ಸಮುದ್ರ ತೀರದ ಬಂಡೆ ರಕ್ಷಿಸಿ
ಕಾರವಾರ: ಕುಮಟಾದ ಧಾರೇಶ್ವರ ಕಡಲ ತೀರದಲ್ಲಿ ಕಲ್ ಬಂಡೆಗಳಿಗೆ ಹೊಂದಿಕೊಂಡ ಗುಡ್ಡಗಳನ್ನು ಅಗೆದು ಕೃಷಿ ಚಟುವಟಿಕೆ ನಡೆಸಿದಲ್ಲಿ ಪರಿಸರ ಅಸಮತೋಲನ ಉಂಟಾಗುತ್ತದೆ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಿಮಾನ್ಸ್ ಸಂಶೋಧನಾ ಅಭ್ಯರ್ಥಿ, ಪ್ರಾಣಿಶಾಸ್ತ್ರಜ್ಞ ರವಿ ಹೆಗಡೆ ಜಿಲ್ಲಾಧಿಕಾರಿ ಎಂ.ಟಿ. ರೇಜು ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪರಿಸರ ಸೂಕ್ಷ್ಮ ಉತ್ತರ ಕನ್ನಡ ಜಿಲ್ಲೆ ಅಪೂರ್ವ ಸಾಗರ ಜೀವಿ ವೈವಿಧ್ಯ ಹೊಂದಿದ್ದು, ವಿನಾಶಗೊಳ್ಳುವ ಮೊದಲು ಅದನ್ನು ರಕ್ಷಿಸಬೇಕಾದ ಅಗತ್ಯವಿದೆ. ಜಿಲ್ಲೆಯು ಸುಮಾರು 80 ಮೈಲಿಗಿಂತ ಹೆಚ್ಚು ಉದ್ದದ ಸಮುದ್ರ ತೀರ ಹೊಂದಿದೆ. ಪಶ್ಚಿಮ ಘಟ್ಟದ ಸಾಲಿನ ಅರಬ್ಬೀ ಕಡಲ ತೀರದವರೆಗೂ ಕಡಲಂಚಿನ ಕಲ್ಬಂಡೆಗಳ ತಾಣ ಕಾಣಸಿಗುತ್ತದೆ. ಇಂತಹ ಕಲ್ಬಂಡೆಗಳು ಸಾಗರ ಜೀವ ವೈವಿಧ್ಯಕ್ಕೆ ಆಶ್ರಯ ತಾಣವಾಗಿವೆ.
ಜಿಲ್ಲೆಯ ಬಿಣಗಾ, ಅರ್ಗಾ, ಬೇಲೆಕೇರಿ, ಅಂಕೋಲಾ ಕೇಣಿ, ಗೋಕರ್ಣ, ಕುಮಟಾ ಕಡ್ಲೆ, ಕುಮಟಾ ಬಂದರು, ಧಾರೇಶ್ವರ, ಕಾಸರಕೋಡ ಅಪ್ಸರಕೊಂಡ, ಮುರುಡೇಶ್ವರ, ಭಟ್ಕಳ ಮತ್ತು ಬೆಳಕೆಗಳಲ್ಲಿ ಇಂಥ ಕಲ್ಬಂಡೆಗಳ ತೀರಾ ಕಾಣಸಿಗುತ್ತದೆ. ಕಡಲಂಚಿನ ಕಲ್ಬಂಡೆಗಳನ್ನು ಆಶ್ರಯಿಸಿ ಸ್ಪಂಜು ಜೀವಿಗಳು, ಕುಟುಕು ಕಣವಂತಗಳು, ಅನೆಲಿಡಾಗಳು, ಕಂಟಕಚರ್ಮಿಗಳು, ಮೃದ್ವಂಗಿಗಳು, ಮತ್ತು ಕಲ್ಲೇಡಿಗಳು, ವಿಶಿಷ್ಟ ಮೀನುಗಳು ತಗ್ಗಿನ ನೀರನ್ನು ಮಾತ್ರ ಆಶ್ರಯಿಸಿ ಬದುಕುತ್ತವೆ. ಈ ಜೀವಿಗಳ ಸಂತತಿ ನಾಶವಾಗದಿರಲು ಕಲ್ಬಂಡೆಗಳ ತೀರದ ವಾಸತಾಣದ ರಕ್ಷಣೆಯ ಅಗತ್ಯವಿದೆ. ಕಲ್ಬಂಡೆಗಳನ್ನು ಹೊಂದಿಕೊಂಡಿರುವ ಬೆಟ್ಟದ ಸಾಲನ್ನು ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕಾದ ಅಗತ್ಯವಿದೆ.
