ಸಂಪಾದಕೀಯ

ಹಕ್ಕನ್ನು ನಿರಾಕರಿಸಬೇಡಿ

Published On :

ರಾಜ್ಯದ ಆಡಳಿತದ ಸೂತ್ರಗಳನ್ನು ಸುಮಾರು ಐವತ್ತೇಳು ತಿಂಗಳ ಹಿಂದೆ ವಶಪಡಿಸಿಕೊಂಡ ಭಾರತೀಯ ಜನತಾ ಪಾರ್ಟಿ ಸರ್ಕಾರ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು, ಇಲ್ಲಸಲ್ಲದ ನೆಪವನ್ನು ಹೇಳಿ, ಹಿಂದೇಟು ಹಾಕುತ್ತಿರುವುದು ನಿಜಕ್ಕೂ ಖಂಡನೀಯ. ರಾಜ್ಯ ಸರ್ಕಾರದ ಈ ವರ್ತನೆಯನ್ನು ಹೈಕೋರ್ಟ್, ಸುಪ್ರೀಮ್ ಕೋರ್ಟ್‌ಗಳೆರಡೂ ಗಂಭೀರವಾದ ಪದಗಳಲ್ಲೇ ಖಂಡಿಸಿರುವುದು, ಸರ್ಕಾರ ನಡೆಸುವವರ ಜನತಾಂತ್ರಿಕ ಪ್ರಜ್ಞೆಯನ್ನೇ ಟೀಕಿಸಿದಂತಾಗಿದೆ. ಇದನ್ನು ಸರ್ಕಾರ ಒಪ್ಪಲೇ ಬೇಕು.
ರಾಜ್ಯದಲ್ಲಿ 209 ಸ್ಥಳೀಯ ಸಂಸ್ಥೆಗಳ ಚುನಾವಣೆ ಫೆಬ್ರವರಿ- ಮಾರ್ಚ್‌ನಲ್ಲಿ ನಡೆಯಬೇಕಾಗಿತ್ತು. ಅದರಲ್ಲಿ ಪುರಸಭೆಗಳು, ನಗರ ಪಾಲಿಕೆಗಳು, ಮಹಾನಗರ ಪಾಲಿಕೆಗಳು ಸೇರಿವೆ. ರಾಜ್ಯ ಚುನಾವಣೆ ಆಯೋಗ ಕಳೆದ ವರ್ಷವೇ ಈ ವಿಚಾರದಲ್ಲಿ ಸರ್ಕಾರಕ್ಕೆ ಪತ್ರ ಬರೆದು, ಮೀಸಲು ಸ್ಥಾನಗಳನ್ನು ನಿಗದಿಪಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿ, ಸಕಾಲದಲ್ಲಿ ಪಟ್ಟಿಯನ್ನು ಕಳಿಸಿದರೆ, ಚುನಾವಣೆ ಆಯೋಗ ಚುನಾವಣೆ ನಡೆಸಲು ಸಜ್ಜಾಗಿದೆ ಎನ್ನುವುದನ್ನು ತಿಳಿಸಲಾಗಿತ್ತು.
ಮೊದಲು ಮೀಸಲು ಸ್ಥಾನಗಳನ್ನು ನಿಗದಿಪಡಿಸುವ ಅಧಿಕಾರ ಆಯೋಗಕ್ಕೇ ಇತ್ತು. ಆದರೆ ಅದನ್ನು ಅನಂತರ ಸರ್ಕಾರ ತನ್ನ ಕೈಗೇ ತೆಗೆದುಕೊಂಡಿತ್ತು. ಅದಕ್ಕೇನೂ ಕಾರಣಗಳನ್ನು ಕೊಟ್ಟಿರಲಿಲ್ಲ. ಈಗ ಸರ್ಕಾರ ತಾನು ಮಾಡಬೇಕಾದ ಕೆಲಸ ಮಾಡಿಲ್ಲ.
2001ರ ಜನಗಣತಿಯ ಆಧಾರದ ಮೇಲೆ ಮೀಸಲು ಸ್ಥಾನಗಳ ಹಂಚಿಕೆಯ ವಿವರಗಳು ಸಿದ್ಧವಾಗಿವೆ. ಆದರೆ ಸರ್ಕಾರ 2011ರ ಜನಗಣತಿಯ ವರದಿಯನ್ನು ಆಧರಿಸದೇ 2013ರಲ್ಲಿ ಚುನಾವಣೆ ನಡೆಸಿದರೆ, ಅನೇಕ ಮತದಾರರ ನ್ಯಾಯವಾದ ಹಕ್ಕನ್ನು ನಿರಾಕರಿಸಿದಂತೆ ಆಗುತ್ತದೆ ಎನ್ನುವ ನೆಪ ಹೇಳಿ ಸುಮ್ಮನಾಯಿತು.
