ಗುರುದೇವರ ಉಪಕಾರ ಸ್ಮರಣೆ ಮಾಡುವ ಸಾಧನವಿದು
ಸ್ವಾಮಿ ದಯಾನಂದ ಸರಸ್ವತಿಯವರು ಮೂಲತಃ ಸೌರಾಷ್ಟ್ರದವರು. ಅವರ ಮೂಲ ಹೆಸರು ಮೂಲಾಶಂಕರ ಎಂದು. ಚಿಕ್ಕಂದಿನಿಂದಲೂ ಆಧ್ಯಾತ್ಮದ ಬಗ್ಗೆ ಒಲವಿಟ್ಟುಕೊಂಡು ಯೋಗ್ಯ ಗುರುವಿಗಾಗಿ ಮನೆಬಿಟ್ಟು ಹೊರಬಂದರು. ಆರ್ಯಸಮಾಜದ ಸಂಸ್ಥಾಪಕರಾದ ದಯಾನಂದರು ಸ್ವರಾಜ್ಯದ ಕಲ್ಪನೆಯನ್ನು 1876ರಲ್ಲಿ ಮೊದಲ ಬಾರಿಗೆ ಪರಿಚಯಿಸಿದವರು. ಡಾ.ರಾಧಾಕೃಷ್ಣನ್ ಸರಸ್ವತಿಯವರನ್ನು ಆಧುನಿಕ ಭಾರತದ ಜನಕ ಎಂದು ಕರೆದಿದ್ದಾರೆ. ಅವರು ವಿಗ್ರಹ ಪೂಜೆಯನ್ನು ಪ್ರೋತ್ಸಾಹಿಸಲಿಲ್ಲ. ಇವರಿಂದ ಪ್ರಭಾವಿತರಾದ ಮಹನೀಯರ ಒಂದು ದೊಡ್ಡ ಪಟ್ಟಿಯೇ ಇದೆ. ಅದರಲ್ಲಿ ಲಾಲಾ ಲಜಪತರಾಯ್, ಭಗತ್ ಸಿಂಗ್, ಮದನ್ ಲಾಲ್ ಡಿಂಗ್ರಾ, ಸಾವರ್ಕರ್, ರಾನಡೆ, ರಾಂ ಪ್ರಸಾದ್ ಬಿಸ್ಮಿಲ್ಲ ಸೇರಿದ್ದಾರೆ. ಸುಮಾರು 60 ಗ್ರಂಥಗಳನ್ನು ರಚಿಸಿದ ದಯಾನಂದ ಸರಸ್ವತಿಯವರು ಬ್ರಹ್ಮಚಾರಿಗಳು.
ದಯಾನಂದ ಸರಸ್ವತಿಯವರು ಗುರುವನ್ನರಸುತ್ತಾ ಸಂಚರಿಸುತ್ತಿದ್ದಾಗ ಓಖೀ ಮಠದಲ್ಲಿ ಒಮ್ಮೆ ತಂಗಿದ್ದರು. ಅಲ್ಲಿನ ಮಹಂತನು ತನ್ನ ಶ್ರೀಮಂತ ಮಠಕ್ಕೆ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಬಯಸಿದನು. ಆದರೆ ವಿದ್ಯೆಯನ್ನರಸುತ್ತಿದ್ದ ದಯಾನಂದರಿಗೆ ಸಂಪತ್ತು, ವೈಭೋಗ ಬೇಕಾಗಿರಲಿಲ್ಲ. ಹೀಗೆ ಬರುವಾಗ ಮಥುರಾ ನಗರಿಯ ವಿಶ್ರಾಂತ ಘಾಟಿಗೆ ಹೋಗುವ ಮಾರ್ಗದಲ್ಲಿದ್ದ ವಿರಾಜಾನಂದರೆಂಬ ಮಹಾಜ್ಞಾನಿಗಳ ಬಳಿ ಹೋಗಿ ಕದ ತಟ್ಟಿದರು. ಜ್ಞಾನಭಿಕ್ಷೆಯನ್ನು ನೀಡಬೇಕೆಂದು ಪ್ರಾರ್ಥಿಸಿದರು. ಗುರುವಿನ ಆಜ್ಞೆಯಂತೆ ತನ್ನಲ್ಲಿದ್ದ ಕೌಮುದಿ, ವ್ಯಾಕರಣದ ಗ್ರಂಥಗಳನ್ನು ಯಮುನಾ ನದಿಗೆ ಎಸೆದು ಗುರುವಿನ ಮುಂದೆ ನಿಂತರು. ವಿರಾಜಾನಂದರು ಎಲುಬಿನ ಗೂಡಾಗಿದ್ದರೂ ಅಪೂರ್ವ ತೇಜಸ್ಸಿನಿಂದ ಕೂಡಿದ್ದರು. ಅವರಿಗೆ ಎರಡೂ ಕಣ್ಣುಗಳಿರಲಿಲ್ಲ. ಆದರೆ ಸಮಸ್ತ ಶಾಸ್ತ್ರಗಳನ್ನು ಪ್ರಮಾಣ ಸಹಿತ ಕಲಿಸುವ ಅದ್ಭುತ ಚೈತನ್ಯ ಅವರಿಗಿತ್ತು. ಅವರ ದಿವ್ಯ ಪ್ರಭೆಗೆ ಮನಸೋತು ಅವರಿಂದ ಕಠಿಣ ಪರಿಶ್ರಮದಿಂದ ಅನೇಕ ವರ್ಷಗಳ ಕಾಲ ಕಲಿತು ಪರಿಪೂರ್ಣ ಜ್ಞಾನಿಯಾದರು. ಒಮ್ಮೆ ವಿರಾಜಾನಂದರು ಶಿಕ್ಷಣ ನೀಡುವ ವೇಳೆ ದಯಾನಂದರ ಮೇಲೆ ಕೋಪಮಾಡಿಕೊಂಡು ಕೋಲಿನಿಂದ ಚೆನ್ನಾಗಿ ಥಳಿಸಿದರು. ಆದರೂ ಪ್ರತಿರೋಧ ವ್ಯಕ್ತ ಪಡಿಸದೆ, ಕುಂಬಾರನು ಮಣ್ಣಿನ ಮುದ್ದೆಯನ್ನು ಕುಟ್ಟಿ, ತಟ್ಟಿ, ಅದಕ್ಕೊಂದು ರೂಪಕೊಡುವಂತೆ ಶಿಷ್ಯರ ವ್ಯಕ್ತಿತ್ವ ರೂಪಿಸುತ್ತಾರೆ, ಅದಕ್ಕಾಗಿ ಪರಿತಾಪವೇಕೆ ಎಂದು ಸುಮ್ಮನಿದ್ದುಬಿಟ್ಟರು. ಅವರು ಮಹರ್ಷಿ ಪದವಿಗೇರಿದಾಗಲೂ, ತಮ್ಮ ಶಿಷ್ಯರಿಗೆ ತಮ್ಮ ಗುರುಗಳ ದಂಡಪ್ರಯೋಗದಿಂದುಂಟಾದ ಕಲೆಯನ್ನು ತೋರಿಸುತ್ತಾ, ಇದು ಸದಾ ನನಗೆ ಗುರುದೇವರ ಸ್ಮರಣೆ ಮಾಡಲು ಸಾಧನವಾಗಿದೆ ಎಂದು ಹೇಳುತ್ತಿದ್ದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

