ಸಂಪಾದಕೀಯ

ರಂಗನಾಥನ್ ಕಾರ್ಯ ತತ್ಪರತೆ

Published On :

ಡಾ.ಎಸ್.ಆರ್ ರಂಗನಾಥನ್ ಅವರನ್ನು  ಭಾರತದ ಗ್ರಂಥಾಲಯ ಜನಕ ಎಂದು ಕರೆಯುತ್ತಾರೆ. ಅವರ ಜನ್ಮದಿನವಾದ ಆಗಸ್ಟ್ 12ನ್ನು ಪ್ರತಿವರ್ಷ ಎಲ್ಲೆಡೆ ಗ್ರಂಥಾಲಯ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತ ಮತ್ತು ವಿದೇಶದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಅವರು ಗ್ರಂಥಾಲಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಗ್ರಂಥಾಲಯ ತೆರಿಗೆಯನ್ನು ಜಾರಿಗೆ ತರಲು ಮೂಲ ಕಾರಣ ರಂಗನಾಥನ್. ಹೀಗಾಗಿ ಮೂಲೆಮೂಲೆಗಳಲ್ಲಿ ಇಂದು ಗ್ರಂಥಾಲಯಗಳನ್ನು ನೋಡಬಹುದಾಗಿದೆ. ಅಲ್ಲದೆ ಗ್ರಂಥಾಲಯ ವಿಜ್ಞಾನದ ಬಗ್ಗೆ ಕೆಲವು ಕೃತಿಗಳ್ನೂ ರಚಿಸಿದ್ದಾರೆ.
1965-66ರ ಸಮಯ. ಬೆಂಗಳೂರಿನಲ್ಲಿ ಅವರೇ ಸ್ಥಾಪಿಸಿದ ಡಾಕ್ಯುಮೆಂಟೇಷನ್, ರೀಸರ್ಚ್ ಅಂಡ್ ಟ್ರೈನಿಂಗ್‌ನಲ್ಲಿ ಪ್ರಾಧ್ಯಾಪಕರಾಗಿದ್ದ ಕಾಲ. ಒಂದು ದಿನ ಬೆಳಿಗ್ಗೆ ಆರೂವರೆಗೆ ರೇಡಿಯೋದಲ್ಲಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ತಾಷ್ಕೆಂಟ್‌ನಲ್ಲಿ ಮರಣಿಸಿದ ಸುದ್ದಿ ಬಿತ್ತರವಾಯಿತು. ಅದನ್ನು ಕೇಳಿದ ವಿದ್ಯಾರ್ಥಿಗಳಿಗೆ ಈ ಸುದ್ದಿಯಿಂದ ಬೇಸರವಾದರೂ ರಜೆ ಸಿಗುತ್ತದೆಂದು ಒಂದೆಡೆ ಸಂತಸ. ಆ ರಜಾದಿನವನ್ನು ಹೇಗೆ ಕಳೆಯಬೇಕೆಂದು ಆಗಲೇ ಚರ್ಚೆ ಪ್ರಾರಂಭವಾಗಿತ್ತು. ಅಷ್ಟರಲ್ಲಿ ರಂಗನಾಥನ್ ಅವರಿಂದ ಒಂದು ಮೆಮೋ ವಿದ್ಯಾರ್ಥಿಗಳಿಗೆ ತಲುಪಿತು. ಅದರಲ್ಲಿ ಎಲ್ಲರೂ ಕಡ್ಡಾಯವಾಗಿ ಅಂದು ಬೆಳಿಗ್ಗೆ 8.30ಕ್ಕೆ ಸೇರಲು ಆದೇಶವಿತ್ತು. ಬಹುಶಃ ಸಂತಾಪಸೂಚಕ ಸಭೆ ನಡೆಸಲು ಇರಬಹುದೆಂದು ಎಲ್ಲ ವಿದ್ಯಾರ್ಥಿಗಳು ತಮ್ಮ ತರಗತಿಯಲ್ಲಿ ಸೇರಿದರು. ಆಗ ರಂಗನಾಥನ್ ಹೇಳಿದ ಮಾತುಗಳು ಅವರ ವ್ಯಕ್ತಿತ್ವ ಹೇಗಿತ್ತು ಎಂಬುದನ್ನು ಸೂಚಿಸುತ್ತದಲ್ಲದೆ, ಅವರ ಆಲೋಚನಾ ಲಹರಿಯನ್ನು ತಿಳಿಸಿಕೊಡುತ್ತದೆ. ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ- 'ನೋಡಿ, ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾಗಿದ್ದ ಲಾಲ್ ಬಹಾದ್ದೂರರು ತಮ್ಮ ಕಾರ್ಯವನ್ನು ಪೂರೈಸಲಾಗದೆ ಕಾಣದ ಲೋಕಕ್ಕೆ ಹೋಗಿದ್ದಾರೆ. ನನಗೆ ಗೊತ್ತಿಲ್ಲ, ನಾನು ಯಾವಾಗ ಸಾಯುತ್ತೇನೆಂದು. ಆದ್ದರಿಂದ ಇಂದು ಆ ಮಹಾಚೇತನದ ಗೌರವಾರ್ಥ ಎರಡು ಗಂಟೆ ಹೆಚ್ಚು ಕಾಲ ಪಾಠ ತೆಗೆದುಕೊಳ್ಳುತ್ತಿದ್ದೇನೆ' ಅಂದರು. ಇದನ್ನು ಕೇಳಿ ವಿದ್ಯಾರ್ಥಿಗಳು ಸುಸ್ತು. ಈ ಘಟನೆ ಅವರ ಕರ್ತವ್ಯ ಪ್ರಜ್ಞೆಯನ್ನೂ, ಬದ್ಧತೆಯನ್ನೂ ಸೂಚಿಸುತ್ತದೆ. 1972 ರಲ್ಲಿ ಅವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮರಣಶಯ್ಯೆಯಲ್ಲಿದ್ದಾಗಲೂ ತಮ್ಮನ್ನು ನೋಡ ಬಂದ ವಿದ್ಯಾರ್ಥಿಗಳಿಗೆ, ತಮ್ಮ ಭೇಟಿಗೆ ವಿನಿಯೋಗಿಸುವ ಸಮಯವನ್ನು ಅಧ್ಯಯನಕ್ಕೆ ಉಪಯೋಗಿಸಲು ತಿಳಿಸುತ್ತಿದ್ದರು. ಅವರು ಸಮಯಕ್ಕೆ ಬಹಳ ಬೆಲೆ ಕೊಡುತ್ತಿದ್ದರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.