ಹೀಗಿದ್ದರು ಭಗತ್ ಸಿಂಗ್ರ ತಾಯಿ
ಶಹೀದ್ ಭಗತ್ ಸಿಂಗ್ನ ಹೆಸರು ಯಾರಿಗೆ ತಿಳಿದಿಲ್ಲ? ಭಾರತೀಯ ಸ್ರ್ಯಾತಂತ್ರ್ಯ ಸಂಗ್ರಾಮದಲ್ಲಿ ಅವನ ಹೆಸರು ಚಿರಸ್ಥಾಯಿ. ಇಂಥ ವೀರಪುತ್ರ...
ಶಹೀದ್ ಭಗತ್ ಸಿಂಗ್ನ ಹೆಸರು ಯಾರಿಗೆ ತಿಳಿದಿಲ್ಲ? ಭಾರತೀಯ ಸ್ರ್ಯಾತಂತ್ರ್ಯ ಸಂಗ್ರಾಮದಲ್ಲಿ ಅವನ ಹೆಸರು ಚಿರಸ್ಥಾಯಿ. ಇಂಥ ವೀರಪುತ್ರನನ್ನು ನಾಡಿಗೆ ನೀಡಿದ ವೀರಮಾತೆ ವಿದ್ಯಾವತೀದೇವಿ. ಭಗತ್ ಸಿಂಗ್ ಅಷ್ಟೇ ಅಲ್ಲದೆ ಕುಲಬೀರ್ ಸಿಂಗ್ ಮತ್ತು ಕುಲ್ತಾರ್ ಸಿಂಗ್ ಎಂಬ ಸಿಂಹದಮರಿಗಳಂತಿದ್ದ ಇಬ್ಬರು ಸ್ವಾತಂತ್ರ್ಯ ವೀರರನ್ನೂ ಸಹ ನೀಡಿದ ಕೀರ್ತಿ ಈ ಮಾತೆಗೆ ಸಲ್ಲುತ್ತದೆ. ಲಾಹೋರ್ ಜೈಲಿನಲ್ಲಿದ್ದ ಭಗತ್ ಸಿಂಗ್ನನ್ನು ನೋಡಲು ಅವರು ನಡೆದೇ ಹೋಗುತ್ತಿದ್ದರು. ಇದನ್ನು ಅರಿತ ಭಗತ್ ಸಿಂಗ್ 'ಅಮ್ಮಾ ನೀನೇಕೆ ನಿತ್ಯ ನನ್ನನ್ನು ನೋಡಲು ಹಳ್ಳಿಯಿಂದ ನಡೆದು ಬರುತ್ತೀಯ? ನೀನೂ ಇದೇ ಜೈಲಿಗೆ ಬಂದು ಇದ್ದುಬಿಡು! ಎಂದು ಹಾಸ್ಯ ಮಾಡುತ್ತಿದ್ದುದೂ ಉಂಟು.
