ಪುರಸ್ಕಾರದ ಹಣ ಹಂಚಿದ ಷಾ
ಜಾರ್ಜ್ ಬರ್ನಾರ್ಡ್ ಷಾ ಪ್ರಖ್ಯಾತ ಐರಿಷ್ ನಾಟಕಕಾರರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು. ಮೊದ ಮೊದಲು ಸಂಗೀತದ ಬಗ್ಗೆ ಅನೇಕ ಲೇಖನಗಳನ್ನು ಬರೆಯುತ್ತಿದ್ದರು ಮತ್ತು ಸಾಹಿತ್ಯ ವಿಮರ್ಶಕರೂ ಆಗಿದ್ದರು. ಕೆಲಕಾಲ ಪತ್ರಿಕೋದ್ಯಮವನ್ನು ಕೈಗೊಂಡು ಯಶಸ್ವಿಯಾದರೂ ಅವರು ಹೆಚ್ಚು ಹೆಸರು ಮಾಡಿದ್ದು ನಾಟಕಕಾರರಾಗಿಯೇ. ಸ್ವಭಾವತಃ ಹಾಸ್ಯ ಪ್ರಿಯರಾಗಿದ್ದ ಷಾ ಒಳ್ಳೆಯ ಮಾತುಗಾರರೂ ಆಗಿದ್ದರು. ಪ್ರಾರಂಭದಲ್ಲಿ ಐದು ಕಾದಂಬರಿಗಳನ್ನು ಬರೆದರೂ ಸಹ ಅವು ಅವರನ್ನು ಯಶಸ್ವಿ ಬರಹಗಾರನನ್ನಾಗಿ ಮಾಡಲಿಲ್ಲ. ಹೀಗಾಗಿ ಅವರ ಆಸಕ್ತಿ ನಾಟಕ ರಚನೆಯ ಕಡೆಗೆ ತಿರುಗಿತು. ಅವರು ಬರೆದ 63 ನಾಟಕಗಳು ಅವರನ್ನು ವಿಶ್ವದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿತು. ಕ್ಯಾಂಡಿಡಾ, ಯು ನೆವರ್ ಕೆನ್ ಟೆಲ್, ದಿ ಫಿಲಾಂಡರರ್ ಮುಂತಾದ ಕೃತಿಗಳು ತುಂಬಾ ಜನಪ್ರಿಯವಾದವು. ಆಸ್ಕರ್ ಮತ್ತು ನೊಬೆಲ್ ಪ್ರಶಸ್ತಿ ಎರಡನ್ನೂ ಪಡೆದ ಏಕೈಕ ಸಾಹಿತಿ ಜಾರ್ಜ್ ಬರ್ನಾರ್ಡ್ ಷಾ ಒಬ್ಬರೇ. 1925 ರಲ್ಲಿ ಸಾಹಿತ್ಯಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿ ಬರ್ನಾರ್ಡ್ ಷಾ ಅವರಿಗೆ ನೀಡುವ ಘೋಷಣೆಯಾಯಿತು. ಇದು ಅವರಿಗೆ ಸಂತೋಷವನ್ನುಂಟು ಮಾಡಿದರೂ ಅದನ್ನು ಸ್ವೀಕರಿಸುವ ಮನಸ್ಸು ಮಾಡಲಿಲ್ಲ. ಆದರೆ ಅವರ ಪತ್ನಿ ಆ ಪ್ರಶಸ್ತಿಯಿಂದಾಗಿ ಐರ್ಲೆಂಡಿನ ದೇಶದ ಹಿರಿಮೆ ಜಾಸ್ತಿಯಾಗುವುದೆಂದೂ, ಆದ್ದರಿಂದ ಅದನ್ನು ಸ್ವೀಕರಿಸಲೇಬೇಕೆಂದು ಪಟ್ಟು ಹಿಡಿದರು. ತನ್ನ ಹಾಗೇ ಅವಕಾಶ ವಂಚಿತ ಅನೇಕ ಲೇಖಕರು ಆರ್ಥಿಕವಾಗಿ ದುಸ್ಥಿತಿಯಲ್ಲಿರುವುದನ್ನು ಗಮನಿಸಿದ್ದರಿಂದ ಅವರ ಸ್ಥಿತಿಯನ್ನು ಕಂಡು ಷಾ ಮರುಗಿದರು. ಏಕೆಂದರೆ ಒಂದು ಕಾಲದಲ್ಲಿ ಅವರೂ ಸಹ ಹಣಕಾಸಿನ ತೊಂದರೆಯಿಂದಾಗಿ ತುಂಬಾ ಕಷ್ಟ ಅನುಭವಿಸಿದ್ದರು. ಆದ್ದರಿಂದ ಅವರು ಪುರಸ್ಕಾರದ ಹಣವನ್ನು ತಮ್ಮ ಸ್ವಂತಕ್ಕೆ ಇಟ್ಟುಕೊಳ್ಳಲು ಇಷ್ಟಪಡದೆ, ಅದನ್ನು ಸ್ವೀಡನ್ನಿನ ಬಡ ಲೇಖಕರಿಗೆ ಹಂಚಬೇಕೆಂದು ಮನವಿ ಮಾಡಿಕೊಂಡರು. ಅವರ ಆಶಯದಂತೆ ಹಣಕಾಸಿನ ಅವಶ್ಯಕತೆಯಿರುವ ಬಡ ಬರಹಗಾರರಿಗೆ ಪುರಸ್ಕಾರದ ಸಂಪೂರ್ಣ ಮೊತ್ತವನ್ನು ವಿತರಿಸಲಾಯಿತು. ಅಲ್ಲದೆ ಒಂದು ಪಾಲನ್ನು ಸ್ವೀಡನ್ನಿನ ನಾಟಕಕಾರ ಆಗಸ್ಟ್ ಸ್ಟ್ರಿಂಗ್ಬರ್ಗ್ನ ನಾಟಕಗಳನ್ನು ಸ್ವೀಡಿಷ್ ಭಾಷೆಯಿಂದ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಲು ವಿನಿಯೋಗಿಸಲಾಯಿತು. ಇಂತಹ ವಿಶಾಲ ಹೃದಯವಿದ್ದುದರಿಂದಲೇ ಷಾ ಅವರನ್ನು ಇಂದಿಗೂ ಜನ ಸ್ಮರಿಸುತ್ತಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

