ನಿಷ್ಠೆಗೆ ಕಳಂಕ ಬಂದಾಗ
ಕೃಷ್ಣರಾಜ ಒಡೆಯರು ಮೈಸೂರಿನ ಅರಸರಾಗಿದ್ದಾಗ ರಾಮಕೃಷ್ಣಪ್ಪ ಎಂಬುವವರು ಅರಮನೆಯಲ್ಲಿ ಶಿರಸ್ತೇದಾರರಾಗಿದ್ದರು. ಅವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಮತ್ತು ನಿಸ್ಪೃಹತೆಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಹೀಗಾಗಿ ಮಹಾರಾಜರು ಅವರಿಗೆ ಗೌರವ ನೀಡುತ್ತಿದ್ದರು. ಮನೆಗೆ ಬಂದವರಿಗೆ ಯಥಾಶಕ್ತಿ ಸತ್ಕರಿಸುತ್ತಿದ್ದ ರೀತಿ ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರವಾಗಿತ್ತು. ಮಹಾರಾಜರೇ ದಯಪಾಲಿಸಿದ್ದ ವಿಶೇಷ ಸವಲತ್ತನ್ನು ನಿರಾಕರಿಸಿದ ಸರಳ ಜೀವಿ. ಒಮ್ಮೆ ಅವರ ಬೆಲೆಬಾಳುವ ಮುಂಡಾಸನ್ನು ಕಳ್ಳನಮ್ಮ ಕದ್ದೊಯ್ಯುವಾಗ ಸಿಕ್ಕಿಬಿದ್ದರೂ ಅವನಿಗೆ ಆ ಮುಂಡಾಸನ್ನು ತಾವೇ ತಲೆಗೆ ತೊಡಿಸಿ, 'ಇದು ನಿನ್ನ ತಲೆಗೆ ಸರಿ ಕಾಣುತ್ತದೆ ತೆಗೆದುಕೊಂಡು ಹೋಗು' ಎಂದು ಕಳುಹಿಸಿದ ಕರುಣಾಮಯಿ. ಕರ್ತವ್ಯದಲ್ಲಿ ಎಷ್ಟು ಕಟುನಿಟ್ಟೋ ಅಷ್ಟೇ ತಮ್ಮ ವೈಯಕ್ತಿಕ ಜೀವನದಲ್ಲಿಯೂ ಪಾರದರ್ಶಕತೆ ಕಾಪಾಡಿಕೊಂಡು ಬರುತ್ತಿದ್ದ ಮಹಾನುಭಾವರು. ರಾಜರನ್ನು ಬಿಟ್ಟು ಅನ್ಯರಿಗೆ ತಲೆಬಾಗಿಸದ ಸ್ವಾಭಿಮಾನಿ. ಅನ್ಯಾಯ, ಅಪವ್ಯಯ ಕಂಡರೆ ಖಂಡಿಸುವ ಮನೋಭಾವದವರು. ಇವೆಲ್ಲ ಅವರು ಮಹಾರಾಜರ ಆಪ್ತವಲಯಕ್ಕೆ ಸೇರುವಂತೆ ಮಾಡಿತ್ತು. ಹೀಗಾಗಿ ಅರಮನೆಯ ಕೆಲವು ಅಧಿಕಾರಿಗಳಿಗೆ ಇವರನ್ನು ಕಂಡರೆ ಆಗುತ್ತಿರಲಿಲ್ಲ. ಏನಾದರೂ ಮಾಡಿ ಅವರ ಹೆಸರಿಗೆ ಕಳಂಕ ತರಲು ಕಾತರರಾಗಿದ್ದರು. ಒಮ್ಮೆ ಹಣಕಾಸಿನ ಲೆಕ್ಕಾಚಾರದಲ್ಲಿ ಏನೋ ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದು