ಆತ್ಮ ನಿಗ್ರಹ ಸಾಧಿಸಿದ ಸ್ಥೂಲಭದ್ರ
ಸ್ಥೂಲಭದ್ರ ಒಂಬತ್ತನೇ ನಂದನ ಕಾಲದಲ್ಲಿದ್ದ ಒಬ್ಬ ಜೈನ ಸನ್ಯಾಸಿ. ಆತನನ್ನು ಜೈನರಲ್ಲಿ ಶ್ವೇತಾಂಬರ ಸಂಪ್ರದಾಯದ ರೂವಾರಿ ಎಂದು ಪರಿಗಣಿಸಲಾಗುತ್ತದೆ. ಕಾಮವನ್ನು ಜಯಿಸಿ ಸಂಪೂರ್ಣ ಆತ್ಮನಿಗ್ರಹ ಸಾಧಿಸಿದ ಒಬ್ಬ ಅಲೌಕಿಕ ಸಂತನಾಗಿ ಇತಿಹಾಸದಲ್ಲಿ ಹೆಸರು ಗಳಿಸಿದ್ದಾನೆ. ಆತನ ತಂದೆ ಶಕದಲ ನಂದರ ಪ್ರಧಾನಮಂತ್ರಿಯಾಗಿದ್ದವರು. ಸ್ಥೂಲಭದ್ರ ತನ್ನ ಹದಿಹರೆಯದಲ್ಲಿ ಅಂದಿನ ಕಾಲದ ಸುಪ್ರಸಿದ್ಧ ನರ್ತಕಿ ಕೋಶಾಳ ವ್ಯಾಮೋಹಕ್ಕೆ ಒಳಪಟ್ಟು ಅವಳನ್ನು ಬಿಟ್ಟಿರಲಾರದೆ ಹನ್ನೆರಡು ವರ್ಷ ಅವಳ ಮಹಲಿನಲ್ಲಿಯೇ ವಾಸವಾಗಿದ್ದ. ಹೊರಗಿನ ಯಾವ ವಿಚಾರವೂ ಅವನಿಗೆ ತಿಳಿಯದಾಗಿತ್ತು. ಅವನ ತಂದೆ ಮರಣಿಸಿದ್ದರಿಂದ ನಂದನು ಸ್ಥೂಲ ಭದ್ರನಿಗೆ ಪ್ರಧಾನಿ ಪಟ್ಟವನ್ನು ನೀಡಲು ಹೇಳಿ ಕಳುಹಿಸಿದಾಗ ಮನಸ್ಸಿಲ್ಲದ ಮನಸ್ಸಿನಿಂದ ರಾಜನ ಬಳಿಹೋಗಿ ಅದನ್ನು ನಯವಾಗಿ ತಿರಸ್ಕರಿಸಿದ. ರಾಜ್ಯದ ಅಧಿಕಾರಿ ಅವನೆಷ್ಟೇ ಉನ್ನತ ಹುದ್ದೆಯಲ್ಲಿರಲಿ, ರಾಜನ ಅಧೀನದಲ್ಲಿ ಕೆಲಸಮಾಡುವುದು ಅವನಿಗಿಷ್ಟವಿಲ್ಲದ ಕೆಲಸವಾಗಿತ್ತು. ಹೀಗಾಗಿ ಎಲ್ಲವನ್ನೂ ತ್ಯಾಗ ಮಾಡಿ ಜೈನ ಸನ್ಯಾಸಿಯೂ ಆದ.
ಇದರಿಂದ ಕೋಶಾಳ ವ್ಯಾಮೋಹದಿಂದ ಕಳಚಿಕೊಂಡು ವೈರಾಗ್ಯ ಹೊಂದಿದ. ಅವನಲ್ಲಿ ಲೌಕಿಕ ಆಸೆಗಳೆಲ್ಲವೂ ಸತ್ತು ಹೋಗಿದ್ದವು. ಆದರೂ ತನ್ನ ಆತ್ಮ ನಿಗ್ರಹವನ್ನು ಪರೀಕ್ಷೆಗೆ ಒಳಪಡಿಸಿಕೊಳ್ಳುವ ತವಕ. ಹೀಗಾಗಿ ಒಂದು ಮಳೆಗಾಲದಲ್ಲಿ ಚಾತುರ್ಮಾಸಕ್ಕಾಗಿ ಅವರು ಆಯ್ಕೆ ಮಾಡಿಕೊಂಡ ಸ್ಥಳ ಕೋಶಾಳ ಮಹಲು. ಸನ್ಯಾಸಿಯಾದರೂ ಮೋಹ ಬಿಡದೇ ಸ್ಥೂಲಭದ್ರರು ಮತ್ತೆ ತನ್ನ ಮನೆಗೇ ಬಂದಿದ್ದಾರೆ ಎಂದು ತಿಳಿದು ಅವಳಿಗೆ ಸಂತೋಷವಾಯಿತು. ತನ್ನ ಎಂದಿನ ಹಾವಭಾವಗಳಿಂದ ಅವನನ್ನು ಆಕರ್ಷಿಸಲು ತುಂಬಾ ಪ್ರಯತ್ನಿಸಿದಳು.
ಅಪ್ರತಿಮ ಸೌಂದರ್ಯ, ಬೆಡಗು, ಬಿನ್ನಾಣವೆಲ್ಲವನ್ನೂ ಪ್ರದರ್ಶಿಸಿದರೂ ಸ್ಥೂಲಭದ್ರ ಅದ್ಯಾವುದಕ್ಕೂ ಮನಸೋಲಲಿಲ್ಲ. ತನ್ನ ಆತ್ಮ ನಿಗ್ರಹವನ್ನು ಪರೀಕ್ಷಿಸಿಕೊಳ್ಳಲೆಂದೇ ಆ ನರ್ತಕಿಯ ಮನೆಗೆ ಬಂದಿದ್ದರಿಂದ ಆ ಪರೀಕ್ಷೆಯಲ್ಲಿ ಜಯಪಡೆದ. ಈ ಪ್ರಕ್ರಿಯೆಯಲ್ಲಿ ಕೋಶಾ ಸೋತುಹೋದಳು. ಇದರಿಂದ ಅವಳಿಗೆ ತನ್ನ ಸೌಂದರ್ಯದ ಬಗ್ಗೆ ಇದ್ದ ಅಹಂಕಾರ ತೊಲಗಿ ಅವಳೂ ಸಹ ಜೈನ ದೀಕ್ಷೆಯನ್ನು ಪಡೆದು ಸನ್ಯಾಸಿನಿಯಾದಳು. ಹೀಗೆ ಜೈನ ಸಮುದಾಯದ ಯುಗಪ್ರವರ್ತಕರಾಗಿ, ಶ್ರುತ ಕೇವಲಿನ್ ಆಗಿ, ಕ್ರಿ.ಪೂ.252ರಲ್ಲಿ ಮರಣಿಸಿದಾಗ ಸ್ಥೂಲಭದ್ರರಿಗೆ 99ವರ್ಷ ವಯಸ್ಸಾಗಿತ್ತು. ದಿಗಂಬರ ಪಂಥಕ್ಕೆ ಭದ್ರಬಾಹು ಮುಖ್ಯಸ್ಥರಾದಂತೆ ಶ್ವೇತಾಂಬರ ಪಂಥಕ್ಕೆ ಆಚಾರ್ಯ ಸ್ಥೂಲಭದ್ರರು ಮುಖ್ಯಸ್ಥ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

