ಕಾಂಗ್ರೆಸ್ಗೆ ಜಯಭೇರಿ
ಶಿರಸಿ: ಜಿಲ್ಲೆಯ 11 ಸ್ಥಳೀಯ ಸಂಸ್ಥೆಗಳಲ್ಲಿ 10ರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಭಟ್ಕಳ ಪುರಸಭೆ ಮಾತ್ರ ತಂಜೀಂ ಕೈಯಲ್ಲಿರುವುದರಿಂದ ಅದನ್ನು ಹೊರತು ಪಡಿಸಿ ಉಳಿದ ಎಲ್ಲ ಕಡೆಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಭೀಮಣ್ಣ ಟಿ. ನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.
'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಭಟ್ಕಳ ಪುರಸಭೆಯಲ್ಲಿ ತಂಜೀಂ ಜೊತೆಗೆ ಮಾತುಕತೆ ಮೂಲಕ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆ ಕಾರಣದಿಂದ ಅಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ತಂಜೀಂ ಸಹೋದರರ ವಿಶ್ವಾಸಕ್ಕೆ ಬೆಲೆಕೊಟ್ಟು ಈ ರೀತಿ ಮಾಡಲಾಗಿದೆ ಎಂದರು.
ಜಿಲ್ಲೆಯಾದ್ಯಂತ ಕಾಂಗ್ರೆಸ್ ಪರ ಅಲೆಯೆದ್ದಿದೆ. ಬಿಜೆಪಿ ದುರಾಡಳಿತ, ಭ್ರಷ್ಟಾಚಾರ, ನೀಡಿದ ಭರವಸೆಗಳನ್ನು ಈಡೇರಿಸದೇ ಇರುವುದು ಕಾಂಗ್ರೆಸ್ಸಿಗೆ ವರವಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರ ಅನೇಕ ಯೋಜನೆಗಳ ಮೂಲಕ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಆದರೆ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಆಡಳಿತದಿಂದ ಯಾವುದೇ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿದ್ದರೂ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಹಿಂದುಳಿದಿದ್ದೇವೆ ಎಂದು ಭೀಮಣ್ಣ ನಾಯ್ಕ ಹೇಳಿದರು.
ಉತ್ಸಾಹ ಇಮ್ಮಡಿ: ದಾಂಡೇಲಿ ನಗರಸಭೆ ಹಾಗೂ ಹಳಿಯಾಳ ಪಪಂನಲ್ಲಿ ಈ ಬಾರಿ ಸಂಪೂರ್ಣ ಯಶಸ್ಸು ನಮ್ಮದಾಗಲಿದೆ. ನಮ್ಮ ನಾಯಕರಾಗಿರುವ ಆರ್.ವಿ. ದೇಶಪಾಂಡೆಯವರೇ ಹೆಚ್ಚಿನ ಹೊಣೆ ವಹಿಸಿ ಕೆಲಸ ಮಾಡುತ್ತಿರುವುದರಿಂದ ಗೆಲುವು ನಮ್ಮದಾಗಲಿದೆ. ಹಳಿಯಾಳ, ದಾಂಡೇಲಿಯಲ್ಲಿ ಜೆಡಿಎಸ್ ತಮ್ಮ ನೇರ ಎದುರಾಳಿಯಾಗಿದೆ. ಕಾಂಗ್ರೆಸ್ನ ಜನಪರ ಧೋರಣೆಯಿಂದಾಗಿ ಅಲ್ಲಿಯ ಮತದಾರರು ಕಾಂಗ್ರೆಸ್ಗೆ ಆಶೀರ್ವದಿಸಲಿದ್ದಾರೆ. ಕಾರವಾರ ನಗರಸಭೆಯಲ್ಲಿ ಈ ಬಾರಿ ಬಹುಮತದೊಂದಿಗೆ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಕಾರವಾರದಲ್ಲಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿದೆ. ಬಿಜೆಪಿ ನೇರ ಎದುರಾಳಿಯಾಗಿದ್ದರೂ ಗೆಲುವಿಗೆ ಯಾವುದೇ ತೊಡಕಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕುಮಟಾ ಪುರಸಭೆ ಚುನಾವಣೆಯಲ್ಲಿ ನಮ್ಮ ಎದುರಾಳಿ ಜೆಡಿಎಸ್ ಆಗಿದೆ. ಆದರೆ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ಅವಿರತ ಪರಿಶ್ರಮ ಕಾಂಗ್ರೆಸ್ಸಿಗೆ ಶ್ರೀರಕ್ಷೆಯಾಗಿದೆ. ರಾಷ್ಟ್ರೀಯ ಪಕ್ಷ ಮತ್ತು ಯುಪಿಎ ಸರ್ಕಾರ ಬಡವರ, ಕೆಳವರ್ಗಗಳವರಿಗೆ ನೀಡುತ್ತಿರುವ ವಿಶೇಷ ಯೋಜನೆಗಳು ಜನ ಕಾಂಗ್ರೆಸ್ನತ್ತ ಮುಖ ಮಾಡಲು ಕಾರಣವಾಗಿದೆ. ಅಂಕೋಲಾ ಮತ್ತು ಹೊನ್ನಾವರ ಪಪಂಗಳಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಹೊನ್ನಾವರದಲ್ಲಿ ಈಗಾಗಲೇ ನಮ್ಮ ಪಕ್ಷದ ಆಡಳಿತವಿತ್ತು. ಜನಪರ ಆಡಳಿತ, ಜನರ ಕಷ್ಟಗಳಿಗೆ ಪಕ್ಷ ಸ್ಪಂದಿಸಿದ್ದನ್ನು ಜನ ಮರೆತಿಲ್ಲ. ಆದ್ದರಿಂದ ಈ ಎರಡು ಪಪಂಗಳು ಕೈ ವಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂಕೋಲಾದಲ್ಲಿ ಬಿಜೆಪಿ ಎದುರಾಳಿಯಾಗಿದ್ದರೂ ನಮ್ಮ ಪಕ್ಷದ ಗೆಲುವಿಗೆ ಆತಂಕಗಳಿಲ್ಲ. ಹೊನ್ನಾವರದಲ್ಲಿ ಈಗಾಗಲೇ ನಾವು ಮುಂಚೂಣಿಯಲ್ಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಬಿಜೆಪಿ ನೇರ ಎದುರಾಳಿ: ಯಲ್ಲಾಪುರದಲ್ಲಿ ಬಿಜೆಪಿ ನಮ್ಮ ನೇರ ಎದುರಾಳಿ. ಅಲ್ಲಿನ ಉತ್ಸಾಹಿಗಳಾದ ಕಾಂಗ್ರೆಸ್ಸಿನ ಎಸ್.ಎಂ. ಹೆಬ್ಬಾರರ ಅವಿರತ ಪ್ರಯತ್ನದಿಂದ ಕಾಂಗ್ರೆಸ್ ಯಲ್ಲಾಪುರ ಪಪಂನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಶತಸ್ಸಿದ್ಧ. ಅಲ್ಲಿಯ ಶಾಸಕರೂ ಬಿಜೆಪಿಯವರಾಗಿದ್ದಾರೆ. ಆದರೂ ಚಿಂತೆಯಿಲ್ಲ. ಆಡಳಿತ ವಿರೋಧಿ ಅಲೆ ನಮ್ಮ ಪರವಾಗಲಿದೆ.