ಒಮ್ಮೆ ಮಾಂಟಗುಮರಿ ಸೆರೆಮನೆಯಲ್ಲಿದ್ದು ಉಪವಾಸ ಮಾಡುತ್ತಿದ್ದ ಕುಲಬೀರ್ ಮತ್ತು ಕುಲ್ತಾರ್ರನ್ನು ನೋಡಿಕೊಂಡು ಬರಲು ವಿದ್ಯಾವತೀ ದೇವಿ ಬಂದರು. ಆದರೆ ಅವರನ್ನು ನೋಡಲು ಅನುಮತಿ ಸಿಗಲಿಲ್ಲ. ತುಂಬಾ ಬಲವಂತ ಮಾಡಿದಾಗ 'ನನ್ನ ಕಿರಿಮಗ ಅನಾರೋಗ್ಯದಿಂದಿದ್ದಾನೆ. ಹಾಗಾಗೆ ನನ್ನ ಮನಸ್ಸು ಸರಿಯಿಲ್ಲ. ಸುಮ್ಮನೆ ಒತ್ತಾಯ ಮಾಡಿ ಬೇಸರಪಡಿಸಬೇಡಿ' ಎಂದು ಜೈಲು ಅಧಿಕಾರಿ ನುಡಿದ. ಆಗ ವಿದ್ಯಾವತಿ ದೇವಿ ಹೇಳಿದರು, 'ನಿಮ್ಮ ಚಿಕ್ಕಮಗನಿಗೆ ಕಾಯಿಲೆಯಾದದ್ದಕ್ಕೇ ನೀವಿಷ್ಟು ಚಿಂತೆಯಲ್ಲಿದ್ದರೆ, ಉಪವಾಸದಿಂದ ಸಾಯುತ್ತಿರುವ ಎರಡು ಸಿಂಹದ ಮರಿಗಳನ್ನು ಹೊಂದಿರುವ ನನ್ನ ಗತಿಯೇನು?'. ಆದರೂ ಜೈಲು ಅಧಿಕಾರಿ ಜಗ್ಗದೇ ಇದ್ದಾಗ, ಜೈಲಿನ ಹೊರಭಾಗದಲ್ಲಿ ಜನರನ್ನು ಸೇರಿಸಿ, ಜೈಲು ಅಧಿಕಾರಿಯ ವರ್ತನೆಯನ್ನು ಖಂಡಿಸಿದಳು. ಅಪಾರ ಜನ ಸೇರಿತು. ಅವರೊಡನೆ ಸೆರೆಮನೆಯ ಒಳಗಿದ್ದ ಕೈದಿಗಳೂ ಘೋಷಣೆ ಕೂಗುತ್ತಿದ್ದರು. ಎಲ್ಲರೂ ಜೈಲು ಅಧಿಕಾರಿಯ ವರ್ತನೆಯನ್ನು ಖಂಡಿಸಿದರು. ಕೊನೆಗೆ ಕಂಗಾಲಾದ ಜೈಲು ಅಧಿಕಾರಿ ವಿದ್ಯಾವತಿಯವರಲ್ಲಿ ಕ್ಷಮೆ ಬೇಡಿ, ಮಕ್ಕಳನ್ನು ಭೇಟಿ ಮಾಡಲು ಅವರಿಗೆ ಅನುಮತಿ ನೀಡಿದ.
1965ರಲ್ಲಿ ಒಂದು ದಿನ ವಿದ್ಯಾವತೀ ದೇವಿಯನ್ನು ಬರಮಾಡಿಕೊಂಡ ಉಜ್ಜಯಿನಿಯ ಜನ ಅದ್ದೂರಿ ಮೆರವಣಿಗೆ ಮಾಡಿದರು. ಭಗತ್ ಸಿಂಗ್ಗೆ ಜೈಕಾರ ಹಾಕಿದರು. ರಸ್ತೆಯಲ್ಲಿ ಹೋಗುವಾಗ ಹೂಮಳೆಗರೆದರು. ಜನ ಎಸೆಯುತ್ತಿದ್ದ ಹೂಗಳಿಂದ ವಿದ್ಯಾವತೀ ದೇವಿಗೆ ನೋವಾಗಬಹುದೆಂದು ತಿಳಿದು ಹೂಎಸೆಯುವುದನ್ನು ಆಯೋಜಕರು ತಡೆಯಲೆತ್ನಿಸಿದಾಗ ಈ ಮಹಾಮಾತೆ ಹೇಳಿದ್ದು ಹೀಗೆ, 'ಅವರನ್ನು ತಡೆಯಬೇಡಿ. ಭಗತ್ ಸಿಂಗ್ನ ಬಗ್ಗೆ ಜಯಘೋಷ ಮಾಡುತ್ತಾ ಜನ ಕಲ್ಲು ಎಸೆದರೂ ನಾನು ಸಂತೋಷದಿಂದ ಸ್ವೀಕರಿಸುತ್ತೇನೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

