ಅಯ್ಯನ್ ಕಾಳಿಯ ಆಸೆ ಏನಾಗಿತ್ತು
ಇದೇ ಆಗಸ್ಟ್ ತಿಂಗಳ ಇಪ್ಪತ್ತಮೂರು ಒಂದು ಪವಿತ್ರದಿನ. ಏಕೆಂದರೆ ಆ ದಿವಸದಂದು 1863 ರಲ್ಲಿ ಕೇರಳದಲ್ಲಿ ಒಬ್ಬ ಮಹಾನ್ ದಲಿತೋದ್ಧಾರಕನ ಜನನವಾಯಿತು. ಆತನೇ ಅಯ್ಯನ್ ಕಾಳಿ. ಅತಿ ಹಿಂದುಳಿದ ಪುಲಯ ದಲಿತ ಕುಟುಂಬದಲ್ಲಿ ಜನಿಸಿದ ಅಯ್ಯನ್ ಕಾಳಿ ನಿರಕ್ಷರ ಕುಕ್ಷಿ. ಆಗಿನ ಕಾಲದಲ್ಲಿ ಸಾಮಾಜಿಕ ಪರಿಸ್ಥಿತಿ ಈಗಿನಂತಿರಲಿಲ್ಲ. ದಲಿತರಿಗೆ ಶಾಲೆಗಳಲ್ಲಿ ಪ್ರವೇಶವಿರುತ್ತಿರಲಿಲ್ಲ. ಸಾರ್ವಜನಿಕ ರಸ್ತೆಗಳಲ್ಲಿ ನಡೆದಾಡುವಂತಿರಲಿಲ್ಲ, ವಾಹನಗಳಲ್ಲಿ ಸಂಚರಿಸುವಂತಿರಲಿಲ್ಲ. ಅನೇಕರಿಗೆ ಸ್ವಂತ ಭೂಮಿಯಾಗಲೀ, ನೆಲೆಯಾಗಲೀ ಇರಲಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರು ಇವರನ್ನು ಮುಟ್ಟಿ ಪರೀಕ್ಷಿಸುತ್ತಿರಲಿಲ್ಲ. ಮಾತ್ರೆಗಳ ಪೊಟ್ಟಣಗಳನ್ನು ಇವರೆಡೆ ಬಿಸಾಕಲಾಗುತ್ತಿತ್ತು. ಇನ್ನು ದೇವಾಲಯ ಮತ್ತು ಮೇಲ್ವರ್ಗದ ಮನೆಗಳಲ್ಲಿ ಪ್ರವೇಶವಿರುತ್ತಿರಲಿಲ್ಲ. ಮಾಡಿದ ಕೆಲಸಕ್ಕೆ ಕೂಲಿ ಕೇಳುವಂತಿರಲಿಲ್ಲ. ಕೊಡೆ ಉಪಯೋಗಿಸುವಂತಿರಲಿಲ್ಲ. ಕ್ಷೌರದಂಗಡಿಗೆ ಪ್ರವೇಶವಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದನ್ನೆಲ್ಲ ಚಿಕ್ಕಂದಿನಿಂದ ನೋಡುತ್ತಿದ್ದ ಅಯ್ಯನ್ ಕಾಳಿಗೆ ತಮ್ಮ ಸಮುದಾಯದವರಿಗೆ ಏನಾದರೂ ಸೇವೆ ಸಲ್ಲಿಸಬೇಕೆಂದು ನಿರ್ಧರಿಸಿ ಕಾರ್ಯೋನ್ಮುಖರಾದರು. ಅವರು ಮೊದಲು ಮಾಡಿದ್ದೆಂದರೆ ಶ್ರೀಮಂತರು ಓಡಾಡುವಂತಹ ಗಾಡಿಯನ್ನು ಕೊಂಡು, ಶುಭ್ರ ಬಿಳಿವಸ್ತ್ರ ಮತ್ತು ಮುಂಡಾಸನ್ನು ಸುತ್ತಿಕೊಂಡು ದಲಿತರಿಗೆ ನಿಷೇಧವಿದ್ದ ರಸ್ತೆಯಲ್ಲಿ ಪ್ರಯಾಣಿಸಿದರು. ಇದು ಸವರ್ಣೀಯರನ್ನು ಕೆರಳಿಸಿತು. ತಮ್ಮ ಜಾತಿಯವರಿಗಾಗಿ ಶಾಲೆಯೊಂದನ್ನು ತೆರೆದಾಗಲೂ ಅದನ್ನು ಸುಟ್ಟುಹಾಕಲಾಯಿತು. ಅವರು 'ಸಾಧುಜನ ಪರಿಪಾಲನ ಸಂಘ'ವನ್ನು ಸ್ಥಾಪಿಸಿ ದಲಿತರನ್ನು ಸಂಘಟಿಸಿದರು. ತಿರುವಾಂಕೂರಿನ ಶಾಸನಸಭೆಗೆ ಅಯ್ಯನ್ ಕಾಳಿಯನ್ನು ನಾಮಕರಣ ಸದಸ್ಯರನ್ನಾಗಿ ಮಾಡಲಾಯಿತು. ಅಲ್ಲಿ ತಮ್ಮ ಜನಾಂಗದವರಿಗೆ ಆಗುತ್ತಿರುವ ಅನ್ಯಾಯ, ದಲಿತರ ಬವಣೆಯನ್ನು ಮನಮುಟ್ಟುವಂತೆ ವಿವರಿಸಿದರು. ಸರ್ಕಾರ ದಲಿತರ ಪರವಾಗಿ ಕೆಲವು ಆದೇಶಗಳನ್ನು, ಕಾನೂನುಗಳನ್ನು ಮಾಡಿದರೂ ಸವರ್ಣೀಯರ ದಬ್ಬಾಳಿಕೆಯೇನೂ ಕಡಿಮೆಯಾಗಲಿಲ್ಲ. ಆಗ ದಲಿತರು ಸವರ್ಣೀಯರ ಹೊಲಗದ್ದೆಗಳಲ್ಲಿ ಕೆಲಸವನ್ನು ಬಹಿಷ್ಕರಿಸುವುದರ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದರಿಂದ ಸವರ್ಣೀಯರು ಕಂಗಾಲಾದರು. ಅಕ್ಷರಶಃ ನಿರ್ಗತಿಕರಾಗುವ ಮಟ್ಟಕ್ಕೆ ಬಂದ ಅವರು ಸಂಧಾನಕ್ಕೆ ಮುಂದಾದರು. ಇದರ ಪರಿಣಾಮವಾಗಿ ದಲಿತರ ಸಂಚಾರ ಸ್ವಾತಂತ್ರ್ಯ, ಶಿಕ್ಷಣ ಸ್ವಾತಂತ್ರ್ಯಗಳನ್ನು ಅಂಗೀಕರಿಸಲಾಯಿತು. ದುಡಿಮೆಗೆ ಸಮಯವನ್ನೂ ಮತ್ತು ಕೂಲಿಯನ್ನೂ ನಿಗದಿಗೊಳಿಸಲಾಯಿತು. ಕಾಳಿಯ ಪ್ರಯತ್ನದಿಂದಾಗಿ ದಲಿತರು ಗೌರವಯುತ ಜೀವನ ನಡೆಸುವಂತಾಯಿತು. 1937ರಲ್ಲಿ ಅಯ್ಯನ್ ಕಾಳಿಯನ್ನು ಅಭಿನಂದಿಸಲೆಂದೇ ಮಹಾತ್ಮಗಾಂಧಿಯವರು ಕೇರಳಕ್ಕೆ ಬಂದು ಭೇಟಿಮಾಡಿ ಅವರ ಕಾರ್ಯವನ್ನು ಶ್ಲಾಘಿಸಿದರು. ನಿಮ್ಮ ಮುಂದಿನ ಆಕಾಂಕ್ಷೆ ಏನು ಎಂದು ಗಾಂಧೀಜಿ ಕೇಳಿದಾಗ ಆತ ಹೇಳಿದ್ದು ಹೀಗೆ, 'ನನ್ನ ಸಮುದಾಯದ ಹತ್ತು ಮಂದಿಯಾದರೂ ಬಿ.ಎ.ಪದವೀಧರರಾಗಬೇಕು!'. ಕೇರಳದಲ್ಲಿ ಅಯ್ಯನ್ ಕಾಳಿಯನ್ನು ಮಹಾತ್ಮ ಕಾಳಿ ಎಂದೂ, ಪುಲಯರ ರಾಜ ಎಂದೂ ಗೌರವಿಸಲಾಗುತ್ತದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

