ವಿದ್ಯುತ್ ಸಮಸ್ಯೆ ಬಗೆಹರಿಸಲು ಕ್ರಮ
ಕನ್ನಡಪ್ರಭ ವಾರ್ತೆ, ಕಾರವಾರ, ಜ. 28
ತಾಲೂಕಿನ ಚಿತ್ತಾಕೂಲ, ಮಲ್ಲಾಪುರಗಳಲ್ಲಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಹೆಸ್ಕಾಂ ಅಧಿಕಾರಿ ಅವರಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ತಾಪಂ ಅಧ್ಯಕ್ಷೆ ಆರತಿ ಬಾನಾವಳಿಕರ ತಿಳಿಸಿದರು.
ಸೋಮವಾರ ತಾಪಂ ಸಭಾಭವನದ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಚಿತ್ತಾಕೂಲ, ಮಲ್ಲಾಪುರದ ಹಲವು ಕಡೆ 11ಕೆವಿ ಲೈನ್ಗಳು ಅಪಾಯ ಮಟ್ಟದಲ್ಲಿದೆ. ಜಾನುವಾರುಗಳು ವಿದ್ಯುತ್ ತಗಲುವಿಕೆಯಿಂದ ಬಲಿಯಾಗಿದೆ. ಹಳೆಯ ವಿದ್ಯುತ್ ಮಾರ್ಗ, ಕಂಬಗಳನ್ನು ಬದಲಾಯಿಸಲು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಕೆಲವು ಕಡೆ ಲೋ ವೋಲ್ಟೇಜ್ ಸಮಸ್ಯೆ ಇದ್ದು, ಟ್ರಾನ್ಸ್ಫಾರ್ಮಗಳನ್ನು ಬದಲಿಸಲು ಮನವರಿಕೆ ಮಾಡಲಾಗಿದೆ. ಕಾಮಗಾರಿಗಳಿಗೆ ಟೆಂಡರ್ ಸಹ ಆಗಿದ್ದು ಸದ್ಯದಲ್ಲಿಯೇ ದುರಸ್ತಿ ಕಾರ್ಯ ಕೈಗೊಂಡು ಸಮರ್ಪಕ ವಿದ್ಯುತ್ ನೀಡಲು ಹೆಸ್ಕಾಂ ಅಧಿಕಾರಿ ಒಪ್ಪಿದ್ದಾರೆ ಎಂದು ತಿಳಿಸಿದರು.
ಬಸ್ ಸ್ಥಗಿತ: ಮಾಜಾಳಿಗೆ ಬಸ್ ಸ್ಥಗಿತವಾಗಿದ್ದು ಸಾರ್ವಜನಿಕರು ಸೇರಿದಂತೆ ಶಾಲಾ ಮಕ್ಕಳಿಗೆ ತೊಂದರೆಯಾಗಿದೆ ಎಂದು ಸಭೆಯಲ್ಲಿ ಸದಸ್ಯರು ದನಿಗೂಡಿಸಿದಾಗ, ಕೆಎಸ್ಆರ್ಟಿಸಿ ಸಿಬ್ಬಂದಿ, ಬಸ್ ಸೇವೆ ಒದಗಿಸಲು ಬದ್ಧ. ಡಿಪೋ ಮ್ಯಾನೇಜರ್ ಡಿಸೇಲ್ ದರ ಏರಿಕೆಯಿಂದ ಹೊರಗೆ ಮೀಟಂಗ್ ಹೋಗಿದ್ದಾರೆ. ಅವರು ಬಂದ ತಕ್ಷಣ ಕ್ರಮ ಕೈಗೊಳ್ಳಲು ಹೇಳುತ್ತೇನೆ ಎಂದು ತಿಳಿಸಿದಾಗ, ಸಭೆಯಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಪ್ರತಿ ಸಲವೂ ಸಭೆಗೆ ಡಿಪೋ ಮ್ಯಾನೇಜರ್ ಬರುವುದಿಲ್ಲ. ಜನರ ಸಮಸ್ಯೆಗಳನ್ನು ಆಲಿಸುವುದಿಲ್ಲ. ಬೇಜವಾಬ್ದಾರಿ ವರ್ತನೆ ತೋರುತ್ತಾರೆ. ಅವರಿಗೆ ಅವರ ಕೆಲಸವೇ ಹೆಚ್ಚಿನದು ಎಂದು ತಾಪಂ ಅಧ್ಯಕ್ಷೆ ಹೇಳಿದಾಗ ಸದಸ್ಯರು ಸಹಮತ ವ್ಯಕ್ತ ಪಡಿಸಿದರು.
