ಅಣಲೇಬೈಲ್ ಗ್ರಾಪಂಗೆ ಮುತ್ತಿಗೆ
ಕನ್ನಡಪ್ರಭ ವಾರ್ತೆ, ಶಿರಸಿ, ಮಾ. 2
ಸಿದ್ದಾಪುರ ತಾಲೂಕಿನ ಬಾಳೆಕೊಪ್ಪ ಗ್ರಾಮದಲ್ಲಿ ಭಾನುವಾರದ ಧಾರ್ಮಿಕ ಕಾರ್ಯಕ್ರಮಕ್ಕೆ ಸಾರ್ವಜನಿಕ ಸ್ಥಳದಲ್ಲಿ ಚಪ್ಪರ ಹಾಕಿ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ನೂರಾರು ಜನರು ಅಣಲೇಬೈಲ್ ಗ್ರಾಪಂಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆದಿದೆ.
ಅಣಲೇಬೈಲ್ ಗ್ರಾಪಂ ವ್ಯಾಪ್ತಿಯಲ್ಲಿರುವ ಬಾಳೆಕೊಪ್ಪ ಗ್ರಾಮದ ಗೋಳಿಮಕ್ಕಿ ಸರ್ವೇ ನಂ. 217ರಲ್ಲಿ ವಾರ್ಷಿಕ ಸತ್ಯನಾರಾಯಣ ವ್ರತ ಆಚರಣೆಗಾಗಿ ಚಪ್ಪರ ನಿರ್ಮಿಸುವುದಕ್ಕಾಗಿ ಗ್ರಾಪಂಕ್ಕೆ ಪರವಾನಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಕುರಿತಂತೆ ಗೋಳಿಮಕ್ಕಿ ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘ ತಕರಾರು ಅರ್ಜಿ ಸಲ್ಲಿಸಿದ್ದರಿಂದಾಗಿ ಪಂಚಾಯಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಪರವಾನಿಗೆ ನೀಡಲಿಲ್ಲ. ಇದನ್ನು ವಿರೋಧಿಸಿ ನೂರಾರು ಜನರು ಬೆಳಗ್ಗೆಯಿಂದ ಸಂಜೆವರೆಗೂ ಮುತ್ತಿಗೆ ಧರಣಿ ಮುಂದುವರಿಸಿದ್ದರು.
ಗೋಳಿಮಕ್ಕಿಯಲ್ಲಿರುವ ಹಾಲಿನ ಸಂಘದಲ್ಲಿ ಸ್ಥಳೀಯ 300 ಮನೆಗಳನ್ನು ನಿರ್ಲಕ್ಷಿಸಲಾಗಿದೆ. ಆದರೆ ಹಾಲಿನ ಡೇರಿಯ ಕಟ್ಟಡಕ್ಕೆ ಈ ಊರಿಗೆ ಸಂಬಂಧಪಟ್ಟ ಸಾರ್ವಜನಿಕ ಸ್ಥಳದಲ್ಲಿ ಡೇರಿ ಕಟ್ಟಡ ಕಟ್ಟಲು ಮುಂದಾಗುತ್ತಿದ್ದಂತೆ ಬಹುಸಂಖ್ಯಾತ ಊರಿನ ಜನರು ಸಿದ್ದಾಪುರದ ನ್ಯಾಯಾಲಯದ ಮೊರೆ ಹೋಗಿದ್ದರು. 1996ರಲ್ಲಿ ಸಿದ್ದಾಪುರ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಈ ವರೆಗೆ ವಿವಾದಿತ ಈ ಸ್ಥಳದಲ್ಲಿ ಯಾವುದೇ ಇಮಾರತು ಕಟ್ಟಲಾಗಿಲ್ಲ.
ನೆರಳಿನ ವ್ಯವಸ್ಥೆಯಿಲ್ಲ: ಸಾರ್ವಜನಿಕ ಸ್ಥಳವಾದ ಈ ಜಾಗದಲ್ಲಿ ಧಾರ್ಮಿಕ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಹುದಾಗಿದೆ. ಅದೇ ರೀತಿ ಪ್ರತಿ ವರ್ಷವೂ ಈ ಸ್ಥಳದಲ್ಲಿ ಅಶ್ವತ್ಥ ಮರಕ್ಕಿರುವ ಬೀರಪ್ಪ ದೇವರ ಕಟ್ಟೆಯಲ್ಲಿ ಸಾರ್ವಜನಿಕ ಸತ್ಯನಾರಾಯಣ ವ್ರತ, ಮತ್ತಿತರ ಧಾರ್ಮಿಕ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಮಾ. 3ರಂದು ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದರೂ, ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲು ಆಸ್ಪದ ನೀಡಲಾಗಿಲ್ಲ. ಸುಡುವ ಬಿಸಿಲಿನಲ್ಲೇ ಮಹಿಳೆಯರು, ಮಕ್ಕಳು, ವಯೋವೃದ್ಧರು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯರ ವಿರೋಧ ತೀವ್ರಗೊಳ್ಳುತ್ತಿದ್ದಂತೆಯೇ ಸಿದ್ದಾಪುರ ತಹಸೀಲ್ದಾರರು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಯಾವುದೇ ಅಂತಿಮ ತೀರ್ಮಾನ ನೀಡದೆ ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿ ಬರಿಗೈಯಲ್ಲಿ ವಾಪಾಸಾದರು. ತಕರಾರು ನೀಡಿರುವ ಗೋಳಿಮಕ್ಕಿ ಹಾಲಿನ ಡೇರಿಗೆ ಸಂಬಂಧಪಟ್ಟ ಪದಾಧಿಕಾರಿಗಳನ್ನು ಕರೆಸುವಲ್ಲಿ ಅಧಿಕಾರಿಗಳು ವಿಫಲಗೊಂಡರು. ಇದರಿಂದಾಗಿ ಪ್ರತಿಭಟನಾಕಾರರು ಯಾವುದೇ ಸಂಧಾನಕ್ಕೂ ಸಮ್ಮತಿ ನೀಡಲಿಲ್ಲ. ಪೊಲೀಸ್ ಬಿಗು ಬಂದೋಬಸ್ತ್ ಮಾಡಲಾಗಿತ್ತು. ಸಿದ್ದಾಪುರ ಸಿಪಿಐ ಸ್ಥಳಕ್ಕಾಗಮಿಸಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡುವುದಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಗ್ರಾಪಂ ಅಧ್ಯಕ್ಷೆ ಕಮಲಾ ಗಣಪತಿ ಗೌಡ, ಉಪಾಧ್ಯಕ್ಷ ಶ್ರೀಧರ ಹೆಗಡೆಯವರ ಸಂಧಾನ ಮಾತುಕತೆ ವಿಫಲಗೊಂಡಿತು. ಈಗಿರುವ ಹಾಲಿನ ಡೇರಿಯ ಸ್ಥಳ ವಿವಾದದಲ್ಲಿದೆ. ಅದನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದಲ್ಲಿ ಹಾಲಿನ ಕೇಂದ್ರಕ್ಕೆ ಬೀಗ ಹಾಕಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

