ಸ್ವಾಮಿನಿಷ್ಠೆಯೆಂದರೆ ಇದು
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ನೆಲೆಯೂರುತ್ತಿದ್ದ ಸಮಯ. ಇಂಗ್ಲೆಂಡಿನ ರಾಜ ಎರಡನೇ ಚಾರ್ಲ್ಸ್ನ ಆಡಳಿತ ಕಾಲದಲ್ಲಿ ವಿದ್ರೋಹಿಗಳ ಕೈ ಮೇಲಾಗಿ ತುಂಬಾ ಸಂಕಷ್ಟಕ್ಕೆ ಗುರಿಯಾಗಿದ್ದ ಕಾಲವದು. ಅದಕ್ಕಾಗಿ ತನ್ನ ಸೈನ್ಯಬಲವನ್ನು ಹೆಚ್ಚಿಸಿಕೊಳ್ಳಲು ವಿದೇಶಗಳಿಂದ ಆರ್ಥಿಕ ನೆರವನ್ನು ಪಡೆಯುವ ಉದ್ದೇಶದಿಂದ ದೊರೆಯು ಲಾರ್ಡ್ ವೆಲ್ಮೆಂಟ್ ಎಂಬ ಸೈನ್ಯಾಧಿಕಾರಿಯನ್ನು ಚಿನ್ನದ ನಾಡಾಗಿದ್ದ ಭಾರತಕ್ಕೆ ನಿರೂಪ ಕೊಟ್ಟು ಕಳುಹಿಸಿದ. ಲಾರ್ಡ್ ವೆಲ್ಮೆಂಟ್ನ ಪ್ರವಾಸ ಸಫಲವಾದರೆ ಭಾರತದಲ್ಲಿ ಅದೇತಾನೆ ನೆಲೆಯೂರುತ್ತಿದ್ದ ಈಸ್ಟ್ ಇಂಡಿಯಾ ಕಂಪನಿಯ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂಬ ಭಾವನೆ ದಟ್ಟವಾಗಿ ಅದನ್ನು ತಡೆಯುವ ಸಂಚೂ ನಡೆದಿತ್ತು. ಇಂತಹ ಸಮಯದಲ್ಲಿ ವೆಲ್ಮೆಂಟ್ ಹಡಗಿನಲ್ಲಿ ಪಯಣಿಸುವಾಗ ಅವನಿಗೆ ಅಕಸ್ಮಾತ್ ಪರಿಚಯವಾದ ಬಾಲಕನೆಂದರೆ ನಿಕೋಲಸ್ ಮ್ಯೆನ್ಯೂಸಿ. ಅವನೊಬ್ಬ ಬಡ ನಿರ್ಗತಿಕನಾಗಿದ್ದು ಕದ್ದು ಹಡಗಿನಲ್ಲಿ ಪಯಣಿಸುತ್ತಿದ್ದ. ಅವನನ್ನು ವೆಲ್ಮೆಂಟ್ ತನ್ನೊಡನೆ ಭಾರತಕ್ಕೆ ಕರೆದೊಯ್ಯಲು ನಿರ್ಧರಿಸಿದ. ಛದ್ಮ ವೇಷ ಧರಿಸಿ, ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳ ಕಣ್ಣಿಗೆ ಬೀಳದೆ ಅಂತೂ ಆಗ್ರಾ ತಲುಪಿದರು. ದುರದೃಷ್ಟ ಅವರ ಬೆನ್ನು ಬಿಡಲಿಲ್ಲ. ವಿದ್ರೋಹಿಗಳ ಸಂಚಿನಿಂದ ದೆಹಲಿ ಬಾದಶಹನ ಭೇಟಿಯಾಗುವುದಕ್ಕೆ ಮುಂಚಿತವಾಗಿಯೇ ವೆಲ್ಮೆಂಟನಿಗೆ ವಿಷವುಣಿಸಿ ಕೊಲ್ಲಲಾಯ್ತು. ಇಂಗ್ಲಿಷ್ ಅಧಿಕಾರಿಗಳು