ಪ್ರಥಮ ದರ್ಜೆಯನ್ನು ಪಡೆಯಬೇಕು..
ಪ್ರೊ.ಕೆ.ಅನಂತರಾಮಯ್ಯನವರು ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕೆಲಸದ ವಿಷಯದಲ್ಲಿ...
ಪ್ರೊ.ಕೆ.ಅನಂತರಾಮಯ್ಯನವರು ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕೆಲಸದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಿನ ವಕ್ತಿಯಾಗಿ, ಒಮ್ಮೊಮ್ಮೆ ಕಠಿಣ, ಆದರೆ ಹೃದಯವಂತಿಕೆ ಹೊಂದಿದ್ದ ವಿಶಿಷ್ಠ ವ್ಯಕ್ತಿಯಾಗಿದ್ದರು. ತರಗತಿಯಲ್ಲಿ ಒಂದು ನಿಮಿಷವನ್ನೂ ವ್ಯರ್ಥವಾಗಿ ಕಳೆದವರಲ್ಲ. ಅದೇರೀತಿ ತರಗತಿಯಲ್ಲಿ ವಿದ್ಯಾರ್ಥಿಗಳೊಡನೆ ಸಲುಗೆಯಿಂದ ನಡೆದುಕೊಂಡವರೂ ಅಲ್ಲ. ಪ್ರೊ. ಮೂರ್ತಿರಾಯರ ಸಮಕಾಲೀನರಾಗಿದ್ದ ಅನಂತರಾಮಯ್ಯನವರು ಗುಣಮಟ್ಟದ ವಿಷಯದಲ್ಲಿ ಎಂದಿಗೂ ರಾಜಿಯಾಗುತ್ತಿರಲಿಲ್ಲ. ಒಬ್ಬ ಅಧ್ಯಾಪಕರು ಅವರ ಇಂಗ್ಲಿಷ್ ವಿಭಾಗಕ್ಕೆ ಪ್ರಾಧ್ಯಾಪಕರಾಗಿ ವರ್ಗಮಾಡಿಸಿಕೊಂಡು ಬಂದರು. ಅವರು ಸಾಕಷ್ಟು ಸಿದ್ಧತೆ ಮಾಡಿಕೊಳ್ಳದೆ ಕಾಲೇಜಿಗೆ ಬರುತ್ತಿದ್ದುದು ಮತ್ತು ವಿಷಯದ ಬಗ್ಗೆ ಪಾಂಡಿತ್ಯವಿಲ್ಲದೇ ಇದ್ದುದು ಅನಂತರಾಮಯ್ಯನವರಿಗೆ ಮೊದಲೇ ಗೊತ್ತಿದ್ದರಿಂದ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ನಿರಾಕರಿಸಿದರು. ಆದರೆ ರಿಜಿಸ್ಟ್ರಾರ್ ಒತ್ತಾಯಕ್ಕೆ ಮಣಿದು ಕೆಲಸಕ್ಕೆ ತೆಗೆದುಕೊಂಡರೂ ಅವರಿಗೆ ಆನರ್ಸ್ತರಗತಿಗಳನ್ನು ಮಾತ್ರ ಕೊಡಲಿಲ್ಲ. ಈ ಬಗ್ಗೆ ಅವರು ಸಮಜಾಯಿಷಿ ನೀಡಿದ್ದು ಹೀಗೆ. "ಆತ ಇಂಟರ್ ಮೀಡಿಯೆಟ್ ತರಗತಿಗಳಲ್ಲಿಯೇ ಕವನದ ಅರ್ಥ ತಪ್ಪು ಹೇಳುತ್ತಾರೆ. ಪಾಠಕ್ಕೆ ಸಿದ್ಧತೆ ಮಾಡಿಕೊಂಡು ಬರುವುದಿಲ್ಲ. ಅವರಿಗೆ ಆನರ್ಸ್ ತರಗತಿ ಕೊಡುವುದು ಹೇಗೆ?".
