ಶಿರಸಿಯಲ್ಲಿ ಮೃತ್ಯುಮಿತ್ರ ಗೋವರ್ಧನ
ಕನ್ನಡಪ್ರಭ ವಾರ್ತೆ, ಶಿರಸಿ, ಜು. 4
ಇಡಗುಂಜಿಯ ಶ್ರೀ ಮಹಾಗಣಪತಿಯ ದೇವರ ಪವಾಡ, ಪ್ರಭಾವವನ್ನು ವಿವರಿಸುವ ಪುಸ್ತಕ ಹಾಗೂ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವವರಿಗಾಗಿ ಮೃತ್ಯುಮಿತ್ರ ಎನ್ನುವ ಪುಸ್ತಕವನ್ನು ಜನಸಾಮಾನ್ಯರಿಗೆ ಹಂಚುವ ಗೋವರ್ಧನ ಅಂಕೋಲೇಕರ್ ಇದೀಗ ಶಿರಸಿಗೆ ಆಗಮಿಸಿದ್ದಾರೆ. ಉಪಯುಕ್ತ ಪುಸ್ತಕಕಗಳನ್ನು ಉಚಿತವಾಗಿ ಹಂಚುವ ಕಾರ್ಯವನ್ನು ಅವರು ಕೈಗೊಳ್ಳುತ್ತಿದ್ದಾರೆ.
ಪುಸ್ತಕ ಪ್ರಕಟಣೆ ಹಾಗೂ ವಿತರಣೆಯ ಕಾರ್ಯವನ್ನು ಕಳೆದೊಂದು ದಶಕದಿಂದ ಮಾಡುತ್ತ ಬಂದಿರುವ ಗೋವರ್ಧನ ಅಂಕೋಲೇಕರ್ ನಗರದ ಶಿವಾಜಿ ಚೌಕ್ ಬಳಿ ಇರುವ ಹಳೆಯ ಅಗ್ನಿಶಾಮಕ ದಳದ ಕಚೇರಿ ಇರುವ ಸಂಕೀರ್ಣದಲ್ಲಿ ತಮ್ಮ ಪುಸ್ತಕಗಳೊಂದಿಗೆ ಕುಳಿತಿದ್ದು, ಬೇಡಿದ್ದನ್ನು ನೀಡುವ ಶ್ರೀಗಣೇಶ ಪುಸ್ತಕವನ್ನು ವಿತರಿಸುತ್ತಿದ್ದಾರೆ. ಇಡಗುಂಜಿಯ ಮಹಾಗಣಪತಿ ದೇವರ ಪವಾಡಗಳು, ದೇವರ ಪ್ರಭಾವ ಇತ್ಯಾದಿಗಳನ್ನು ವಿವರಿಸುವ 148 ಪುಟಗಳ ಪುಸ್ತಕಕ್ಕೆ ರು. 150 ಬೆಲೆಯಿದೆ. ಈ ಪುಸ್ತಕವನ್ನು ಬೆಲೆ ಕೊಟ್ಟು ಒಯ್ಯಬಹುದಾಗಿದೆ. ಮಾತಿನುದ್ಧಕ್ಕೂ ಮಹಾಗಣಪತಿಯ ಮಹಿಮೆಯನ್ನು ಬಣ್ಣಿಸುವ ಗೋವರ್ಧನ್ ಆರ್ಥಿಕವಾಗಿ ತೊಂದರೆಯಲ್ಲಿರುವವರಿಗೆ ಉಚಿತವಾಗಿ ಪುಸ್ತಕ ನೀಡುವ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಾನಿಗಳು, ಪುಸ್ತಕವನ್ನು ಒಯ್ಯುವವರು ಅಂಕೋಲೇಕರ್ ಅವರ ಬಳಿಯಲ್ಲಿರುವ ಐದು ನೂರು, ಸಾವಿರ ಮುಖ ಬೆಲೆಯ ಕೂಪನ್ಗಳನ್ನು ಒಯ್ಯಬಹುದಾಗಿದೆ. ಈ ಹಣದಿಂದ ಅವರು ಇನ್ನಷ್ಟು ಜನರಿಗೆ ಪುಸ್ತಕವನ್ನು ಹಂಚುವ ಕಾರ್ಯವನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಗೋವರ್ಧನ ಅಂಕೋಲೇಕರ್ ಇಳಿವಯಸ್ಸಿನವರಾದರೂ ಸದಾ ಕ್ರಿಯಾಶೀಲರು. ಚಟುವಟಿಕೆಯಿಂದ ಹಲವಾರು ಕೆಲಸಗಳನ್ನು ಹಮ್ಮಿಕೊಂಡವರು. ಅವರೊಡನೆ ಮಾತಿಗಿಳಿದರೆ ನೂರಾರು ಕನಸುಗಳು ಅನಾವರಣಗೊಳ್ಳುತ್ತವೆ. ಉತ್ಸಾಹಿಯಾಗಿ ಸದಾಕಾಲ ಎಲ್ಲಕಡೆಗಳಲ್ಲಿ ಸಂಚಾರ ಮಾಡುತ್ತಿರುವ ಗೋವರ್ಧನ್ ಇನ್ನೂ ಹಲವಾರು ಉಪಯುಕ್ತ ಪುಸ್ತಕಗಳನ್ನು ಹೊರತರುವ ಯೋಜನೆ ಹಾಕಿಕೊಂಡಿದ್ದಾರೆ. ಜನಸಾಮಾನ್ಯರಿಗೆ ಉಪಯುಕ್ತವಾಗುವಂತಹ ಪುಸ್ತಕಗಳ ಪ್ರಕಟಣೆಯ ಕುರಿತು ಆಲೋಚನೆ ಕೈಗೊಂಡಿದ್ದಾರೆ. ಶಿರಸಿ ನಗರದಲ್ಲಿ ಜು. 7ರ ವರೆಗೆ ಅವರು ಪುಸ್ತಕ ವಿತರಣೆಗೆ ಉದ್ದೇಶಿಸಿದ್ದಾರೆ. ಆಸಕ್ತರು ಅವರ ಬಳಿ ತೆರಳಿ ಪುಸ್ತಕಗಳನ್ನು ಪಡೆಯಬಹುದಾಗಿದೆ.
ಶಿರಸಿಯ ಸಾರ್ವಜನಿಕರು ಗೋವರ್ಧನ ಅವರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದಾಗಿದೆ. ಆಸಕ್ತರು ಪುಸ್ತಕಗಳನ್ನು ಕೊಂಡು, ಉದಾರಿಗಳು ಪುಸ್ತಕದ ಮೌಲ್ಯಕ್ಕಿಂತ ಹೆಚ್ಚಿನ ಹಣವನ್ನು ನೀಡುವ ಮೂಲಕ ಇನ್ನಷ್ಟು ಜನರಿಗೆ ಜ್ಞಾನದೀವಿಗೆ ಹರಡಲು ಕಾರಣೀಭೂತರಾಗಬಹುದಾಗಿದೆ. ತಾವೂ ಓದಿ, ಇತರರಿಗೆ ಕೊಡುಗೆಯಾಗಿ ನೀಡಿ ಅವರಿಗೂ ಪುಸ್ತಕಗಳನ್ನು ಓದಲು ಪ್ರೇರೇಪಣೆಯಾಗಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಗೋವರ್ಧನ ಅವರ ಮೊ. 9341080609ಗೆ ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

