ಕಾವಲುಗಾರ ಕೋಟ್ಯಧಿಪತಿಯಾದದ್ದು
ಇದೇನು ಟಿ.ವಿಯಲ್ಲಿ ಬರುವ ಕೋಟ್ಯಧೀಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋಟ್ಯಧಿಪತಿಯಾದ ವಿಷಯವಲ್ಲ. ತನ್ನ ಸ್ವಸಾಮರ್ಥ್ಯದಿಂದ ದುಡಿದು ಒಂದು ಕೋಟಿಯಲ್ಲ...ಬರೋಬ್ಬರಿ 100 ಕೋಟಿ ರೂಪಾಯಿ ಹೂಡಿಕೆಗೆ ಮುಂದಾಗಿರುವ ಯಶಸ್ವಿ ಉದ್ಯಮಿಯೊಬ್ಬನ ಯಶೋಗಾಥೆ. ಹಗಲು ಶಾಲೆ, ರಾತ್ರಿ ಕಾವಲುಗಾರನ ಕೆಲಸ. ಮನೆಯಲ್ಲಿ ಕಿತ್ತುತಿನ್ನುವ ಬಡತನ. ಓದಲೇಬೇಕೆಂಬ ಅದಮ್ಯ ಆಸೆ. ತನ್ನ ತಾಯಿಯ ತವರೂರಿನಲ್ಲಿ 9ನೇ ತರಗತಿಯವರೆಗೆ ಓದಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹುಬ್ಬಳ್ಳಿಗೆ ಬಂದ ಕಾಡಪ್ಪ ಎಸ್.ಎಸ್.ಎಲ್.ಸಿ ಓದಿ ಉತ್ತೀರ್ಣರಾದರು.
ಓದುತ್ತಿರುವಾಗಲೇ ಹುಬ್ಬಳ್ಳಿಯ ಗಿರಣಿಯೊಂದರಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಿದ್ದರು. ಹೀಗೆ ಓದಿದ ಬಾಲಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.71 ರಷ್ಟು ಅಂಕಗಳಿಸಿ ಪಾಸಾದರು. ನಂತರ ಪಿ.ಸಿ.ಜಾಬಿನ ವಿಜ್ಞಾನ ಕಾಲೇಜಿನಲ್ಲಿ ಪಿ.ಯು.ಸಿ. ಪಾಸುಮಾಡಿಕೊಂಡು ತುಮಕೂರಿನ ಸಿದ್ಧಗಂಗಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದರು. ತಮ್ಮ ಖರ್ಚಿಗಾಗಿ ಆಗ ಒಂದು ಖಾಸಗಿ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಸಹ ಸೇವೆ ಸಲ್ಲಿಸಿದರು. ಶಿಕ್ಷಣ ಮುಗಿಸಿಕೊಂಡು ಬೆಂಗಳೂರಿನ ಎಲ್ಟೆಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಆಗ ಅವರಿಗೆ ಬರುತಿದ್ದ ಸಂಬಳ ಕೇವಲ 2000 ರುಪಾಯಿ ಮಾತ್ರ. ಅಲ್ಲಿ ಪ್ರಯೋಗಾಲಯ ಉಪಕರಣಗಳ ತಯಾರಿಕೆಯಲ್ಲಿ ನಾಲ್ಕುವರೆ ವರ್ಷ ಅನುಭವ ಗಳಿಸಿದ ಮೇಲೆ ತಾವೇ ಏಕೆ ಒಂದು ಉದ್ಯಮ ಸ್ಥಾಪಿಸಬಾರದು ಎಂಬ ಆಲೋಚನೆ ಬಂತು. ತಮಗೆ ಬಂದ ಮೂವತ್ತು ಸಾವಿರ ರುಪಾಯಿ ಭವಿಷ್ಯ ನಿಧಿಯ ಹಣದೊಂದಿಗೆ ಪ್ರಧಾನಮಂತ್ರಿ ರೋಜ್ಗಾರ್ ಯೋಜನೆಯ ಅಡಿಯಲ್ಲಿ ಅರವತ್ತೈದು ಸಾವಿರ ರುಪಾಯಿಗಳ ನೆರವೂ ಪಡೆದು 1999ರಲ್ಲಿ ಶಾಂತಲಾ ಗ್ರೂಪ್ ಪ್ರಾರಂಭಿಸಿದರು. ದೊಡ್ಡ ದೊಡ್ಡ ಕಂಪನಿಗಳಲ್ಲಿ ಗುಣಮಟ್ಟ ಪರೀಕ್ಷೆ ಮಾಡುವ ಸೇವೆಯಲ್ಲಿ ಬಿ.ಎಚ್.ಇ.ಎಲ್, ಎನ್.ಟಿ.ಪಿ.ಸಿ, ಅಂಬುಜಾ ಸಿಮೆಂಟ್‌ನಂತಹ ಅನೇಕ ಸಂಸ್ಥೆಗಳು ಗ್ರಾಹಕರಾದವು. ಇವರ ವೈದ್ಯೆ ಪತ್ನಿ ರೈಲ್ವೆ ಇಲಾಖೆಯಲ್ಲಿದ್ದವರು, ಕೆಲಸಕ್ಕೆ ರಾಜೀನಾಮೆ ನೀಡಿ ಪತಿಯ ಕಾರ್ಯದಲ್ಲಿ ಪಾಲ್ಗೊಂಡರು. ಇಂದು ಶಾಂತಲಾ ಸಮೂಹ ಸಂಸ್ಥೆ ಸ್ವಂತ ಕಟ್ಟಡ ಹೊಂದಿದ್ದು ಇನ್ನೂರು ಮಂದಿ ಇಂಜಿನಿಯರ್ ಸಹಿತ 360 ಜನ ಕೆಲಸಗಾರರನ್ನು ಹೊಂದಿದೆ. ಕಳೆದ ಎರಡು ವರ್ಷಗಳಿಂದ ಪ್ರತಿವರ್ಷ ಹದಿನೈದು ಕೋಟಿಗಳಷ್ಟು ಲಾಭ ಗಳಿಸುತ್ತಿರುವ ಈ ಸಂಸ್ಥೆಯ ಹಿಂದಿನ ಶಕ್ತಿ ಕಾಡಪ್ಪ. ಬೋವಿ ಕಾಲೋನಿಯ ನಿವಾಸಿ. ದಲಿತರಾದ ಈ ವ್ಯಕ್ತಿ ಈಗ ಕುಂದುಗೋಳ ತಾಲ್ಲಕಿನ ತಮ್ಮ ಸ್ವಗ್ರಾಮ ಬೆಳ್ಳಿಗಟ್ಟಿಯಲ್ಲಿ ನಲವತ್ತು ಎಕರೆ ಜಮೀನು ಕೊಂಡು ಅಲ್ಲಿ ಒಂದುನೂರು ಕೋಟಿ ಬಂಡವಾಳ ತೊಡಗಿಸಿ ಸಂಶೋಧನೆಗೆ ಅಗತ್ಯವಾದ ಪ್ರಯೋಗಾಲಯ ಉಪಕರಣಗಳ ತಯಾರಿಕಾ ಘಟಕ ಮತ್ತು ಜೈವಿಕ ತ್ಯಾಜ್ಯವಸ್ತುಗಳಿಂದ ವಿದ್ಯುತ್ ತಯಾರಿಸುವ ಆರು ಮೆಗಾವ್ಯಾಟ್ ಸಾಮರ್ಥ್ಯದ ಘಟಕ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ವಿಜಾಪುರದ ಸಿದ್ದೇಶ್ವರ ಸ್ವಾಮೀಜಿಯವರು ಇತ್ತೀಚೆಗೆ ಈ ಉದ್ಯಮ ಸಂಕೀರ್ಣಕ್ಕೆ ಶಂಕುಸ್ಥಾಪನೆ ನಡೆಸಿದ್ದಾರೆ. ಹೀಗೆ ತಮ್ಮ ಸ್ವಸಾಮರ್ಥ್ಯದಿಂದ ಮೇಲೆ ಬಂದ ಈ ದಲಿತ ವ್ಯಕ್ತಿ ನಿರುದ್ಯೋಗಿ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