ಮೆನ್ಯೂಸಿಯಲ್ಲಿದ್ದ ಎಲ್ಲ ವಸ್ತುಗಳನ್ನೂ ವಶಪಡಿಸಿಕೊಂಡರು. ಆದರೆ ಸ್ವಾಮಿ ನಿಷ್ಠೆಯ ಮ್ಯೆನ್ಯೂಸಿ ತನ್ನ ಒಡೆಯನ ಉದ್ದೇಶವನ್ನು ಹೇಗಾದರೂ ಮಾಡಿ ಈಡೇರಿಸಬೇಕೆಂದು ನಿರ್ಧರಿಸಿ, ಒಬ್ಬ ಫ್ರೆಂಚ್ ವ್ಯಕ್ತಿಯ ನೆರವಿನಿಂದ ಮುಖ್ಯಮಂತ್ರಿ ವಜೀರ್ ಖಾನ್ರನ್ನು ಭೇಟಿಯಾಗಿ ನಡೆದ ಎಲ್ಲ ವಿಷಯವನ್ನೂ ವಿವರಿಸಿದ. ಅವನ ಚುರುಕುತನ ಮತ್ತು ಆಕರ್ಷಕ ವ್ಯಕ್ತಿತ್ವದಿಂದ ಪ್ರಭಾವಿತರಾದ ವಜೀರ್ ಖಾನ್ ಆ ಹುಡುಗನು ಸತ್ಯಹೇಳುತ್ತಿದ್ದಾನೆಂದು ಖಚಿತ ಪಡಿಸಿಕೊಂಡು ಇಡೀ ಪ್ರಕರಣದ ವಿಚಾರಣೆ ನಡೆಸಿ ಆಗ್ರಾದ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಎಲ್ಲ ವಸ್ತುಗಳನ್ನೂ ಮ್ಯೆನ್ಯೂಸಿಗೆ ವಾಪಸ್ಸು ಕೊಡಿಸಿದರು. ಅದರಲ್ಲಿ ಇಂಗ್ಲೆಂಡ್ ಸಾಮ್ರಾಟ ಮೊಘಲ್ ಬಾದಶಹರಿಗೆ ಬರೆದ ಪತ್ರವೂ ಇತ್ತು. ಬಾದಶಹನ ದರ್ಬಾರಿಗೆ ತೆರಳಿ ಅದನ್ನು ಸಲ್ಲಿಸಿದ. ಇಂಗ್ಲೆಂಡಿನ ರಾಜನ ಇಚ್ಛೆಯನ್ನು ಪೂರೈಸುವ ಭರವಸೆ ನೀಡಿದ ಬಾದಶಹ ಮ್ಯೆನ್ಯೂಸಿಯ ಸ್ವಾಮಿನಿಷ್ಠೆ ಮತ್ತು ಬದ್ಧತೆಯನ್ನು ಬಹುವಾಗಿ ಶ್ಲಾಘಿಸಿ ತನ್ನ ಸೈನ್ಯಕ್ಕೆ ಸೇರಿಸಿಕೊಂಡ. ಮುಂದೆ ಇದೇ ಮ್ಯೆನ್ಯೂಸಿ ತನ್ನ ಶಕ್ತಿ ಸಾಮರ್ಥ್ಯದಿಂದಲೂ, ಸ್ವಾಮಿನಿಷ್ಠೆಯಿಂದಲೂ ಪ್ರವರ್ಧನಮಾನಕ್ಕೆ ಬಂದು ಸೈನ್ಯಾಧಿಕಾರಿಯಾಗಿ ಒಳ್ಳೆಯ ಹೆಸರು ಗಳಿಸಿದ. ನಂತರದ ವರ್ಷಗಳಲ್ಲಿ ತನ್ನ ಭಾರತಯಾತ್ರೆಯ ರೋಚಕ ವೃತ್ತಾಂತವನ್ನು ನಾಲ್ಕು ಅಧ್ಯಾಯಗಳಲ್ಲಿ 'ಮೊಘಲ್ ಇಂಡಿಯಾ' ಎಂಬ ಹೆಸರಿನಲ್ಲಿ ಪ್ರಕಟಿಸಿದ. ಇದೊಂದು ಚಾರಿತ್ರಿಕ ದಾಖಲೆಯಾಗಿ ಉಳಿದಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

