ್ಕಷ್ಟೇ ಹೊರತು, ತಪ್ಪು ಹುಡುಕುವುದಕ್ಕಲ್ಲ' ಎಂದಿದ್ದಾರೆ.
ಶಂಕರನಾರಾಯಣ ಭಟ್ ಅವರು ಯಾವ ಸುದ್ದಿಯಲ್ಲಿ ಅಥವಾ ಯಾವ ದಿನ ಈ ರೀತಿಯಾಗಿ ಬರೆಯಲಾಗಿದೆ ಎಂಬುದನ್ನು ಹೇಳಿಲ್ಲ. ಅವರು ಹೇಳಿರುವುದು ಸರಿಯಾಗಿದೆ. ಅಕ್ಷರಗಳಲ್ಲಿ ಅಂಕಿಯನ್ನು ಬರೆದಾಗ '' ಚಿಹ್ನೆ ಬಳಸಲಾಗುವುದಿಲ್ಲ. ಹಾಗೆ ಬಳಸಿದ್ದಲ್ಲಿ ಅದು ತಪ್ಪು.
ರಾಜೀವ್ ಪಟವರ್ಧನ್ ಅವರು ಬರೆಯುತ್ತಾರೆ- 'ಜ.29ರ ಮುಖಪುಟದಲ್ಲಿ 'ಇಂದು ವಿಶ್ವರೂಪಂ ಭವಿಷ್ಯ' ಶೀರ್ಷಿಕೆಯಲ್ಲಿ 'ಮದ್ರಾಸ್ ಹೈಕೋರ್ಟ್' ಎಂದಿದೆ. ಅದು 'ಚೆನ್ನೈ ಹೈಕೋರ್ಟ್' ಎಂದಾಗಬೇಕು ಅಲ್ಲವೇ? ಪುಟ 4ರಲ್ಲಿ 'ವಿಜಯಕುಮಾರ ಹತ್ಯೆ: ಬಿಪಿನ್ ವಿಚಾರಣೆ', ಉಪಶೀರ್ಷಿಕೆ 'ಎರಡು ಗಂಟೆ ಮಾತುಕತೆ ನಡೆಸಿದ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ: ಅಧಿಕಾರಿಗಳ ಸೂಚನೆಯಂತೆ 25 ಅಂಶಗಳನ್ನು ಆಧರಿಸಿ ತನಿಖೆ' ವರದಿಯಲ್ಲಿ ಘಟನೆಯ ತನಿಖಾಧಿಕಾರಿ ಬಿಪಿನ್ ಎಂದ ಮೇಲೆ ಅವರು ವಿಚಾರಣೆಗೆ ಠಾಣೆಗೆ ಬಂದಿರುತ್ತಾರಲ್ಲವೇ? 'ಮಾತುಕತೆ' ಎಂಬ ಪದ ಎಷ್ಟು ಸೂಕ್ತ? ಹಾಗೆಯೇ 'ಅಧಿಕಾರಿಗಳ' ಪದದ ಬದಲು 'ಹಿರಿಯ ಅಧಿಕಾರಿಗಳ' ಎಂದಿದ್ದರೆ ಹೆಚ್ಚು ಸೂಕ್ತವೆನಿಸುತ್ತಿತ್ತು. ಏಕೆಂದರೆ ಸ್ವತಃ ಬಿಪಿನ್ ಅವರೇ ಉನ್ನತ ಅಧಿಕಾರದ ಸ್ಥಾನದಲ್ಲಿರುವವರು' ಎಂದಿದ್ದಾರೆ.
'ಎರಡು ಗಂಟೆ ಮಾತುಕತೆ ನಡೆಸಿದರು' ಎಂಬುದು ಸರಿಯಲ್ಲ. ವಿಚಾರಣೆ ನಡೆಸಿದರು ಎಂದಿರಬೇಕಿತ್ತು. 'ಮದ್ರಾಸ್ ಹೈಕೋರ್ಟ್' ತಪ್ಪು ಬಳಕೆಯಲ್ಲ. ಚೆನ್ನೈ, ಮುಂಬಯಿ ಹೀಗೆ ಊರುಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಆದರೆ ನ್ಯಾಯಾಂಗದಲ್ಲಿನ್ನೂ ಅವುಗಳ ಹೆಸರು ಬದಲಾವಣೆಯಾಗಿಲ್ಲ. ಆದ್ದರಿಂದ ಇಂದಿಗೂ 'ಮದ್ರಾಸ್ ಹೈಕೋರ್ಟ್' ಎಂಬ ಹೆಸರೇ ಇದೆ. ಈ ಸಂಗತಿಯನ್ನು ಹಿಂದೊಮ್ಮೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

