ಉತ್ತರ ಕನ್ನಡ

ವಿದ್ಯುತ್ ವ್ಯತ್ಯಯ ಖಂಡಿಸಿ ಪ್ರತಿಭಟನೆ

Published On :

ಕಾರವಾರ: ವಿದ್ಯುತ್ ಕಡಿತ ಹಾಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಖಂಡಿಸಿ ಸೋಮವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮಧ್ಯಾಹ್ನ 1 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ, ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಮನವಿ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತರುವಾಯ ರೈತ ವಿರೋಧಿ ಹಾಗೂ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಾ ಬಂದಿದೆ. ರಾಜ್ಯಾದ್ಯಂತ ಅಸಮರ್ಪಕ ವಿದ್ಯುತ್ ಸರಬರಾಜು ಹಾಗೂ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ಕರ್ನಾಟಕವನ್ನು ಕತ್ತಲೆಯ ಕೂಪಕ್ಕೆ ತಳ್ಳಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆ ಅತ್ಯಂತ ಕನಿಷ್ಠ ಮಟ್ಟದ್ದಾಗಿದ್ದು, ಎಷ್ಟೋ ಗ್ರಾಮ ಹಾಗೂ ಕುಗ್ರಾಮಗಳು ವಿದ್ಯುತ್ ಸಂಪರ್ಕವನ್ನು ಕಡಿದುಕೊಂಡಿದೆ. ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ಮುಟ್ಟಿದ್ದು, ತಂತಿಗಳು ಹಾಗೂ ಟ್ರಾನ್ಸ್ಫಾರ್ಮಾರ್ಗಳು ಹಳೆಯದಾಗಿವೆ. ಗ್ರಾಮೀಣ ಭಾಗದಲ್ಲಿ ಸಿಂಗಲ್ ಫೇಸ್ನ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಇದು ಗ್ರಾಮಾಂತರ ಪ್ರದೇಶದ ಜನತೆಗೆ ತೀವ್ರ ತೊಂದರೆ ಉಂಟುಮಾಡಿದೆ ಎಂದು ವಿವರಿಸಿದರು.
ವಿದ್ಯುತ್ ಖರೀದಿಯಲ್ಲಿ ಸರಿಯಾದ ಆಡಳಿತಾತ್ಮಕ ನಿರ್ಧಾಗಳನ್ನು ಕೈಗೊಳ್ಳದೇ ವಿಳಂಬ ನೀತಿಯನ್ನು ಅನುಸರಿಸುವ ಮೂಲಕ ರಾಜ್ಯ ಸರ್ಕಾರ ವಿದ್ಯುತ್ ಕೊರತೆ ನೀಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಸೌರಶಕ್ತಿಯನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಹೊಸ ಯೋಜನೆಗಳನ್ನು ಪ್ರಾರಂಭಿಸುವ ನಿರ್ಧಾರ ಕೈಗೊಳ್ಳದೇ ಇರುವುದು ರಾಜ್ಯ ಸರ್ಕಾರದ ನಿಷ್ಕ್ರಿಯತೆಯ ದ್ಯೋತಕವಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಬೇಡಿಕೆಗಳು: ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಕನಿಷ್ಠ ಎಂಟು ಗಂಟೆ 3 ಫೇಸ್ ವಿದ್ಯುತ್ ಪೂರೈಸಬೇಕು, ಸುಟ್ಟುಹೋದ ಟ್ರಾನ್ಸ್ ಫಾರ್ಮಾರ್ಗಳನ್ನು ತಕ್ಷಣ ಬದಲಾಯಿಸಬೇಕು.
ರೈತರ ಪಂಪ್ ಸೆಟ್ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಬೇಕು. ವಿದ್ಯುತ್ ನಷ್ಟ ತಪ್ಪಿಸಿ, ರೈತರ ಪಂಪ್ಸೆಟ್ ಉಳಿಸಬೇಕು. ಲೈನ್ ಮ್ಯಾನ್ಗಳ ಕೊರತೆ ನೀಗಿಸಬೇಕು. ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ಪ್ರಮುಖರಾದ ಪ್ರಸಾದ ಕಾರವಾರಕರ, ನಾಗರಾಜ ಜೋಶಿ, ರಾಜೇಶ ನಾಯಕ, ವಿವೇಕಾನಂದ ಭಾಯ್ಕೇರಿಕರ, ಮನೋಜ ಭಟ್, ಮಂಗೇಶ ಪರುಳೇಕರ, ಮಹಾಬಲೇಶ್ವರ ಶೆಟ್ಟಿ, ದಿಗಂಬರ ಹಳದನಕರ, ನಯನಾ ನೀಲಾವರ, ರೋಶನ್ ವೆರ್ಣೇಕರ, ಮಾಲಾ ಹುಲಸ್ವಾರ, ರವಿ ಕುಡ್ತಲಕರ, ಸುಹಾ ಕಡವಾಡಕರ, ನಿತಿನ್ ನಾಯ್ಕ ಮತ್ತಿತರರು ಮುತ್ತಿಗೆ ಹಾಕಿದ ವೇಳೆ ಇದ್ದರು.