ಕಂಡು ಬಂತು. ಇರಬೇಕಾದ ಮೊಬಲಿಗಿಂತ ಹಣ ಕಡಿಮೆಯಾಗಿ ಲೆಕ್ಕ ತಾಳೆಯಾಗುತಿರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡು ಕೆಲವರು ಮಹಾರಾಜರ ಬಳಿಹೋಗಿ ರಾಮಕೃಷ್ಣಪ್ಪನವರು ಅರಮನೆಯ ಹಣ ನುಂಗಿದ್ದಾರೆ ಮಹಾಸ್ವಾಮಿ ಎಂದು ದೂರಿದರು. ಆಗ ಮಹಾರಾಜರು ರಾಮಕೃಷ್ಣಪ್ಪನವರನ್ನು ವಿಷಯವೇನೆಂದು ಕೇಳಿದರು. ಕುಹಕಿಗಳ ಮಾತಿಗೆ ನೊಂದ ರಾಮಕೃಷ್ಣಪ್ಪನವರು ಖಜಾನೆಯ ಬೀಗದಕೈಯನ್ನು ಪ್ರಭುಗಳಿಗೆ ಒಪ್ಪಿಸಿ, ತಾವೆಂದೂ ಸ್ವಾಮಿದ್ರೋಹ ಮಾಡುವ ಕೆಲಸ ಮಾಡಿಲ್ಲವೆಂದು ಬಿನ್ನವಿಸಿ ಮನೆಗೆ ತೆರಳಿದರು. ಕೆಲವು ದಿನಗಳ ನಂತರ ಲೆಕ್ಕಾಚಾರದಲ್ಲಿದ್ದ ತಪ್ಪು ಗೋಚರವಾಗಿ ಖಜಾನೆಯ ಹಣದಲ್ಲಿ ಯಾವ ಲೋಪವೂ ಆಗಿಲ್ಲ ಎಂದು ಮನವರಿಕೆಯಾಯಿತು. ಆಗ ಮಹಾರಾಜರು ಹರಿಕಾರನನ್ನು ರಾಮಕೃಷ್ಣಪ್ಪನವರ ಮನೆಗೆ ಕರೆತರಲು ಕಳುಹಿಸಿದರು. ಅದೇತಾನೇ ಪೂಜೆ ಮಾಡುತ್ತಿದ್ದ ರಾಮಕೃಷ್ಣಪ್ಪನವರು ತಮಗೂ ಅರಮನೆಗೂ ಯಾವುದೇ ಸಂಬಂಧ ಇಲ್ಲವಾದುದರಿಂದ ಬರಲಾಗುವುದಿಲ್ಲವೆಂದೂ, ತನ್ನ ಪ್ರಭು ಇಲ್ಲಿಯೇ ಸಾಲಿಗ್ರಾಮದಲ್ಲಿದ್ದಾನೆ, ಮಹಾರಾಜರಿಗೆ ಕೈಮುಗಿದೆನೆಂದು ತಿಳಿಸು ಎಂದು ಹೇಳಿ ಕಳುಹಿಸಿದರು. ಆದರೆ ಮಹಾರಾಜರು ತಮ್ಮ ಪ್ರಯತ್ನ ಬಿಡಲಿಲ್ಲ, ರಾಮಕೃಷ್ಣಪ್ಪನವರ ಮನೆ ಬಾಗಿಲು ಕುಳ್ಳಗಿದೆ, ತಾವು ಬಂದರೆ ಬಾಗಿಲು ಹಣೆಗೆ ಬಡಿಯುತ್ತದೆ, ಎಂದು ಹೇಳಿಕಳುಹಿಸಿದಾಗ ಮಹಾರಾಜರ ಮೇಲೆ ಆಗ್ರಹ ಒಳ್ಳೆಯದಲ್ಲವೆಂದು ಅರಮನೆಗೆ ಬಂದರು. ರಾಜರ ವಿನಂತಿಯ ಮೇಲೆ ಮತ್ತೆ ತಮ್ಮ ಹುದ್ದೆಯನ್ನು ಮುಂದುವರೆಸಿದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

