ರಂಗಭೂಮಿಯಿಂದ ವಿದ್ಯಮಾನ ವಿಮರ್ಶೆ
ಯಲ್ಲಾಪುರ: ಸಮಾಜದ ಜನರ ನಡುವೆ ಕಳಚುತ್ತಿರುವ ಸಾಂಸ್ಕೃತಿಕ ಕೊಂಡಿ ಬೆಸೆದು, ನಮ್ಮೆಲ್ಲರಲ್ಲೂ ಹೆಚ್ಚುತ್ತಿರುವ ಸಂಕೀರ್ಣತೆಗಳ ಅರಿವು ಮೂಡಿಸಿ, ನೆರವು ನೀಡುವ ಮಹಾತ್ಕಾರ್ಯಗಳನ್ನು ಪುರಾಣ ಸಾಹಿತ್ಯ, ರಂಗಭೂಮಿಗಳು ತಮ್ಮ ಕ್ರಿಯೆ ಮೂಲಕ ನಿರ್ವಹಿಸುತ್ತವೆ ಎಂದು ಮಂಚಿಕೇರಿ ರಂಗ ಸಮೂಹದ ಅಧ್ಯಕ್ಷ ರಾಮಕೃಷ್ಣ ಭಟ್ಟ ಧುಂಡಿ ಹೇಳಿದರು.
ಅವರು ಶನಿವಾರ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ ಏರ್ಪಡಿಸಿದ್ದ ಸಮಾರಂಭದಲ್ಲಿ ಸೀತಾರಾಮ ಹೆಗಡೆ ನಾಯಕನಕೆರೆ ರಚಿಸಿದ 'ಪತಿವ್ರತಾ ಮಹಿಮೆ' ಪೌರಾಣಿಕ ನಾಟಕ ಲೋಕಾರ್ಪಣೆ ಮಾಡಿ, ಮಾತನಾಡಿದರು. ಬದುಕಿನ ಸಂದರ್ಭಗಳಲ್ಲಿ ಸಂಭವಿಸುವ ಸಿಟ್ಟು-ಸೆಡವುಗಳೆಲ್ಲ ನಮ್ಮೊಂದಿಗೆ ಉಳಿಯಲಾರವು. ಆದರೆ ಅವುಗಳನ್ನೆಲ್ಲ ಹೊರತಾಗಿಸಿ, ಮರೆತು ನಾವೇ ರಚಿಸುವ ಸಾಹಿತ್ಯ-ಸಂಸ್ಕೃತಿಗಳು ಸಾವಿಲ್ಲದ ನಮ್ಮತನದ ಪ್ರತೀಕ. ಸಮಕಾಲೀನ ಸಂಕೀರ್ಣತೆ ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ವಿಮರ್ಶಿಸಿ, ವಿವರಿಸುವುದೇ ರಂಗಭೂಮಿಯ ಉದ್ದೇಶ ಎಂದು ಧುಂಡಿ ವಿವರಿಸಿದರು.
ಧಾರವಾಡದ ಹೈಕೋರ್ಟ್ ಪೀಠದ ನ್ಯಾಯವಾದಿ ಸುಬ್ರಾಯ ಯಾಜಿ ಮಾತನಾಡಿ, ಪರಂಪರಾಗತ ಕಲೆ ಮತ್ತು ಸಂಸ್ಕೃತಿಗಳು ನಶಿಸಲು ಇಂದಿನ ದೃಶ್ಯ ಮಾಧ್ಯಮಗಳೇ ಕಾರಣ ಎಂದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಘಟಕಾಧ್ಯಕ್ಷ ಶ್ರೀರಂಗ ಕಟ್ಟಿ ಮಾತನಾಡಿ, ಸಮಷ್ಟಿ ಪ್ರಜ್ಞೆಯೊಂದಿಗೆ ನಾವೆಲ್ಲರೂ ಕನ್ನಡದ ಕೈಂಕರ್ಯ ಮಾಡೋಣ. ಕಸಾಪ ಘಟಕ ಈ ಹಿನ್ನೆಲೆಯಲ್ಲಿ ಅನೇಕ ಯೋಜನೆ ರೂಪಿಸಿದೆ. ತಾಲೂಕಿನ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿ ಸಾಹಿತ್ಯ ಬಳಗ ರಚಿಸಲು ಉದ್ದೇಶಿಸಲಾಗಿದೆ. 'ಮನೆಯಂಗಳದಲ್ಲಿ ಸಾಹಿತ್ಯ' ಎಂಬ ವಿನೂತನ ಕಾರ್ಯಕ್ರಮ ಮಾ. 23ರಂದು ಆರಂಭವಾಗಲಿದೆ ಎಂದು ವಿವರಿಸಿದರು.
ಕೃತಿಕಾರ ಸೀತಾರಾಮ ಹೆಗಡೆ ಮತ್ತು ಸೀತಾ ಹೆಗಡೆ ದಂಪತಿಯನ್ನು ಸನ್ಮಾನಿಸಲಾಯಿತು. ಬೀರಣ್ಣ ನಾಯ್ಕ ಮೊಗಟಾ, ನಾರಾಯಣ ನಾಯಕ, ದತ್ತಾ ರೇವಣಕರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

