ಸಮಾಜ ಸುಧಾರಣೆಗೆ ಪ್ರಯತ್ನ ಅಗತ್ಯ
ಕನ್ನಡಪ್ರಭ ವಾರ್ತೆ, ಮುಂಡಗೋಡ, ಜು. 4
ಯಾವುದೇ ಕ್ಷೇತ್ರದಲ್ಲೂ ಪ್ರಾಮಾಣಿಕತೆ ಇಲ್ಲದಂತಾಗಿದೆ. ಸಮಾಜಕ್ಕೆ ಆದರ್ಶವಾಗಬೇಕಾದವರೇ ಆದರ್ಶ ಕಳೆದುಕೊಂಡಿದ್ದಾರೆ. ಲಂಚಗುಳಿತನದಿಂದ ನಮ್ಮ ವ್ಯವಸ್ಥೆ ಹದಗೆಟ್ಟು ಹೋಗಿದೆ. ಸಭ್ಯಸ್ಥರು ಸಾಮಾಜಿಕ ಕ್ಷೇತ್ರ ಪ್ರವೇಶಿಸಲು ಹಿಂದೇಟು ಹಾಕುವಂತಾಗಿದೆ. ಇದಕ್ಕೆ ಹೊಣೆ ಯಾರು? ಇದಕ್ಕೆಲ್ಲ ಕೊನೆ ಯಾವಾಗ? ಎಂಬ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಶನಿವಾರ ಇಲ್ಲಿಯ ತಾಪಂ ಸಭಾಂಗಣದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ತಾಲೂಕು ಹಿರಿಯ ನಾಗರಿಕರ ವೇದಿಕೆ ಆಶ್ರಯದಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬೀಜ ಉತ್ತಮವಾಗಿದ್ದರೆ ಮಾತ್ರ ಉತ್ತಮ ಫಸಲು ಬರಲು ಸಾಧ್ಯ. ವ್ಯವಸ್ಥೆ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿದರು.
ಪಟ್ಟಣ ಹಲವು ರೀತಿ ಅಭಿವೃದ್ಧಿ ಹೊಂದಬೇಕಿದೆ. ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಹಲವು ಮೂಲಭೂತ ಸೌಕರ್ಯದ ಅಗತ್ಯವಿದೆ. ಟ್ರಾಫಿಕ್ ವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆ ಇಲ್ಲಿ ಕಾಡುತ್ತಿದೆ. ಗೂಡಂಗಡಿ ತೆರವುಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಪಟ್ಟಣದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣವಾಗಬೇಕಿದೆ. ಮುಂದಿನ ದಿನಗಳಲ್ಲಿ ಶಿರಸಿ-ಹುಬ್ಬಳ್ಳಿ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಲಿದ್ದು, ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಮನವಿ ಮಾಡಿದರು.
ಹಲವು ಹಿರಿಯ ಗಣ್ಯರನ್ನು ಶಾಸಕ ಶಿವರಾಮ ಹೆಬ್ಬಾರ ಸನ್ಮಾನಿಸಿದರು. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎ.ಎಚ್. ದೊಡ್ಮನಿ, ತಹಸೀಲ್ದಾರ್ ನಾರಾಯಣ ರಾವ್, ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್. ಬೈರವಾಡಗಿ, ಪಪಂ ಸದಸ್ಯೆ ರಮಾಬಾಯಿ ಕುದಳೆ, ಎಸ್.ಬಿ. ಶೇಟ್, ಎನ್.ಎಸ್. ಮಡ್ಲಿ, ಎಚ್.ಎನ್. ತಪೇಲಿ, ಅರವಿಂದ ಗುಡವಿ, ಸಿ.ಟಿ. ಮಳೇಕರ, ಸಿ.ಬಿ. ಹಿರೇಮಠ ಮುಂತಾದವರಿದ್ದರು. ಆರ್.ಪಿ. ಮೊಸಳಗಿ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