2011ರ ಜನಗಣತಿಯ ವಿವರಗಳು ಈಗಷ್ಟೇ ಸಿದ್ಧವಾಗಿರುವುದರಿಂದ, ಈಗ ಪ್ರಕಟವಾಗಿರುವ ಜನಗಣತಿಯ ಕರಡು ವರದಿ ಅಂತಿಮ ವರದಿಯ ಸ್ವರೂಪ ಪಡೆದ ಮೇಲೇ ಮುಂದಿನ ಕ್ರಮ ಎನ್ನುವ ಸರ್ಕಾರದ ವಾದವನ್ನು ನ್ಯಾಯಾಲಯಗಳು ಒಪ್ಪಿಲ್ಲ.
ಈಗ ಅಧಿಕಾರದಲ್ಲಿರುವ ಸರ್ಕಾರಕ್ಕೆ ತೀವ್ರ ಬಿಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದಿರುವಾಗ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುತಾರಾಂ ಇಷ್ಟವಿಲ್ಲ. ಈಗ ಆ ಚುನಾವಣೆಯನ್ನು ಮುಂದಕ್ಕೆ ಹಾಕಿದರೆ, ಮುಂದೆ ವಿಧಾನ ಸಭೆ ಚುನಾವಣೆಯ ಅನಂತರ ಏನಾಗುವುದೋ ಈಗಲೇ ಹೇಳುವುದಕ್ಕೆ ಬರುವುದಿಲ್ಲ. ಸದ್ಯಕ್ಕಂತೂ ಈಗಿನ ಸರ್ಕಾರ ಆ ಚುನಾವಣೆ ಫಲಿತಾಂಶದ ಪರಿಣಾಮವನ್ನು ಎದುರಿಸಬೇಕಾಗುವುದಿಲ್ಲ. ಅದು ಆಳುವ ಕೂಟದ ಆಸಕ್ತ ಹಿತದ ನೋಟ. ಸಂಸತ್ ಸದಸ್ಯರು, ವಿಧಾನ ಮಂಡಲಗಳ ಸದಸ್ಯರು, ಕಾಲಕಾಲಕ್ಕೆ ಚುನಾವಣೆಗಳು ನಡೆಯುವುದರಿಂದಲೇ ಅವರ ಸ್ಥಾನವನ್ನು ಪಡೆದಿರುವುದು. ಆ ಸದಸ್ಯರ ಪ್ರತಿನಿಧಿಗಳನ್ನು ಒಳಗೊಂಡ ಸರ್ಕಾರವೇ ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಚಾರದಲ್ಲಿ ಗೊಂದಲಕ್ಕೆ ಸಿಕ್ಕಿ ಬಿದ್ದಿರುವುದು.
ಈಗ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎನ್ನುವ ಸರ್ಕಾರದ ವಾದವನ್ನು ಸುಪ್ರೀಮ್ ಕೋರ್ಟ್‌ನ ಪೀಠ ತಿರಸ್ಕರಿಸಿದೆ. ಸೋಮವಾರ ಸಂಜೆಯ ಒಳಗೆ ಚುನಾವಣೆ ಆಯೋಗಕ್ಕೆ ಸರ್ಕಾರ ಮೀಸಲು ಸ್ಥಾನಗಳ ಪಟ್ಟಿಯನ್ನು ಕೊಡಬೇಕೆಂದೂ, ಕೊಡದೆ ಇದ್ದರೆ, 2001ರ ಜನಗಣನೆ ವರದಿಯ ಆಧಾರದ ಮೇಲೆ ರೂಪಿಸಿದ್ದ ಪಟ್ಟಿಯನ್ನೇ ಬಳಸಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಆಯೋಗಕ್ಕೆ ಸುಪ್ರೀಮ್ ಕೋರ್ಟ್ ಪೀಠ ಆದೇಶ ನೀಡಿದೆ.
ಇಷ್ಟಾದರೂ, ಸರ್ಕಾರ ತನ್ನ ಹಟಮಾರಿತನವನ್ನು ಬಿಡದೇ ಸುಪ್ರೀಮ್ ಕೋರ್ಟಿನಲ್ಲಿ ಮೇಲ್ಮನವಿಯನ್ನು ಹೂಡಿದೆ. ಸರ್ಕಾರದ ಬಳಿ ಈಗ ಬೇರೆ ಯಾವ ಹೊಸ ಅಂಶವೂ ಇಲ್ಲ. ಹಿಂದೆ ಹೇಳಿದ್ದನ್ನೇ ಈಗ ಇನ್ನೊಮ್ಮೆ ಹೇಳಬೇಕಷ್ಟೆ.
ಹೈಕೋರ್ಟಿನ ಆದೇಶ ಪ್ರಕಟವಾದ ಅನಂತರ ಸರ್ಕಾರ ಕೈಗೊಂಡ ಕ್ರಮ ಎಂದರೆ ಅದನ್ನು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸುವುದು. ಹೈಕೋರ್ಟಿನ ಆದೇಶವನ್ನು ಸುಪ್ರೀಮ್ ಕೋರ್ಟ್ ತಡೆಹಿಡಿದರೆ ಅಲ್ಲಿಗೆ ಚುನಾವಣೆಯನ್ನು ನಡೆಸಲೇಬೇಕಾದ ಸಮಸ್ಯೆಯ ವಿಚಾರದಲ್ಲಿ ಬೀಸುವ ದೊಣ್ಣೆಯನ್ನು ತಪ್ಪಿಸಿಕೊಂಡಂತೆಯೇ ಎಂದು ಸರ್ಕಾರ ಭಾವಿಸಿತ್ತು.
ಒಂದು ವೇಳೆ ಸುಪ್ರೀಮ್ ಕೋರ್ಟಿನ ತೀರ್ಪು ಸರ್ಕಾರದ ವಿರುದ್ಧವಾದರೆ, ಆ ಸವಾಲನ್ನು ನಿಭಾಯಿಸಲು ಸರ್ಕಾರಕ್ಕೆ ಇದ್ದಿದ್ದು ಒಂದೇ ಮಾರ್ಗ: 2001ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಂಡು ಮೀಸಲು ಸ್ಥಾನಗಳನ್ನು ನಿಗದಿಪಡಿಸುವುದು. ಅಂತಹ ಚಿಂತನೆಯೇ ಸರ್ಕಾರದಲ್ಲಿ ಇರಲಿಲ್ಲವೇನೋ. ಕೊನೆಯ ನಿಮಿಷದಲ್ಲಿ ಮೀಸಲು ಸ್ಥಾನಗಳ ಪಟ್ಟಿ ಸಿದ್ಧವಾಗಿಲ್ಲ ಎಂದು ಹೇಳಿದರೆ ಚುನಾವಣೆ ಮುಂದಕ್ಕೆ ಹೋಗಲೇಬೇಕು ಎನ್ನುವುದು ಸರ್ಕಾರದ ನಿಲವು. ಈ ನಿಲವಿನ ವಿರುದ್ಧ ಸರ್ಕಾರದ ಹಿರಿಯ ಅಧಿಕಾರಿಗಳೇ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸಿದ್ದಾರೆನ್ನುವ ವರದಿಗಳು ಪ್ರಕಟವಾಗಿವೆ.
ಸುಪ್ರೀಮ್ ಕೋರ್ಟಿನ ಶುಕ್ರವಾರದ ಆದೇಶವನ್ನು ಗಮನಿಸಿದರೆ, ಏನೇ ಆಗಲಿ, ಸಕಾಲದಲ್ಲಿ ನಡೆಯಬೇಕಾದ ಚುನಾವಣೆಯನ್ನು ನಡೆಸಿ ಎನ್ನುವುದೇ ತೀರ್ಪಿನ ಆದೇಶವೆನ್ನುವುದರಲ್ಲಿ ಸಂಶಯ, ಅನುಮಾನ ಅಥವಾ ದ್ವಂದ್ವ ಪ್ರಕಟವಾಗುವುದಕ್ಕೆ ಅವಕಾಶವೇ ಇಲ್ಲ. ಹಿಂದೆ ಪರ್ಯಾಯ ವ್ಯವಸ್ಥೆಯತ್ತ ಗಮನಹರಿಸದೇ ಇದ್ದ ಸರ್ಕಾರ ಈಗ ರಾಜ್ಯದ ಬಹುತೇಕ ಪೇಟೆ- ಪಟ್ಟಣಗಳ ನಾಗರಿಕರ ಜನತಾಂತ್ರಿಕ ಹಕ್ಕನ್ನು ನಿರಾಕರಿಸಲು ಮುಂದಾಗಿದೆ. ಹಾಗೆಂದು ನೇರವಾಗಿ ಹೇಳಿಲ್ಲ. ಆದರೆ ಮಾಡಬೇಕಾದ ಕೆಲಸವನ್ನು ಮಾಡದೇ ಚುನಾವಣೆ ಆಯೋಗದ ಕೈಗಳನ್ನು ಕಟ್ಟಿಹಾಕಿದೆ. ಈ ಕಗ್ಗಂಟನ್ನು ಬಿಡಿಸುವುದು ಸಾಧ್ಯವಿಲ್ಲ. ಅದನ್ನು ಕತ್ತರಿಸಬೇಕಷ್ಟೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.