ಉತ್ತರ ಕನ್ನಡ

ನಿರಾಶ್ರಿತರ ಸತ್ಯಾಗ್ರಹ: ಬೆಂಬಲ

Published On :

ಶಿರಸಿ: ಕಾರವಾರ ಸೀಬರ್ಡ್ ನಿರಾಶ್ರಿತರ ಪರಿಹಾರದ ಸಮಸ್ಯೆಗಳ ಕುರಿತು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾವನದಲ್ಲಿ ಜರುಗಿದ ಧರಣಿ ಸತ್ಯಾಗ್ರಹದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ನಿರಾಶ್ರಿತರ ಸಮಸ್ಯೆಗೆ ಬೆಂಬಲವನ್ನು ವ್ಯಕ್ತಪಡಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ನೇತೃತ್ವದಲ್ಲಿ ಹಿರಿಯ ಧುರೀಣ ಜಿ.ಎಂ. ಶೆಟ್ಟಿ, ಇಬ್ರಾಹಿಂ ನಬೀಸಾಬ ಸೈಯದ್, ವಿ.ಜಿ. ಹೆಗಡೆ, ತಿಮ್ಮಾ ಮರಾಠಿ, ಬುಡಕಟ್ಟು ಜಂಟಿ ಕ್ರಿಯಾ ವೇದಿಕೆ ಯಲ್ಲಾಪುರದ ಪದಾಧಿಕಾರಿಗಳಾದ ನರಸಿಂಹ ಸಿದ್ದಿ, ಸೋಮ್ಯಾ ಸಿದ್ದಿ, ಗಣೇಶ ಕುಣಬಿ, ಭೀಮ್ಸಿ ಕಿರವತ್ತಿ, ಲಕ್ಷ್ಮೀ ಹಾಗೂ ಅತಿಕ್ರಮಣ ಹೋರಾಟಗಾರರಾಗಿರುವ ಹರಿ ನಾಯ್ಕ, ಸೂರ್ಯಕಾಂತ, ಈಶ್ವರ ನಾಯ್ಕ ಮಾದೇವ ದೊಂಬೆ, ಮಹೇಶ ಜೋಗಿನಮನೆ, ಮಧುಕೇಶ್ವರ ನಾಯ್ಕ, ತ್ರಿಯಂಬಕ ಬಾಂದೇಕರ್ ಹುಲ್ಲೂರು ಮುಂತಾದ ಪದಾಧಿಕಾರಿಗಳು ಸತ್ಯಾಗ್ರಹದಲ್ಲಿ ಭಾಗವಹಿಸಿದರು.


ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ: ಹರ್ಷ


ಕಾರವಾರ: ಕೇಂದ್ರ ರಕ್ಷಣಾ ಇಲಾಖೆ 160 ನಿರಾಶ್ರಿತರ ಪ್ರಕರಣಗಳಿಗೆ ಸಂಬಂಧಿಸಿ ಹೆಚ್ಚಿನ ಪರಿಹಾರ ನೀಡಿರುವುದು ದೇಶದ ರಕ್ಷಣೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಸೀಬರ್ಡ್ ನಿರಾಶ್ರಿತರ ಕತ್ತಲೆ ಬಾಳಿನಲ್ಲಿ ಬೆಳಕು ಮೂಡಿದಂತಾಗಿದೆ ಎಂದು ಸೀಬರ್ಡ್ ನೌಕಾನೆಲೆ ನಿರಾಶ್ರಿತರ ವೇದಿಕೆ ಪ್ರಧಾನ ಕಾರ್ಯದರ್ಶಿ ರವೀಂದ್ರ ಅಮದಳ್ಳಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾರವಾರದ ವಕೀಲರಾದ ಫ್ರಾನ್ಸಿಸ್ ಲೋಬೋ ಹಾಗೂ ಕಾರವಾರ ಮೂಲದ ದೇವದತ್ತ ಕಾಮತ್ ಮೂಲಕ ಸತತ ಕಾನೂನು ಹೋರಾಟ ಮಾಡಿದ್ದರ ಫಲವಾಗಿ ರಕ್ಷಣಾ ಇಲಾಖೆಯಿಂದ ಪರಿಹಾರ ಲಭಿಸಿದೆ. ಅಲ್ಲದೇ ಇನ್ನುಳಿದ 800ಕ್ಕೂ ಹೆಚ್ಚು ನಿರಾಶ್ರಿತರ ಭೂ ಪರಿಹಾರ ಪ್ರಕರಣಗಳ ವಿಚಾರಣೆ ನಡೆಸಿ ಹೆಚ್ಚಿನ ಪರಿಹಾರ ನೀಡಲು ಕೇಂದ್ರ ರಕ್ಷಣಾ ಇಲಾಖೆ ಮುಂದಾಗಬೇಕೆಂದು ವಿನಂತಿಸಿದ್ದಾರೆ.
ನ್ಯಾಯಾಂಗ ನಿಂದನಾ ಅರ್ಜಿ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿ ಎ. ಭಾಸ್ಕರ ರೆಡ್ಡಿ ಸಮ್ಮುಖದಲ್ಲಿ ರಕ್ಷಣಾ ಇಲಾಖೆಗೆ ಸುಪ್ರೀಂಕೋರ್ಟ್ ನಾಲ್ಕು ವಾರಗಳ ಗಡುವು ನೀಡಿತ್ತು. ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಜೋತಿ ಮುಖ್ಯೋಪಾಧ್ಯಾಯ ಮತ್ತು ರಂಜನ್ ಗೋಗಾಯ ಅವರಿದ್ದ ದ್ವಿ ಸದಸ್ಯ ಪೀಠ ಗಂಭೀರ ಎಚ್ಚರಿಕೆ ನೀಡಿತ್ತು. ಸತತ ಕಾನೂನು ಹೋರಾಟ ನಡೆಸಿ ನಿರಾಶ್ರಿತರಲ್ಲಿ ಬದುಕಿನ ಬಗ್ಗೆ ಭರವಸೆ ಮೂಡಿಸಿದ ದೇವದತ್ತ ಕಾಮತ್ ಹಾಗೂ ಫ್ರಾನ್ಸಿಸ್ ಲೋಬೋ ಅವರಿಗೆ ಸೀಬರ್ಡ್ ನೌಕಾನೆಲೆ ನಿರಾಶ್ರಿತರ ವೇದಿಕೆ ಪ್ರಧಾನ ಕಾರ್ಯದರ್ಶಿ ರವೀಂದ್ರ ಅಮದಳ್ಳಿ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.