ಮುಖಸ್ತುತಿ ಒಲ್ಲದ ಬೇಂದ್ರೆ
ದ.ರಾ.ಬೇಂದ್ರೆಯವರು ತಮ್ಮ ಕವನಗಳಿಂದ, ವಾಗ್ಝರಿಯಿಂದ, ಹಾಸ್ಯ, ವಿಡಂಬನೆಗಳಿಂದ ಇಡೀ ನಾಡನ್ನೇ ಮೋಡಿಮಾಡಿ ಅಮರರಾಗಿರುವ ಕವಿವರೇಣ್ಯರು. ಕಣವಿಯವರು ಹೇಳಿದಂತೆ, 'ಬೇಂದ್ರೆ ನಡೆದದ್ದೇ ಸಾಧನಕೇರಿ, ಬರೆದಿದ್ದೇ ಕವಿತೆ' ಅವರು ಸದಾ ಚೈತನ್ಯದ ಚಿಲುಮೆ. ಆದರೆ ಸಮಯ ಬಂದಾಗ ಸರಿಕಾಣದ್ದನ್ನು ಎದುರಿಗೇ ಹೇಳಿತ್ತಿದ್ದುದು ಅವರ ವಿಶಿಷ್ಟ ಗುಣ.
ಒಮ್ಮೆ ಹುಬ್ಬಳ್ಳಿಯ ಕೆ.ಎಂ.ಸಿ.ಕರ್ನಾಟಕ ಸಂಘದಲ್ಲಿ ಒಂದು ಕಾರ್ಯಕ್ರಮ ಆಯೋಜಿಸಲ್ಪಟ್ಟಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿ ದ.ರಾ.ಬೇಂದ್ರೆಯವರು. ವೇದಿಕೆಯ ಮೇಲೆ ಕಾಣಿಸಿಕೊಳ್ಳಬೇಕು ಎಂಬುದಕ್ಕೆ ಪೈಪೋಟಿಯೇ ನಡೆಯುತ್ತಿತ್ತು. ಮರುದಿನ ಬೇಂದ್ರೆಯವರಿದ್ದ ವೇದಿಕೆಯ ಮೇಲೆ ತಮ್ಮ ಭಾವಚಿತ್ರ ಪೇಪರಿನಲ್ಲಿ ಬರಬೇಕೆಂದು ಬಯಸುತ್ತಿದ್ದವರೇ ಹೆಚ್ಚು. ಅದರಲ್ಲಿಯೂ ಸಾಕಷ್ಟು ಹೆಸರು ಗಳಿಸಿದ್ದ ಒಬ್ಬ ವೈದ್ಯರು, ಸಮಾರಂಭಕ್ಕೆ ಧಾರಾಳವಾಗಿ ಹಣಸಹಾಯ ಮಾಡಿ ಅತಿಥಿಗಳ ಪರಿಚಯ ಮಾಡಿಕೊಡುವ ಕಾರ್ಯಭಾರವನ್ನು ತಾವೇ ವಹಿಸಿಕೊಳ್ಳುತ್ತಿದ್ದರು. ಅವರಿಗೆ ಅದೊಂದು ಚಟವೇ ಆಗಿತ್ತು. ಅಂದೂ ಸಹ ವೇದಿಕೆಯ ಮೇಲಿದ್ದ ಬೇಂದ್ರೆಯವರ ಪರಿಚಯ ಮಾಡಿಕೊಡಲು ಅದೇ ವೈದ್ಯರು ವೇದಿಕೆಗೆ ಆಗಮಿಸಿದರು. ಬೇಂದ್ರೆಯವರನ್ನು ಪರಿಚಯಿಸುತ್ತಾ ಅವರ ಮುಖಸ್ತುತಿ ಮಾಡಲು ಪ್ರಾರಂಭಿಸಿದರು. ಮೊದಲೇ ಬೇಂದ್ರೆಯವರಿಗೆ ಮುಖಸ್ತುತಿ ಅಂದರೆ ಆಗದು. ಆತ ಪರಿಚಯ ಮಾಡಿಕೊಡುವ ಭರದಲ್ಲಿ ಹೇಳಿದ, 'ಬೇಂದ್ರೆಯವರು ನೊಬೆಲ್ ವಿಜೇತ ಕವಿ ರವೀಂದ್ರನಾಥ ಟ್ಯಾಗೋರ್ ಅವರಿಗಿಂತ ಒಂದು ಕೈಮ್ಯಾಲೆ'. ಅದು ಬೇಂದ್ರೆಯವರಿಗೆ ಸರಿಕಾಣಲಿಲ್ಲ. ಅವರು ಕಾರ್ಯಕ್ರಮ ಆಯೋಜಿಸಿದ್ದ ಡಾ.ವಸಂತಕುಲಕರ್ಣಿಯವರನ್ನು ಕರೆದು ಕೇಳಿದರು, 'ಇವನ್ಯಾರು? ಎಲ್ಲಿಂದ ಹಿಡಕೊಂಡು ಬಂದಿದೀ?' ಎಂದು. ಕಾರ್ಯಕ್ರಮದ ನಂತರ ಪ್ರಾಚಾರ್ಯರು ಎಲ್ಲ ಸಹೋದ್ಯೋಗಿಗಳೊಂದಿಗೆ ತಮ್ಮ ಚೇಂಬರ್ನಲ್ಲಿ ಚಹಾಕೂಟ ಏರ್ಪಡಿಸಿದ್ದರು. ಅಲ್ಲಿ ಬೇಂದ್ರೆಯವರ ಗುಣಗಾನ ಮಾಡಿದ ಮಹಾನುಭಾವರೂ ಇದ್ದರು. ಅವರನ್ನು ಕರೆದು ಬೇಂದ್ರೆ ಕೇಳಿಯೇ ಬಿಟ್ಟರು. 'ಅಲ್ರಿ ಡಾಕ್ಟರ ಸಾಹೇಬರೇ ನಾನು ರವೀಂದ್ರನಾಥ ಟ್ಯಾಗೋರ್ ಅವರಿಗಿಂತ ಒಂದು ಕೈಮ್ಯಾಲೆ ಅಂದ್ರಿ. ಅನ್ನುದು ಅಂದ್ರಿ, ಇನ್ನೂ ಮೂರು ನಾಲ್ಕು ಕೈಮ್ಯಾಲೆ ಯಾಕೆ ಅನ್ನಬಾರದಿತ್ತು?'. ಅದನ್ನು ಕೇಳಿ ಪರಿಚಯ ಮಾಡಿದವರ ಮೋರೆ ಇಂಗುತಿಂದ ಮಂಗನಂತಾಗಿತ್ತು. ಅಲ್ಲಿದ್ದವರು ನಕ್ಕಿದ್ದೇ ನಕ್ಕಿದ್ದು. ಹೀಗೆ ಮಾತಿನ ಮೂಲಕವೇ ಚಾಟಿ ಬೀಸುತ್ತಿದ್ದ ಬೇಂದ್ರೆಯವರ ಈ ಘಟನೆಯನ್ನು ಇತ್ತೀಚೆಗೆ ಬಿಡುಗಡೆಯಾದ ಡಾ. ವಸಂತ ಕುಲಕರ್ಣಿಯವರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

