ಸಾಹಿತ್ಯ ಪರಿಚಾರಕರೆಂದರೆ ಹೀಗಿರಬೇಕು
ದಕ್ಷಿಣ ಕನ್ನಡ ಜಿಲ್ಲೆ ಹಲವು ವ್ಯಶಿಷ್ಟ್ಯಗಳಿಗೆ, ವಿಶಿಷ್ಟ ವ್ಯಕ್ತಿಗಳಿಗೆ ಹೆಸರಾದ ಜಿಲ್ಲೆ. ಸಾಹಿತ್ಯ, ಕಲೆ, ಬ್ಯಾಂಕಿಂಗ್, ವ್ಯಾಪಾರ-ವಹಿವಾಟು, ರಾಜಕೀಯ, ಧಾರ್ಮಿಕ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಮತ್ತು ಮರೆಯಲಾಗದ ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಕುಡ್ಪಿ ವಾಸುದೇವ ಶೆಣೈಯವರು. ಅವರನ್ನು ಒಂದಾಣೆ ಮಾಲೆಯ ಸಾಹಸಿ ಎಂದೂ ಕರೆದಿದ್ದಾರೆ. ಸ್ವತಃ ಸಾಹಿತಿಯಾಗಿ, ನಾಟಕಕಾರರಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಸಾಕಷ್ಟು ಹೆಸರು ಮಾಡಿದವರು. ಸುಭಾಷ್ ಚಂದ್ರಬೋಸರನ್ನು ಮುಖತಃ ಭೇಟಿಯಾಗಿ ಸ್ಫೂರ್ತಿಗೊಂಡವರು. ತಮ್ಮ 'ಪ್ರಭಾತ' ಪತ್ರಿಕೆಯ ಮೂಲಕ ಪ್ರಸಿದ್ಧಿಯನ್ನೂ ಪಡೆದಿದ್ದರು. ಒಂಭತ್ತು ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. ಅಲ್ಲದೆ ಎಂಟು ನಾಟಕಗಳನ್ನು ರಚಿಸಿದ್ದಾರೆ. ಹರಟೆ, ಪ್ರವಾಸ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಅವರು ಪ್ರಸಿದ್ಧರಾಗಿರುವುದು ಒಂದಾಣೆ ಸಾಹಿತ್ಯ ಕೃತಿಗಳ ಮೂಲಕ.
1954 ರಿಂದ 1962 ರವರೆಗೆ ಅವರು ಕೈಗೊಂಡ ಕಿರು ಪು ಸ್ತಿಕ ಪ್ರಕಟಣಾ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಕನಿಷ್ಟ ಹದಿನೈದು ಪುಟ, ಹೆಚ್ಚೆಂದರೆ ಮೂವತ್ತು ಪುಟಕ್ಕೆ ಸೀಮಿತವಾದ ಈ ಪುಸ್ತಿಕೆಗಳು ಅಂದು ಜನಪ್ರಿಯ ಸಾಹಿತ್ಯ ಕೃತಿಗಳಾಗಿ ಜನಸಾಮಾನ್ಯರ ಕೈಸೇರುತ್ತಿದ್ದವು. ತನ್ಮೂಲಕ ಸಾಹಿತ್ಯ ಪ್ರಜ್ಞೆ ಬೆಳೆಸಲು ನೆರವಾಗುತ್ತಿದ್ದವು. ವಾರಕ್ಕೊಂದರಂತೆ ಪ್ರಕಟವಾಗುತ್ತಿದ್ದ ಈ ಪುಸ್ತಕಗಳ ಬೆಲೆ ಕೇವಲ ಒಂದಾಣೆ. ಒಟ್ಟು 348 ಪುಸ್ತಕಗಳನ್ನು ಪ್ರಕಟಿಸಿ ದಾಖಲೆ ಮಾಡಿದವರು ವಾಸುದೇವ ಶೆಣೈ ಅವರು. ಇವರ ಪ್ರಕಟಣೆಯಲ್ಲಿ ಏಕಾಂಕ ನಾಟಕಗಳು, ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕಗಳು, ಕವಿತೆಗಳು, ಕಥೆಗಳು, ಪ್ರವಾಸ ಕಥನ, ಸ್ಥಳಪುರಾಣ, ಅನುವಾದ ಸಾಹಿತ್ಯ, ಜಾನಪದ ಸಾಹಿತ್ಯ, ಜೀವನ ಚರಿತ್ರೆ, ತತ್ವಜ್ಞಾನ, ಜ್ಯೋತಿಷ್ಯ, ಗಾದೆಗಳು, ಒಗಟುಗಳು, ವಿಮರ್ಶೆ, ಗೃಹವೈದ್ಯ, ಹೀಗೆ ಎಲ್ಲ ವಿಷಯಗಳನ್ನೊಳಗೊಂಡ ಪುಸ್ತಕಗಳೂ ಇವೆ. ಈ ಪುಸ್ತಕ ಮಾಲಿಕೆಗೆ ಅಂದಿನ ಸಾಹಿತ್ಯ ಕ್ಷೇತ್ರದ ದಿಗ್ಗಜರುಗಳೂ ಕೈಜೋಡಿಸಿದ್ದು ಶೆಣೈ ಅವರ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಎಂ.ಎನ್.ಕಾಮತ್, ಎಂ.ಗೋವಿಂದಪೈ, ಬಳ್ಕೂರು ಸುಬ್ರಾಯ ಅಡಿಗರು, ನವಗಿರಿನಂದ ಮುಂತಾದವರ ಕೃತಿಗಳೂ ಇದರಲ್ಲಿ ಸೇರಿವೆ. ಈ ಕೃತಿಗಳನ್ನು ಜನ ಸಾಮಾನ್ಯರೂ ಸಹ ಕೊಂಡು ಓದಿ ಪ್ರೋತ್ಸಾಹ ನೀಡುತ್ತಿದ್ದರು. ಇದರಿಂದ ಸಾಹಿತ್ಯವನ್ನು ಆಸ್ವಾದಿಸುವ ಒಂದು ಜನಾಂಗವೇ ಸೃಷ್ಟಿಯಾಯಿತು. ಹೀಗೆ ಓದುಗರ ಬಳಗವನ್ನು ಸೃಷ್ಟಿಸಿ, ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡಿದ, ಅದಕ್ಕಿಂತಲೂ ಹೆಚ್ಚಾಗಿ ಕನ್ನಡ ಸಾಹಿತ್ಯವನ್ನು ಜನರ ಬಳಿಗೇ ಕೊಂಡೊಯ್ಯುವ ಅಸಾಧಾರಣ ಸೇವೆ ಮಾಡಿದ ಕುಡ್ಪಿಯವರ ಸೇವೆ ಇಂದಿನವರಿಗೆ ದಾರಿದೀಪ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