ಇನ್ನೊಮ್ಮೆ ಆನರ್ಸ್ ತರಗತಿಯಲ್ಲಿ ಒಬ್ಬ ಬಹಳ ಬುದ್ಧಿವಂತೆ ಹುಡುಗಿ ಓದುತ್ತಿದ್ದಳು. ಮೂರು ವರ್ಷವೂ ಎಲ್ಲ ಅಧ್ಯಾಪಕರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಳು. ಆಕೆ ಮೊದಲ ದರ್ಜೆಯಲ್ಲಿ ಉತ್ತೀರ್ಣಳಾಗುತ್ತಾಳೆಂಬ ಭರವಸೆ ಎಲ್ಲ ಪ್ರಾಧ್ಯಾಪಕರಿಗೂ ಇತ್ತು. ಆದರೆ ದುರದೃಷ್ಟವಶಾತ್, ಅಂತಿಮ ಪರೀಕ್ಷೆಯಲ್ಲಿ ಏಕೋ ಏನೋ ಸ್ವಲ್ಪ ಗೊಂದಲ ಮಾಡಿಕೊಂಡು ಒಂದು ಪೇಪರ್ನಲ್ಲಿ ನಿರೀಕ್ಷಿತ ಅಂಕಗಳನ್ನು ಪಡೆಯಲು ವಿಫಲಳಾದಳು. ಆ ವರ್ಷ ಅನಂತರಾಮಯ್ಯನವರೇ ಪರೀಕ್ಷಾ ಮಂಡಳಿ ಅಧ್ಯಕ್ಷರು. ಆ ಹುಡುಗಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಲು ನಾಲ್ಕು ಅಂಕಗಳು ಕಡಿಮೆ ಬಂದವು. ಅಷ್ಟು ಕೃಪಾಂಕ ನೀಡುವ ಅಧಿಕಾರ ಪರೀಕ್ಷಾ ಮಂಡಳಿಯ ಅಧ್ಯಕ್ಷರಿಗಿತ್ತು. ಮಂಡಳಿಯ ಒಬ್ಬ ಸದಸ್ಯರು ಆ ಹುಡುಗಿಗೆ ಕೊರತೆಯಾದ ಆ ನಾಲ್ಕು ಅಂಕಗಳನ್ನು ನೀಡಲು ಸೂಚಿಸಿದರೂ ಸಹ ಅನಂತರಾಮಯ್ಯನವರು ಅದಕ್ಕೆ ಒಪ್ಪಲಿಲ್ಲ. ಫಲಿತಾಂಶ ಪ್ರಕಟವಾದಾಗ ನಿರೀಕ್ಷೆಯಂತೆ ಆಕೆ ಪ್ರಥಮ ದರ್ಜೆಯಲ್ಲಿ ಪಾಸಾಗಿರಲಿಲ್ಲ. ಅದು ಎಲ್ಲ ಪ್ರಾಧ್ಯಾಪಕರಿಗೂ ಅನ್ಯಾಯ ಎನಿಸಿತು. ಆ ಬಗ್ಗೆ ಎಲ್ಲ ಪ್ರಾಧ್ಯಾಪಕರೂ ಅನಂತರಾಮಯ್ಯನವರ ಬಳಿ ಹೋಗಿ ಆ ಹುಡುಗಿಗೆ ನಾಲ್ಕು ಅಂಕ ಕೊಟ್ಟಿದ್ದರೆ ಏನಾಗುತ್ತಿತ್ತು ಎಂದು ಆಕ್ಷೇಪಿಸಿದರು. ಅದಕ್ಕೆ ಅನಂತರಾಮಯ್ಯನವರು ಶಾಂತ ಧ್ವನಿಯಿಂದ ಹೇಳಿದ್ದಿಷ್ಟೆ, "ಪ್ರಥಮ ದರ್ಜೆಯನ್ನು ಗಳಿಸಬೇಕೇ ಹೊರತು, ಕೃಪೆಯಿಂದ ಪಡೆಯತಕ್ಕದ್ದಲ್ಲ."
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

