ಉತ್ತರ ಕನ್ನಡ

ಖಾಸಗಿ ವಿವಿ: ಎಬಿವಿಪಿಯಿಂದ ಪ್ರತಿಭಟನೆ

Published On :

ಜೋಯಿಡಾ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶಿಕ್ಷಣ ವ್ಯಾಪಾರೀಕರಣಕ್ಕೆ ರೆಡ್ ಕಾರ್ಪೇಟ್ ಹಾಕಿದ್ದು, ರಾಜ್ಯದಲ್ಲಿ ಖಾಸಗಿ ವಿಶ್ವ ವಿದ್ಯಾಲಯಗಳಿಗೆ ತಮ್ಮ ವ್ಯಾಪಾರಿ ಕೇಂದ್ರ ಸ್ಥಾಪಿಸಲು ಸಹಕಾರ ನೀಡಿದಂತಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜೋಯಿಡಾ ಘಟಕ ಆರೋಪಿಸಿದೆ.
ಜೋಯಿಡಾ ಎಬಿವಿಪಿ ಘಟಕದ ಕಾರ್ಯದರ್ಶಿ ಸಂತೋಷ ಮಠಪತಿ ತಹಸೀಲ್ದಾರ್ ಮುಖೇನ ರಾಜ್ಯಪಾಲರಿಗೆ ಮನವಿ ಅರ್ಪಿಸಿ ಮಾತನಾಡಿ, ಬಿಜೆಪಿ ಸರ್ಕಾರದ ಈ ಕ್ರಮವನ್ನು ಬಲವಾಗಿ ಖಂಡಿಸಿ, ರಾಜ್ಯಪಾಲರು ಇಂತಹ ವಿವಿಗಳಿಗೆ ಮಾನ್ಯತೆ ನೀಡಲು ಅಂಕಿತ ಹಾಕಬಾರದೆಂದು ಒತ್ತಾಯಿಸಿದರು.
ಖಾಸಗಿ ವಿವಿಗಳು ಶುಲ್ಕ ಹೆಚ್ಚಿಸಿದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಖಾಸಗಿ ವಿವಿಗಳಿಗೆ ನೀಡಿರುವ ರು. ಕೋಟ್ಯಂತರ ಅನುದಾನ ಭ್ರಷ್ಟಾಚಾರವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ದುಡ್ಡು ಕೊಟ್ಟರೆ ವಿವಿಗಳ ಸರ್ಟಿಫಿಕೇಟ್ ಸಿಗುತ್ತಿರುವಾಗ, ಖಾಸಗಿ ವಿವಿಗಳ ಸಿಂಡಿಕೇಟ್‌ನಲ್ಲಿ ಎಂಎಲ್‌ಎ, ಎಂಎಲ್‌ಸಿಗಳನ್ನು ನೇಮಿಸಕೂಡದು. ಭ್ರಷ್ಟ ಕುಲಪತಿಗಳ ಕುರಿತಾದ ತನಿಖಾ ವರದಿ ಬಹಿರಂಗ ಪಡಿಸಬೇಕು. ಸರ್ಕಾರದ ವಿವಿಗಳಲ್ಲಿರುವ ಸಿಬ್ಬಂದಿ ಕೊರತೆ, ತಾಂತ್ರಿಕ ಸಮಸ್ಯೆಗಳು, ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ಖಾಸಗಿ ವಿವಿಗಳಿಗೆ ಕೊಡಮಾಡುವ ವಿವಿ ಮಾನ್ಯತೆಗೆ ಅಂಕಿತ ಹಾಕಬಾರದೆಂದು ರಾಜ್ಯಪಾಲರಿಗೆ ಮನವಿಯಲ್ಲಿ ಒತ್ತಾಯಿಸಿದೆ.
ಸಂಘಟನೆ ಪ್ರಮುಖರಾದ ಸಹಕಾರ್ಯದರ್ಶಿ ಪ್ರಶಾಂತ ಬಸಿ, ಗಣರಾಜ, ಕಾಳು, ರತನ, ಅನಿಲ, ಮಾನಸಿಂಗ, ಮಂಜುನಾಥ ಕಾನಕತ್ತಿ ಇದ್ದರು.
ಮುಂಡಗೋಡ: ಪ್ರತಿಭಟನೆ
ರಾಜ್ಯದಲ್ಲಿ 22 ಖಾಸಗಿ ವಿಶ್ವ ವಿದ್ಯಾಲಯ ಪ್ರಾರಂಬಿಸಲು ಅನುಮತಿ ನೀಡಿರುವ ಕ್ರಮವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಹಸೀಲ್ದಾರ ಕಚೇರಿಗೆ ತೆರಳಿ ಮನವಿ ಅರ್ಪಿಸಿತು. ಇತ್ತೀಚಿನ ಅಧಿವೇಶನದಲ್ಲಿ ಖಾಸಗಿ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆದಿದ್ದರಿಂದ ರಾಜ್ಯದಲ್ಲಿ ಖಾಸಗಿ ವಿವಿಗಳಿಗೆ ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಪೂರ್ಣ ಸಹಕಾರ ನೀಡಿದಂತಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ಕಾಪಾಡಲು ಖಾಸಗಿ ವಿವಿಗಳಿಗೆ ಇಷ್ಟೊಂದು ಪ್ರಮಾಣದ ಅವಕಾಶ ನೀಡಿರುವ ಸರ್ಕಾರದ ಕ್ರಮವನ್ನು ಖಂಡಿಸಿದರು. ಸರಿಯಾಗಿ ಚರ್ಚಿಸದೆ ವಿಧಾನ ಮಂಡಲದಲ್ಲಿ ಮಸೂದೆಗೆ ಅನುಮತಿ ನೀಡಿರುವುದು ಸೂಕ್ತವಾದ ಕ್ರಮವಲ್ಲ. ಬಹುತೇಕ ಖಾಸಗಿ ವಿವಿಗಳು ಹಣ ಮಾಡುವ ಉದ್ದೇಶದಿಂದ ಪ್ರಾರಂಭವಾಗಿವೆ. ಇಂತಹ ಅರ್ಹತೆ ಇಲ್ಲದ ಖಾಸಗಿ ವಿವಿಗಳಿಗೆ ರಾಜ್ಯಪಾಲರು ಅಂತಿಮ ಅಂಕಿತ ಹಾಕಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಹೆಚ್ಚಿನ ಶುಲ್ಕ ವಸೂಲಿ ಖಂಡಿಸಿ ಪ್ರತಿಭಟನೆ
ಶಿರಸಿ: ಹಳೆ ವಿದ್ಯಾರ್ಥಿಗಳ ಸಂಘದ ಹೆಸರಿನಲ್ಲಿ ಸೆಮಿಸ್ಟರ್ ಒಂದಕ್ಕೆ ರು. 250 ವಿದ್ಯಾರ್ಥಿಗಳಿಂದ ಆಕರಿಸುತ್ತಿರುವ ಕರ್ನಾಟಕ ವಿ.ವಿ ಧಾರವಾಡ ಇದರ ಕ್ರಮವನ್ನು ವಿರೋಧಿಸಿ ನಗರದ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದ ಹೆಸರಿನಲ್ಲಿ ಸೆಮಿಸ್ಟರ್‌ಗೆ ರು. 250 ವಿಧಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ವರ್ಷವೊಂದಕ್ಕೆ ರು. 500 ಹಾಗೂ ಪದವಿ ಶಿಕ್ಷಣದ ಸಂದರ್ಭದಲ್ಲಿ 6 ಸೆಮಿಸ್ಟರ್‌ಗಳಿಂದ ರು. 1500 ತುಂಬಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹಳೆ ವಿದ್ಯಾರ್ಥಿಗಳ ಸಂಘಕ್ಕಾಗಿ ವಿದ್ಯಾರ್ಥಿಗಳಿಂದ ಹಣವನ್ನು ಆಕರಿಸುವುದು ಸರಿಯಲ್ಲ. ಆರ್ಥಿಕವಾಗಿ ಕೆಳಮಟ್ಟದಲ್ಲಿರುವ ವಿದ್ಯಾರ್ಥಿಗಳು ಇದರಿಂದ ತೀವ್ರ ತೊಂದರೆ ಅನುಭವಿಸಲಿದ್ದಾರೆ ಎಂದು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಸೆಮಿಸ್ಟರ್ ಪರೀಕ್ಷೆಗಳ ಸಲುವಾಗಿ 8ನೇ ತಾರೀಕು ಪ್ರವೇಶಪತ್ರದ ಫಾರಂಗಳನ್ನು ತುಂಬಲು ಕೊನೆ ದಿನವಾಗಿದೆ. ಈ ಸಂದರ್ಭದಲ್ಲಿಯೇ ಕವಿವಿ ಹಳೆ ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ಹಣ ಆಕರಿಸುತ್ತಿರುವುದನ್ನು ವಿರೋಧಿಸಿದ ವಿದ್ಯಾರ್ಥಿಗಳು ಕವಿವಿ ಇದನ್ನು ಕೈಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.