ಸಂಪಾದಕೀಯ

ನಿನ್ನ ಕೃತಿಯನ್ನು ನರ್ಮದೆಯಲ್ಲಿ ಎಸೆದು ಬಾ!

Published On :

ಮಹಾರಾಷ್ಟ್ರದ ಒಂದು ಕುಗ್ರಾಮದಲ್ಲಿ ಜನಿಸಿ, ಎಂಟನೇ ವಯಸ್ಸಿಗೆ ಹೋಳ್ಕರ್ ರಾಜವಂಶದ ಮಲ್ಹಾರ್‌ರಾವ್ ಕೈ ಹಿಡಿದು ತನ್ನ ನಲವತ್ತೊಂದನೇ ವಯಸ್ಸಿಗೇ ವಿಧವೆಯಾದ 'ಅಹಲ್ಯಾಬಾಯಿ ಹೋಳ್ಕರ್‌' ಭಾರತದ ಇತಿಹಾಸದಲ್ಲಿ ಪ್ರಸಿದ್ಧಳಾಗಿದ್ದಾಳೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮರ ಸಾಲಿನಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲಬಲ್ಲ ಸಮರ್ಥ ರಾಣಿಯಾಗಿ, ತನ್ನ ನಿಸ್ವಾರ್ಥ ಸೇವೆ, ಶಾಂತಿಯುತ ಆಡಳಿತ ಮತ್ತು ಪ್ರಜಾಪ್ರೀತಿಗೆ ಹೆಸರಾದವಳು. ವಿಶಾಲ ಸಾಮ್ರಾಜ್ಯದ ಒಡತಿಯಾದರೂ ಸರಳ ಜೀವನ ನಡೆಸಿ, ಅನೇಕ ಧರ್ಮಶಾಲೆಗಳನ್ನೂ, ಪ್ರಸಿದ್ಧ ದೇವಾಲಯಗಳನ್ನೂ ನಿರ್ಮಿಸಿ ಸಾರ್ಥಕ ಜೀವನ ನಡೆಸಿದ ಪುಣ್ಯಜೀವಿ. ಅಹಲ್ಯಾಬಾಯಿ ಕುರಿತಾದ ಅನೇಕ ಲಾವಣಿಗಳು ಮತ್ತು ಜಾನಪದ ಗೀತೆಗಳನ್ನು ಜನ ಇಂದಿಗೂ ಹಾಡಿಕೊಳ್ಳುತ್ತಿರುತ್ತಾರೆ.
ಒಮ್ಮೆ ಪಂಡಿತ್ ಕುಶಾಲಿ ರಾಮ್ ಎಂಬ ಸಂಸ್ಕೃತ ವಿದ್ವಾಂಸ ಅಹಲ್ಯಾಬಾಯಿಯ ಧರ್ಮ ಕಾರ್ಯಗಳು ಮತ್ತು ಅವಳ ಸದ್ಗುಣಗಳನ್ನು ಅಪಾರವಾಗಿ ಗೌರವಿಸಿ 'ಅಹಲ್ಯಾಬಾಯಿ ಕಾಮಧೇನು' ಎಂಬ ಹತ್ತು ಸಾವಿರ ಪದ್ಯಗಳನ್ನೊಳಗೊಂಡ ಒಂದು ಸಂಸ್ಕೃತ ಕೃತಿಯನ್ನು ರಚಿಸಿದ್ದ. ಅದರಲ್ಲಿ ರಾಣಿಯ ಜೀವನ - ಸಾಧನೆ ಕುರಿತಾದ ಅನೇಕ ವಿಷಯಗಳ ವಿವರಣೆ ಇತ್ತು. ಅದನ್ನು ರಾಣಿಯ ಸಮ್ಮುಖದಲ್ಲಿ ಹಾಡಬೇಕೆಂಬ ಅಭಿಲಾಷೆಯಿಂದ ಮಾಹೇಶ್ವರಿಗೆ ಬಂದು ಅನುಮತಿಯನ್ನೂ ಪಡೆದಿದ್ದ. ಸರಿ, ಪಂಡಿತ ಪದ್ಯಗಳನ್ನು ಓದುತ್ತಾ ಹೋದಂತೆ ರಾಣಿಗೆ ಅರ್ಥವಾಯಿತು. ಇವೆಲ್ಲಾ ಅವಳನ್ನು ಹೊಗಳಿಯೇ ಬರೆದಿರುವುದೆಂದು. ಅವನನ್ನು ಅರ್ಧದಲ್ಲಿಯೇ ತಡೆದು, 'ನನ್ನ ಹೊಗಳಿಕೆಯ ವಿನಃ ಇನ್ನೇನಿದೆ ಈ ಕೃತಿಯಲ್ಲಿ?' ಎಂದು ರಾಣಿ ಕೇಳಿದಳು.
ಅದಕ್ಕೆ ಪಂಡಿತನು ಈ ಕೃತಿಯಲ್ಲಿ ರಾಣಿಯ ಹೊಗಳಿಕೆ ಮತ್ತು ಮೆಚ್ಚುಗೆ ಹೊರತಾಗಿ ಏನೂ ಇಲ್ಲವೆಂದು ಉತ್ತರಿಸಿದ. ಅವಳಿಗೆ ಹೊಗಳಿಕೆ ಇಷ್ಟವಿಲ್ಲದ್ದರಿಂದ ಹೊರಹೋಗಲು ತಿಳಿಸಬಹುದಿತ್ತು ಆದರೆ ಹಾಗೆ ಮಾಡದೆ, ಬೇಸರದಿಂದ 'ಇದೇ ರೀತಿ ದೇವರ ದಯಾಳುತನವನ್ನು, ಪ್ರೀತಿಯನ್ನು ಶ್ಲಾಘಿಸಿ ಕೃತಿಯನ್ನು ರಚಿಸಿದ್ದಿದ್ದರೆ, ನಿನ್ನ ಜೀವನಕ್ಕೊಂದು ಉದ್ದೇಶವಿರುತ್ತಿತ್ತು, ನಿನ್ನ ಪಾಂಡಿತ್ಯಕ್ಕೆ ಮೆರಗು ಬರುತ್ತಿತ್ತು. ಸಾಮಾನ್ಯಳಾದ ನನ್ನನ್ನು ಹೀಗೆ ಹೊಗಳಿ ಬರೆದು ನಿನ್ನ ಶ್ರಮವನ್ನು ಹಾಳು ಮಾಡಿಕೊಂಡೆ. ನೀನಿನ್ನು ಹೊರಡಬಹುದು' ಎಂದು ಹೇಳಿದಳು. ಪಂಡಿತನು ಹೊರನಡೆದ ಮೇಲೆ ಅವನ ಆ ಗ್ರಂಥವನ್ನು ನರ್ಮದಾ ನದಿಯಲ್ಲಿ ಬಿಸುಟಲು ಆಜ್ಞೆ ಮಾಡಿದಳು.
ಇದೇ ರೀತಿ ಇನ್ನೊಮ್ಮೆ ಅನಂತ ಫಾಂಡಿ ಎಂಬ ಕವಿ ಅಹಲ್ಯಾಬಾಯಿಯ  ಕುರಿತಾದ ಲಾವಣಿಗಳನ್ನು ರಚಿಸಿ ಸುಮಧುರವಾಗಿ ಹಾಡಿದಾಗ ಒಬ್ಬ ವ್ಯಕ್ತಿಯನ್ನು ಹೊಗಳಿ ಬರೆಯುವುದಕ್ಕಿಂತ ಇಡೀ ಭೂಮಂಡಲವನ್ನು ನಿಯಂತ್ರಣದಲ್ಲಿಟ್ಟುಕೊಂಡು ಕಾಪಾಡುತ್ತಾ ಬರುತ್ತಿರುವ ಭಗವಂತನನ್ನು ಕುರಿತು ಹಾಡು ರಚಿಸಲು ಸಲಹೆ ನೀಡಿದಳು. ಅಂದಿನಿಂದ ಅವನು ಭಕ್ತಿಗೀತೆಗಳನ್ನು ರಚಿಸಿ ಹಾಡಲು ತೊಡಗಿದ.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.