ಸಂಪಾದಕೀಯ

ವ್ಯಕ್ತಿ ಬಡೇ, ಧ್ವನಿ ಮೃದು!

Published On :

ಬಡೇ ಗುಲಾಂ ಅಲೀಖಾನರ ಹೆಸರು ಹಿಂದುಸ್ಥಾನಿ ಸಂಗೀತಪ್ರಿಯರಿಗೆ ಚಿರಪರಿಚಿತ. ಮನೆತನದ ಸಂಗೀತ ಕೀರ್ತಿಯನ್ನು ಎಲ್ಲೆಡೆ ಪಸರಿಸಿ, ಇಡೀ ಭಾರತದಲ್ಲಿ ಗೌರವ ಪಡೆದ ಇವರು ವಿನಯ, ಔದಾರ್ಯ, ಹೃದಯ ವೈಶಾಲ್ಯ ಗುಣಗಳಿಂದ ಎಲ್ಲರ ಮನಸೆಳೆದವರು. ಹುಟ್ಟಿ ಬೆಳೆದ ಲಾಹೋರಿನ ಬಗ್ಗೆ ಅವರಿಗೆ ತುಂಬಾ ಪ್ರೀತಿ. ಹೀಗಾಗಿ ಭಾರತ ವಿಭಜನೆಯಾದ ಮೇಲೆ ಪಾಕಿಸ್ತಾನದ ಪೌರತ್ವ ಪಡೆದು ನೆಲೆಸಿದರು. ಆದರೆ ಅವರ ಮನಸ್ಸೆಲ್ಲಾ ಭಾರತದಲ್ಲಿಯೇ ಇತ್ತು. ಅಲ್ಲಿ ಅವರು ಹೊಂದಿಕೊಳ್ಳಲಾಗದೇ ಕೊನೆಗೆ 1961ರಲ್ಲಿ ಭಾರತಕ್ಕೆ ಬಂದು ಇಲ್ಲಿಯೇ ನೆಲೆನಿಂತು ಭಾರತದ ಪೌರತ್ವವನ್ನು ಪಡೆದರು. ತಮ್ಮ ತಂದೆ ಉಸ್ತಾದ್ ಅಲೀಬಕ್ಸ್ ಪಟಿಯಾಲ ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು. ಅವರಿಂದಲೇ ಅಲೀಖಾನರಿಗೆ ಸಂಗೀತದ ಪಾಠವಾಯಿತು. ಅದೇರೀತಿ ಇನ್ನೊಬ್ಬ ಸಂಗೀತ ವಿದ್ವಾಂಸ ಇವರ ಸೋದರಮಾವ ಉಸ್ತಾದ್ ಕಾಲೇಖಾನರೂ ಸಹ ಸಂಗೀತವನ್ನು ಇವರಿಗೆ ಧಾರೆ ಎರೆದರು.
ಒಮ್ಮೆ ಕೊಲ್ಲಾಪುರಕ್ಕೆ ಬಂದಿದ್ದ ಅಲೀಖಾನರಿಗೆ ಸರಿ ಸಮಾನವಾಗಿ ಹಾಡುತ್ತಿದ್ದವರೆಂದರೆ ಅಲ್ಲಾದಿಯಾ ಖಾನರು. ಆದರೆ ಅವರು ಮುಪ್ಪಿನಿಂದ ಜರ್ಜರಿತರಾಗಿದ್ದುದರಿಂದ ಧಾರವಾಡದಿಂದ ಅವರ ಶಿಷ್ಯ ಮಲ್ಲಿಕಾರ್ಜುನ ಮನ್ಸೂರರನ್ನು ಕರೆಸಿ ಹಾಡಿಸಲಾಯಿತು. ಮನ್ಸೂರರು ಅಲೀಖಾನರ ಎದುರು ಗುಬ್ಬಚ್ಚಿಯಂತೆ ಕಂಡರೂ ಅವರದ್ದು ದೈತ್ಯ ಪ್ರತಿಭೆ. ಪ್ರಾರಂಭದಲ್ಲಿ ಮನ್ಸೂರರ ಸಾಮರ್ಥ್ಯದ ಬಗ್ಗೆ ಅಸಮಾಧಾನಗೊಂಡಿದ್ದ ಅಲೀಖಾನರು ನಂತರ ಬಾಲಕನ ಪ್ರತಿಭೆಯನ್ನು ಕಂಡು ತಲೆದೂಗಿದರು.  ಮತ್ತೊಮ್ಮೆ ಅನೇಕ ಪುಸ್ತಕಗಳನ್ನೂ ನೂರಾರು ಲೇಖನಗಳನ್ನೂ ಬರೆದ ವಿದ್ವಾಂಸರೊಬ್ಬರು ಬಡೇ ಗುಲಾಂ ಅಲೀಖಾನರೊಡನೆ ಸಂಗೀತದ ವಿಷಯದಲ್ಲಿ ಮಾತನಾಡಲು ಬಂದಿದ್ದರು.
ಅವರನ್ನು ಈ ಸಂಗೀತದ ದಿಗ್ಗಜ ಕೇಳಿದ ಮೊದಲ ಪ್ರಶ್ನೆ, ನಿಮಗೆ ಸಂಗೀತ ಗೊತ್ತಿದೆಯೇ ಎಂದು. ಅದಕ್ಕೆ ವಿದ್ವಾಂಸರು ಹೌದೆಂದು ಉತ್ತರಿಸಿದರು. ಆಗ ಕೇಳಿದ ಎರಡನೇ ಪ್ರಶ್ನೆ, ನಿಮಗೆ ಎಂದಾದರೂ ಅಳು ಬಂದು ಕಣ್ಣೀರು ಸುರಿಸಿದ್ದೀರಾ ಎಂದು. ಆಗ ವಿದ್ವಾಂಸರು ಅವರ ಪ್ರಶ್ನೆ ಕೇಳಿ ಆಶ್ಚರ್ಯವಾಗಿ ಇಲ್ಲವೆಂದರು. ಹಾಗಾದರೆ ನಿಮಗೆ ಅಂತಃಕರಣವಿಲ್ಲವೆಂದಾಯಿತು. ಇಂತಹವರ ಬಳಿ ಸಂಗೀತದ ಬಗ್ಗೆ ಮಾತನಾಡುವುದೇನಿದೆ ಎಂದು ಅಲ್ಲಿಂದ ಎದ್ದು ಹೊರಟೇಬಿಟ್ಟರು. ಅಂತಃಕರಣ ಇಲ್ಲದಿದ್ದರೆ ಸಂಗೀತದ ಮಧುರ ಅನುಭವವಾಗುವುದಿಲ್ಲವೆಂದು ಅಲೀಖಾನರ ನಂಬಿದ್ದರು.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.