ಈಚೆಗೆ ಕುಮಟಾದ ಧಾರೇಶ್ವರ ತೀರದಲ್ಲಿ ಕಲ್ಬಂಡೆಗಳ ತಾಣಕ್ಕೆ ಹೊಂದಿಕೊಂಡಿರುವ ಗುಡ್ಡವನ್ನು ಅಗೆದು ಕೃಷಿ ಚಟುವಟಿಕೆ ನಡೆಸಲಾಗಿದೆ. ಬೆಟ್ಟ ಅಗೆದು ಮಣ್ಣನ್ನು ಕಲ್ಬಂಡೆಗಳ ಮೇಲೆ ಹಾಕಲಾಗಿದೆ. ಇದರಿಂದ ಪರಿಸರ ಅಸಮತೋಲನ ಉಂಟಾಗಲಿದೆ. ಅಲ್ಲದೆ ಇಲ್ಲಿ ಪುನಃ ರಸ್ತೆ ನಿರ್ಮಾಣ ಮುಂತಾದ ಚಟುವಟಿಕೆ ಆರಂಭಗೊಳ್ಳುವ ಸಾಧ್ಯತೆ ಇದೆ. ಕಲ್ಬಂಡೆಗಳ ಆಸುಪಾಸಿನ ಬೆಟ್ಟದ ಸಾಲು ಕರಾವಳಿ ವಲಯ ನಿಯಂತ್ರಣ ಕಾಯ್ದೆಯಡಿಯಲ್ಲಿ ಬರುವುದರಿಂದ ಎಲ್ಲ ಅನಧಿಕೃತ ಚಟುವಟಿಕೆಗಳನ್ನು ನಿರ್ಬಂಧಿಸಿ ಜೀವವೈವಿಧ್ಯ ರಕ್ಷಣೆಗೆ ಆದ್ಯತೆ ನೀಡಬೇಕು.
ಅಲ್ಲದೆ ಇವುಗಳು ಮೀನುಗಾರರ ಬದುಕಿನ ಅವಿಭಾಜ್ಯ ಅಂಗ, ಕಡಲ ಕೊರೆತ ತಡೆವ ನೈಸರ್ಗಿಕ ತಡೆಗೋಡೆಯೂ ಆಗಿವೆ. ಕಡಲಂಚಿನ ಕಲ್ಬಂಡೆಗಳನ್ನು ಶಿಲೆಗಾಗಿ ಒಡೆಯದಂತೆ ರಕ್ಷಿಸಬೇಕಿದೆ. ಸ್ಥಳೀಯರಿಗೆ ಈ ಬಗ್ಗೆ ಶಿಕ್ಷಣ ನೀಡಬೇಕಾದ ಅಗತ್ಯವಿದೆ. ಜಿಲ್ಲೆಯ ಎಲ್ಲ ಕಡಲಂಚಿನ ಕಲ್ಬಂಡೆತೀರಗಳನ್ನು ಇರುವಂತೆಯೇ ಕಾಪಾಡಬೇಕಿದ್ದು, ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಜಿಲ್ಲಾಡಳಿತವನ್ನು ಮನವಿಯಲ್ಲಿ ಆಗ್ರಹಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