ವ್ಯಾಪಾರದಲ್ಲಿ ನಷ್ಟ
ಈಗಾಗಲೇ ರಾಜ್ಯ ಸರ್ಕಾರದ ಲೋಡ್ ಶೆಡ್ಡಿಂಗ್ನಿಂದ ರೈತರು, ವ್ಯಾಪಾರಸ್ಥರು, ಸಣ್ಣ ಉದ್ದಿಮೆದಾರರು ತೀವ್ರಸಂಕಷ್ಟಕ್ಕೆ ಈಡಾಗಿದ್ದಾರೆ. ಹೊಸ ಆಶಾಭಾವನೆಗಳೊಂದಿಗೆ ಅನೇಕ ಪದವೀಧರ ನಿರುದ್ಯೋಗಿಗಳು ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯಗಳನ್ನು ಪಡೆದು ಪ್ರಾರಂಭಿಸಿದ ಸಣ್ಣ ಕೈಗಾರಿಕೆ ಉದ್ದಿಮೆಗಳು, ವ್ಯಾಪಾರವನ್ನು ಸರಿಯಾಗಿ ನಡೆಸಲಾಗದೇ ನಷ್ಟ ಅನುಭವಿಸುತ್ತಿದ್ದಾರೆ. ಸಾಲದ ಕಂತುಗಳನ್ನು ತುಂಬಲಾರದೇ ಅಂಧಕಾರದಲ್ಲಿ ಮುಳುಗಿದ್ದಾರೆ ಎಂದು ತಿಳಿಸಿ, ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಲೋಡ್ ಶೆಡ್ಡಿಂಗ್ ವಿರೋಧಿಸಿ ಪ್ರತಿಭಟನೆ
ಯಲ್ಲಾಪುರ: ಅಸಮರ್ಪಕ ವಿದ್ಯುತ್ ಸರಬರಾಜು, ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ಯಲ್ಲಾಪುರ ಬಿಜೆಪಿ ಘಟಕದ ಸದಸ್ಯರು ಹೆಸ್ಕಾಂ ಕಚೇರಿಗೆ ಸೋಮವಾರ ಬೆಳಗ್ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿರುವುದಕ್ಕೆ ವಿದ್ಯುತ್ ಇಲಾಖೆಯ ವೈಫಲ್ಯವೇ ಪ್ರಮುಖ ಕಾರಣವಾಗಿದ್ದು, ಸಮರ್ಪಕವಾಗಿ ವಿದ್ಯುತ್ ವಿತರಿಸುವಂತೆ ಒತ್ತಾಯಿಸಿದರು. ಈ ಕುರಿತ ಮನವಿಯನ್ನು ಹೆಸ್ಕಾಂನ ಸ.ಕಾ.ನಿ. ಅಭಿಯಂತರಿಗೆ ಸಲ್ಲಿಸಲಾಯಿತು. ಬಿಜೆಪಿ ತಾಲೂಕಾಧ್ಯಕ್ಷ ರಾಘವೇಂದ್ರ ಭಟ್ಟ, ಉಮೇಶ ಭಾಗ್ವತ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ರೇಖಾ ಹೆಗಡೆ, ಪಪಂ ಸದಸ್ಯ ಯೋಗೇಶ ಹಿರೇಮಠ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಸುಬ್ಬಣ್ಣ ಬೋಳ್ಮನೆ, ಬಾಬಾಸಾಬ್ ಅಲನ್, ವಿಶ್ವನಾಥ ಭಾಮಣಕೊಪ್ಪ, ನಾರಾಯಣ ನಾಯಕ, ಗಣೇಶ ಹೆಗಡೆ ಮುಂತಾದ ಪ್ರಮುಖರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು. ನೂರಾರು ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.