ಮುಂಡಗೋಡ ಪಪಂನಲ್ಲೂ ಹಾಲಿ ಶಾಸಕರ ಜನವಿರೋಧಿ ನೀತಿ ನಮಗೆ ಮುನ್ನಡೆ ತಂದುಕೊಡಲಿದೆ. ಮುಂಡಗೋಡ ಪರಿಸ್ಥಿತಿ ಭಿನ್ನವಾಗಿದೆ. ಆದಾಗ್ಯೂ ಕಾಂಗ್ರೆಸ್ ಪರ ಅಲೆ ಕೆಲಸ ಮಾಡಲಿದೆ. ಬಿಜೆಪಿ ಎದುರಾಳಿಯಾಗಿದ್ದರೂ ಕಾಂಗ್ರೆಸ್ ಗೆಲುವಿಗೆ ಅಡ್ಡಿ ಪಡಿಸುವಷ್ಟು ಸುಸ್ಥಿತಿಯಲ್ಲಿಲ್ಲ. ಬಿಜೆಪಿ ಗೊಂದಲದ ಗೂಡಾಗಿದೆ. ಈ ಅಂಶವೂ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ನೆರವಾಗಲಿದೆ ಎಂದು ಜಿಲ್ಲಾಧ್ಯಕ್ಷರು ಪ್ರತಿಯೊಂದು ತಾಲೂಕಿನ ಕುರಿತಂತೆ ಪಕ್ಷದ ಪರಿಸ್ಥಿತಿಯನ್ನು ವಿವರಿಸಿದರು.
ಸಿದ್ದಾಪುರ ಪಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೋರ್ವರು ಅವಿರೋಧ ಆಯ್ಕೆಯಾಗಿದ್ದಾರೆ. ಆದರೆ ನಮ್ಮ ಪಕ್ಷದ ಅಭ್ಯರ್ಥಿಯನ್ನು ಹೆದರಿಸಿ, ಬೆದರಿಸಿ, ದಬ್ಬಾಳಿಕೆಯಿಂದ ನಾಮಪತ್ರ ಹಿಂಪಡೆಯುವಂತೆ ಮಾಡಿದರು ಎಂದು ಆರೋಪಿಸಿದರು.
ಸಚಿವರಿಂದ ಕ್ಷುಲ್ಲಕ ರಾಜಕಾರಣ: ಶಿರಸಿ ನಗರಸಭೆ ಮತ್ತು ಸಿದ್ದಾಪುರ ಪಪಂದಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾದ ಸದಸ್ಯರಿರುವ ವಾರ್ಡ್ಗಳಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಈ ಎಲ್ಲ ವಾರ್ಡ್ಗಳನ್ನು ತೀವ್ರ ನಿರ್ಲಕ್ಷಿಸಲಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕ ಅನುದಾನ ನೀಡಿಲ್ಲ. ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಇಂತಹ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಭೀಮಣ್ಣ ನಾಯ್ಕ ಆರೋಪಿಸಿದರು. ಶಿರಸಿ ನಗರಸಭೆಯ 31 ವಾರ್ಡ್ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ನಮ್ಮ ಪಕ್ಷದ ಧುರೀಣರಾದ ಆರ್.ವಿ. ದೇಶಪಾಂಡೆಯವರ ಮಧ್ಯ ಒಳ ಒಪ್ಪಂದವಿದೆ ಎನ್ನುವ ವದಂತಿ ಸತ್ಯಕ್ಕೆ ದೂರವಾದದ್ದು. ಇದರಲ್ಲಿ ಯಾವುದೇ ಹುರುಳಿಲ್ಲ. ಕೇವಲ ಊಹಾಪೋಹ ಎಂದು ಹೇಳಿಕೊಂಡ ಭೀಮಣ್ಣ ನಾಯ್ಕ ಜಿಲ್ಲೆಯಲ್ಲಿ ಪಕ್ಷದ ಗೆಲುವಿಗೆ ನಮ್ಮ ಪ್ರಣಾಳಿಕೆಯೂ ಕಾರಣವಾಗಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