ಸರಿಯಾದ ಕ್ರಿಯಾಯೋಜನೆಯಾಗಿಲ್ಲ: ಚೆಂಡಿಯಾ ಅಂಗನವಾಡಿಗೆ ಕಟ್ಟಡ ಸಮಸ್ಯೆಯಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ಇಲ್ಲಿಯ ತನಕ ಸರಿಯಾದ ಕ್ರಿಯಾಯೋಜನೆ ತಯಾರಿಸಿಲ್ಲ ಎಂದು ಸದಸ್ಯ ಜೋಗಿ ಗುನಗಿ ಆಕ್ಷೇಪಿಸಿದಾಗ, ಶಿಶು ಅಭಿವೃದ್ಧಿ ಅಧಿಕಾರಿ ರಾಥೋಡ್ ಈಗಾಗಲೇ ಅಂಗನವಾಡಿ ಕಟ್ಟಡ ಹಾಗೂ ಇತರ ದುರಸ್ತಿ ಕಾರ್ಯಗಳಿಗೆ ಸರ್ಕಾರದಿಂದ # 5 ಲಕ್ಷ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಅಂಗನವಾಡಿ ಕೇಂದ್ರಗಳಾದ ಹೊಟೆಗಾಳಿ, ಚೆಂಡಿಯಾ, ಕೆರವಡಿ, ಅಸ್ನೋಟಿ, ಕಿನ್ನರ್, ಹಣಕೋಣಗಳಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಬಿಪಿಎಲ್ ಕಾರ್ಡದಾರರಿಗೆ ಕಳೆದ ಎರಡು ತಿಂಗಳಿನಿಂದ ಪಡಿತರ ಆಹಾರ ಸಿಗುತ್ತಿಲ್ಲ. ಹಲವು ಕಡೆ ಒನಲೈನ್ ಪಡಿತರ ವ್ಯವಸ್ಥೆಯೂ ಜಾರಿಯಾಗಿಲ್ಲ. ಫಲಾನುಭವಿಗಳು ತೊಂದರೆಗೆ ಒಳಗಾಗಿದ್ದಾರೆ ಎಂದು ಸದಸ್ಯ ವಿಷ್ಣು ರಾಣೆ ಗಮನ ಸೆಳೆದರು. ತಾಪಂ ಅಧ್ಯಕ್ಷೆ, ತಾಪಂನಲ್ಲಿ ಎಂಜನಿಯರ್ ಕೊರತೆ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳು ನಿಧಾನ ಗತಿಯಲ್ಲಿ ಸಾಗುತ್ತಿದೆ. ಪರ್ಯಾಯ ವ್ಯವಸ್ಥೆಗೆ ಈಗಾಗಲೇ ಜಿಪಂಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಭೆಗೆ ತಿಳಿಸಿದರು. ತಾಪಂ ಪ್ರಭಾರಿ ಕಾರ್ಯನಿರ್ವಹಣಾ ಅಧಿಕಾರಿ ತಾನಾಜಿ, ತಾಪಂ ಸದಸ್ಯರಾದ ದೀಪಾ ಪೆಡ್ನೇಕರ್, ಜಯಮಾಲಾ ಕೊಳಂಬಕರ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

